ಟೋಲ್ ಸಂಗ್ರಹ ಖಂಡಿಸಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ವಾಹನ ಸವಾರರಿಂದ ಹಣ ವಸೂಲಿ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಟೋಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರ, ಫೆಬ್ರವರಿ 28: ನೂತನ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ವಾಹನ ಸವಾರರಿಂದ ಹಣ ವಸೂಲಿ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಎಕ್ಸ್‌ಪ್ರೆಸ್ ಹೈವೇ ಟೋಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮೂಲ ಸೌಕರ್ಯ ಕಲ್ಪಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೈವೇ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಡದಿಯ ಶೇಷಗಿರಿಹಳ್ಳಿ ಟೋಲ್ ಮುಂದೆ ಪ್ರತಿಭಟನೆ ನಡೆಸಿದರು. ಸೂಕ್ತ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರಲ್ಲದೆ, ವಾಹನಗಳನ್ನು ತಡೆದು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಹನಗಳು ಎಕ್ಸ್‌ಪ್ರೆಸ್ ಹೈವೇ ಪ್ರವೇಸಿಸುವ ಟೋಲ್ ಮುಂದೆ ಪ್ರತಿಭಟನೆ ಕುಳಿತ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ವಾಹನ ಹೆದ್ದಾರಿ ಪ್ರವೇಶ ಮಾಡದಂತೆ ತಡೆದರು. ಇದರಿಂದ ಹೆದ್ದಾರಿ ಸಂಚಾರದಲ್ಲಿ ಏರುಪೇರಾಗಿದ್ದು, ವಾಹನಗಳನ್ನು ಸರ್ವಿಸ್ ರಸ್ತೆ ಮುಖಾಂತರ ತೆರಳಲು ಅನುವು ಮಾಡಿಕೊಡಲಾಗಿತ್ತು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳುವ ಮಾಹಿತಿ ತಿಳಿದು ಹೆದ್ದಾರಿ ಪ್ರಾಧಿಕಾರ ಹಣ ಸಂಗ್ರಹಣೆಯನ್ನು ಮುಂದೂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮಾರ್ಚ್ 14 ರಿಂದ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೀಗಾಗಿ ಮಾರ್ಚ್ 13 ರಾತ್ರಿಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಟೋಲ್ ಮುಂದೆ ಪ್ರತಿಭಟನೆ ಮಾಡುತ್ತೇವೆ, ಅಗತ್ಯ ಸೌಲಭ್ಯ ನೀಡದೇ ಟೋಲ್ ಸಂಗ್ರಹಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡರು
ಇನ್ನು ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಕಾಣಕಲ್ ನಟರಾಜ್ ಮಾತನಾಡಿ, "ಮೈಸೂರು ಸಂಸದ ಪ್ರತಾಪ್ ಸಿಂಹ ಹೆದ್ದಾರಿಯಲ್ಲಿ ಸಂಚಾರ ಮಾಡದೇ, ತ್ವರಿತವಾಗಿ ಬೆಂಗಳೂರು ತಲುಪಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಾರೆ. ಆದರೆ ನೂತನ ಹೆದ್ದಾರಿಯಲ್ಲಿ ಬೆಂಗಳೂರು ಮೈಸೂರು ನಡುವೆ ಒಂದೇ ಒಂದು ಕಡೆ ಬಹಿರ್ದೆಸೆಗೆ ಅವಕಾಶ ಮಾಡಿಲ್ಲ, ನೈಸರ್ಗಿಕ ಕರೆ ಯಾರನ್ನು ಕೇಳಿ ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಅವರಿಗೆ ಇಲ್ಲವೇ" ಎಂದು ಪ್ರಶ್ನಿಸಿದರು.
ಹೆದ್ದಾರಿಗಾಗಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿಲ್ಲ, ವೈಜ್ಞಾನಿಕವಾಗಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿಲ್ಲ, ಹಲವು ಕಡೆ ಹೆದ್ದಾರಿ ದಾಟಲು ಸೂಕ್ತ ಸ್ಕೈ ವಾಕ್, ಅಂಡರ್ ಪಾಸ್ ಸಮರ್ಪಕವಾಗಿಲ್ಲ. ಹೆದ್ದಾರಿಯಲ್ಲಿ ಅಪಘಾತವಾದರೆ ಗಾಯಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡುವ ಯಾವುದೇ ವ್ಯವಸ್ಥೆ ಇಲ್ಲ. ಹೀಗೆ ಇರುವ ನೂರೆಂಟು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೇ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.












Click it and Unblock the Notifications