ಕುದೂರು ಗಣೇಶ ಮೂರ್ತಿ ತಯಾರಕರ ಸಂಭ್ರಮ ಕಸಿಯಿತೇ ಕೊರೊನಾ?
ರಾಮನಗರ, ಆಗಸ್ಟ್ 18: ಕೊರೊನಾ ವೈರಸ್ ಅನೇಕ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲಿ ಗಣೇಶ ಮೂರ್ತಿ ತಯಾರಕರೂ ಹೊರತಾಗಿಲ್ಲ. ಪ್ರತಿ ವರ್ಷ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಣ್ಣಿನ ಗಣಪತಿ ಮೂರ್ತಿಗಳನ್ನು ನಿರ್ಮಾಣ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಕಲಾವಿದರ ಬದುಕು ಕೂಡ ದುಸ್ತರವಾಗಿದೆ.
Recommended Video
ಕೊರೊನಾ ವೈರಸ್ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚಿದ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಗಣೇಶ ಹಬ್ಬದ ಆಚರಣೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಗಣೇಶ ಮೂರ್ತಿ ತಯಾರಿಸುವುದನ್ನೇ ಪಾರಂಪರಿಕ ಕಸುಬಾಗಿಸಿಕೊಂಡವರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ನಿಷೇಧಿಸಿರುವುದು ಸ್ವಾಗತಾರ್ಹ ನಿರ್ಧಾರ ಎನ್ನಿಸಿದರೂ ಗಣೇಶ ಮೂರ್ತಿಗಳನ್ನು ತಯಾರಿಸಿ ಜೀವನೋಪಾಯಕ್ಕೆ ಒಂದಷ್ಟು ಕಾಸು ಮಾಡಿಕೊಳ್ಳುತ್ತಿದ್ದ ಕಲಾವಿದರ ಮೇಲೆ ಭಾರೀ ಪರಿಣಾಮ ಬೀರಿದೆ.

ಜಿಲ್ಲೆಯ ಹಲವು ಕಲಾವಿದರ ಮೇಲೆ ಪರಿಣಾಮ
ಗಣೇಶ ಹಬ್ಬದ ಆಚರಣೆ ಕುರಿತು ಸರ್ಕಾರ ಮಾಡಿರುವ ಆದೇಶ ಮಾಗಡಿ ತಾಲ್ಲೂಕಿನ ಬಾನುವಾಡಿ, ಕುದೂರು, ಬಿಸ್ಕೂರು ಸೇರಿದಂತೆ ನೂರಾರು ಗಣೇಶ ತಯಾರಕ ಕಲಾವಿದರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

ಈ ಬಾರಿ ಭಾರೀ ಹೊಡೆತ
ತುಮಕೂರು ಮೂಲದ ಭಾನು ಪ್ರಕಾಶ್ ಕುಟುಂಬದವರು ತಲಾ ತಲಾಂತರದಿಂದ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದಾರೆ. ಇವರು ತಯಾರಿಸುವ ಗಣೇಶನ ಮೂರ್ತಿಗಳಿಗೆ ಬೆಂಗಳೂರು, ತುಮಕೂರು, ಮೈಸೂರು, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಅನೇಕ ಭಾಗಗಳಲ್ಲಿ ಬೇಡಿಕೆ ಇದೆ. ಇಲ್ಲಿಂದ ಭಕ್ತರು ಬಂದು ಗಣೇಶನ ದೊಡ್ಡ ದೊಡ್ಡ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಭಾರೀ ಹೊಡೆತ ಬಿದ್ದಿದೆ.

ಬೇರೆ ಕೆಲಸಗಳತ್ತ ವಾಲಿದ ಕಲಾವಿದರು
ಗಣೇಶನ ಕಾಲು ಅಡಿಯ ಮೂರ್ತಿಯಿಂದ ಹಿಡಿದು ಹದಿನೈದು ಅಡಿಯವರೆಗಿನ ನಾನಾ ರೂಪದ ಗಣಪತಿಯನ್ನು ತಯಾರಿಸುವುದರಿಂದ ಇಲ್ಲಿನ ಗಣೇಶನಿಗೆ ಎಲ್ಲಿಲ್ಲ ಬೇಡಿಕೆ ಇದೆ. ಪ್ರತಿ ವರ್ಷ ಹತ್ತಾರು ಕಲಾವಿದರು ನಮ್ಮಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಇರುವುದರಿಂದ ದೊಡ್ಡ ಗಾತ್ರದ ಮೂರ್ತಿಗಳು ಖರೀದಿಯಾಗುವುದಿಲ್ಲ. ಕೆಲವರು ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವುದರಿಂದ ಒಂದು ಮತ್ತು ಎರಡು ಅಡಿಯ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಅನೇಕ ಕಲಾವಿದರು ಮೂರ್ತಿ ತಯಾರಿಕೆ ಕೆಲಸದಿಂದ ದೂರ ಉಳಿದು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ ಎಂದರು ಗಣೇಶಮೂರ್ತಿ ತಯಾರಿಕರು.

ನೆರವಿಗೆ ಕಲಾವಿದರ ಒತ್ತಾಯ
ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ, ನಮ್ಮ ಕಷ್ಟ ಯಾರಿಗೆ ಹೇಳಬೇಕು, ಸರ್ಕಾರ ನಮ್ಮಂಥವರ ಸಮಸ್ಯೆ ಎಲ್ಲಿ ಕೇಳುತ್ತದೆ? ಎಂದು ದುಃಖ ಹೇಳಿಕೊಳ್ಳುತ್ತಾರೆ ಕೆಲವರು. ಸರ್ಕಾರ ಎಲ್ಲಾ ಸಮುದಾಯಗಳ ನೆರವಿಗೆ ಧಾವಿಸಿ ಪರಿಹಾರ ನೀಡಿದೆ. ಆದರೆ ಗಣೇಶ ಮೂರ್ತಿ ತಯಾರಕ ಕಲಾವಿದರ ಸಂಕಷ್ಟ ಸ್ಪಂದಿಸದಿರುವುದು ನೋವು ತಂದಿದೆ. ಇನ್ನಾದರೂ ನಮ್ಮ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಗಣೇಶ ತಯಾರಕರು ಒತ್ತಾಯಿಸಿದ್ದಾರೆ.












Click it and Unblock the Notifications