ರಾಮನಗರ ಜಿಲ್ಲಾಸ್ಪತ್ರೆ ಲೋಕಾರ್ಪಣೆಯಲ್ಲೂ ಮುಂದುವರೆದ ರಾಜಕೀಯ ನಾಯಕರ ಕ್ರೆಡಿಟ್ ವಾರ್
ಇಂದು ರಾಮನಗರ ಜಿಲ್ಲಾಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಈ ಸಮಯದಲ್ಲಿ ರಾಜಕೀಯ ನಾಯಕರು ಕ್ರೆಡಿಟ್ ವಾರ್ ಮುಂದುವರೆಸಿದ್ದಾರೆ. ಹಾಗಾದರೆ ಕ್ರೆಡಿಟ್ ವಾರ್ ಯಾವ ಪಕ್ಷಗಳ ನಡುವೆ ನಡೆದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಮನಗರ, ಮಾರ್ಚ್, 02: ವಿಧಾನಸಭಾ ಚುನಾವಣಾ ಸಮೀಪಿಸುತ್ತಿದ್ದಂತೆ ರಾಮನಗರ ಜಿಲ್ಲೆಯ ಪ್ರತಿ ಕಾರ್ಯಕ್ರಮವಾಗಳಲ್ಲೂ ಕ್ರೆಡಿಟ್ ಫೈಟ್ ನಿರಂತರವಾಗಿ ಮುಂದುವರೆದಿದೆ. ಜೊತೆಗೆ ಪ್ರೋಟೋಕಾಲ್ ವಿಚಾರಕ್ಕೆ ರಾಜಕೀಯ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಹಾಗೆಯೇ ಇಂದು ರಾಮನಗರದ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎನ್ನುವ ಅರೋಪ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನಿತಾ ಕುಮಾರಸ್ವಾಮಿ ಆಗಮಿಸುವ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್ ನಾರಾಯಣ್ ಹಾಗೂ ಅರೋಗ್ಯ ಸಚಿವ ಕೆ. ಸುಧಾಕರ್ ಜಿಲ್ಲಾಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿದ್ದಾರೆ. ಇವರ ನಡೆಗೆ ಜೆಡಿಎಸ್ ಕಾರ್ಯಕರ್ತರು ಕೆರಳಿ ಕೆಂಡಾಮಂಡಲವಾಗಿದ್ದಾರೆ. ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ಧಿಕ್ಕಾರದ ಘೋಷಣೆಯನ್ನು ಸಹ ಕೂಗಿದರು.
ಇನ್ನು ಜಿಲ್ಲಾಸ್ಪತ್ರೆ ಉದ್ಘಾಟನೆ ಸ್ಥಳದಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರೂ ಕೂಡ ಬಿಜೆಪಿ ತಮ್ಮ ಪಕ್ಷದ ಪರ ಘೋಷಣೆ ಕೋಗಿದರು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಮಧ್ಯಪ್ರದೇಶಿಸಿ ಎರಡೂ ಪಕ್ಷದ ಕಾರ್ಯಕರ್ತರನ್ನ ಸಮಾಧಾನಪಡಿಸಿದರು.

ಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ
ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಕೂಡ ಆಕ್ರೋಶ ವ್ಯಕ್ತಪಡಿಸಿದರು. "ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್‌ಗೆ ತರಾಟೆ ತೆಗೆದುಕೊಂಡರು. ನಾನು ಇಲ್ಲಿನ ಸಂಸದನಾಗಿದ್ದೇನೆ. ನನ್ನನ್ನು ಬಿಟ್ಟು ಉದ್ಘಾಟನೆ ಮಾಡಿದ್ದೀರಿ. ಅಲ್ಲದೇ ನಮಗೆ ಸರಿಯಾಗಿ ಆಹ್ವಾನವನ್ನೇ ನೀಡಿಲ್ಲ. ನಿನ್ನೆ ರಾತ್ರಿ ಕಾರ್ಯಕ್ರಮಕ್ಕೆ ಬನ್ನಿ ಅಂತಾರೆ. ಇಲ್ಲಿನ ಮಂತ್ರಿ ಯಾರು? ಯಾರು ಅವನು ಡಿಸಿ, ಏನ್ ರಿ ಪ್ರೋಟೋಕಾಲ್ ನಿರ್ವಹಿಸಿದ್ದೀರಿ," ಎಂದು ಗರಂ ಆದರು. ಈ ವೇಳೆ ಸಚಿವ ಅಶ್ವತ್ಥ್ ನಾರಾಯಣ್ ನಂತರ ಮಾತನಾಡಿ, ನಿಮ್ಮನು ಕರೆದಿದ್ದೀವಲ್ಲಾ, ಇನ್ವಿಟೇಷನ್ ಕೂಡ ಕೊಟ್ಟಿದ್ದಾರೆ. ಜಗಳ ಬೇಡ ಮಾತನಾಡೋಣ ಎಂದು ಡಿ.ಕೆ. ಸುರೇಶ್ ಅವರನ್ನು ಸಮಾಧಾನಪಡಿಸಿದರು.

ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು
ಕಾರ್ಯಕ್ರಮದ ವೇದಿಕೆ ಕೆಳಗೆ ಶಿಷ್ಟಾಚಾರ ವಿಚಾರವಾಗಿ ಗಲಾಟೆ ನಡೆಸಿದ ಮೂರು ಪಕ್ಷದ ಮುಖಂಡರು, ಇದೀಗ ಅದೇ ವೇದಿಕೆ ಮೇಲೆಯೇ ಒಗ್ಗಟ್ಟಿನ ಮಂತ್ರ ಜಪಿಸಿ ಗಮನ ಸೆಳೆದರು. ನಮ್ಮ ನಡುವೆ ಏನೇ ವ್ಯತ್ಯಾಸ ಇದ್ದರೂ ಕೂಡ ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಇದೆ ಎಂದು ಪರಸ್ಪರವಾಗಿ ಒಬ್ಬನ್ನೊಬ್ಬರು ಹೊಗಳಿಕೊಂಡರು.

ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಬೇಡ
ಜಿಲ್ಲಾಸ್ಪತ್ರೆಗೆ ಮೂರು ಪಕ್ಷಗಳ ಕೊಡುಗೆ ಇದೆ. ಆಯಾ ಕಾಲಘಟ್ಟದಲ್ಲಿ ಎಲ್ಲಾ ಸರ್ಕಾರಗಳು ಅಭಿವೃದ್ಧಿಗೆ ಶ್ರಮಿಸಿವೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಹೆಚ್.ಡಿ. ಕುಮಾರಸ್ವಾಮಿಯವರ ಹಾದಿಯಾಗಿ ಸಚಿವ ಅಶ್ವತ್ಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದರು.

ಕ್ರೆಡಿಟ್ ವಾರ್‌ಗೆ ಸಾಕ್ಷಿಯಾದ ಜಿಲ್ಲಾಸ್ಪತ್ರೆ ಉದ್ಘಾಟನೆ
ಒಟ್ಟಾರೆ ರಾಮನಗರದ ನೂತನ ಜಿಲ್ಲಾಸ್ಪತ್ರೆ ಉದ್ಘಾಟನಾ ಸಮಾರಂಭ ಮತ್ತೊಂದು ಸುತ್ತಿನ ಕ್ರೆಡಿಟ್ ವಾರ್‌ಗೆ ಸಾಕ್ಷಿಯಾಗಿದೆ. ಮೂರು ಪಕ್ಷಗಳು ಕೂಡ ತಮ್ಮ ತಮ್ಮ ಕೊಡುಗೆಯನ್ನು ಹೇಳಿಕೊಂಡು ಆಸ್ಪತ್ರೆ ನಿರ್ಮಾಣದ ಶ್ರೇಯಸ್ಸನ್ನು ಪಡೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ನಡೆದ ಹೈಡ್ರಾಮದಿಂದ ಪೊಲೀಸರು ಕೂಡ ತಲೆಕೆಡಿಸಿಕೊಂಡು ವ್ಯಾಪಕ ಭದ್ರತೆ ಕೈಗೊಂಡಿದ್ದರು.












Click it and Unblock the Notifications