ರಾಮನಗರ; ಕಾಂಗ್ರೆಸ್ ಮುಖಂಡನ ಕೊಲೆ, ಸೊಸೆಯೇ ಆರೋಪಿ!
ರಾಮನಗರ, ಏಪ್ರಿಲ್ 18; ರಾಮನಗರದ ಕಾಂಗ್ರೆಸ್ ಮುಖಂಡ ಗಂಟಪ್ಪ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೊಸೆಯೇ ಗೆಳೆಯನ ಜೊತೆ ಸೇರಿ ಸುಪಾರಿ ಕೊಟ್ಟು ಮಾವನನ್ನು ಕೊಲೆ ಮಾಡಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ಬೈರವನದೊಡ್ಡಿ ಸಮೀಪದ ತೋಟದ ಮನೆಯಲ್ಲಿ ಫೆಬ್ರವರಿ 25ರ ರಾತ್ರಿ ನಡೆದಿದ್ದ ಕಾಂಗ್ರೆಸ್ ಮುಖಂಡ ಗಂಟಪ್ಪ (55) ಹತ್ಯೆ ನಡೆದಿತ್ತು. ಈ ಕೊಲೆ ಜಿಲ್ಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಗಂಟಪ್ಪನ ಸೊಸೆ ಹಾಗೂ ಆಕೆಯ ಗೆಳೆಯ ಇಬ್ಬರನ್ನು ಬಂಧಿಸುವ ಮೂಲಕ ಹತ್ಯೆ ರಹಸ್ಯ ಹೊರಗೆಳೆಯುವಲ್ಲಿ ಬಿಡದಿ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಮಾವ ಗಂಟಪ್ಪ ಹತ್ಯೆಗೆ ಸೊಸೆ ಚೈತ್ರ ಸುಪಾರಿ ನೀಡಿರುವುದು ಪೋಲಿಸರ ತನಿಖೆಯಿಂದ ಬಯಲಾಗಿದೆ. ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ ಎಂದು ಮಾವನ ಹತ್ಯೆಗೆ ತನ್ನ ಗೆಳೆಯ ನವೀನ್‌ಗೆ ಚೈತ್ರಾ ಸುಪಾರಿ ನೀಡಿದ್ದಳು.

ಬಾನಂದೂರು ನಿವಾಸಿಯಾದ ಗಂಟಪ್ಪ ತಮ್ಮ ತೋಟದಲ್ಲಿ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದರು. ಅದೇ ಸ್ಟೇಷನ್‌ನಲ್ಲೇ ಫೆಬ್ರವರಿ 25 ರಂದು ರಾತ್ರಿ ಭೀಕರವಾಗಿ ಗಂಟಪ್ಪ ಹತ್ಯೆ ನಡೆದಿತ್ತು.
ಕನಕಪುರ ತಾಲ್ಲೂಕಿನ ಸೊಂಟನಹಳ್ಳಿ ನಿವಾಸಿ ಟೋಕಾಮ್ ರಬ್ಬರ್ ಆಟೋ ಪಾರ್ಟ್ಸ್ ಇಂಡಿಯಾ ಪ್ರೈ ಲಿಮಿಟೆಡ್ ನೌಕರ ನವೀನ್‌ಗೆ ಚೈತ್ರಾ ಸುಪಾರಿ ನೀಡಿ ತನ್ನ ಮಾವನ ಹತ್ಯೆ ಮಾಡಿಸಿದ್ದಳು.
ಈ ಹಿಂದೆ ನವೀನ್ ಹಾಗೂ ಚೈತ್ರ ಪರಿಚಿತರಾಗಿದ್ದರು. ಬಳಿಕ ಗಂಟಪ್ಪನ ಮಗ ನಂದೀಶ್ ಜೊತೆ ಚೈತ್ರಾ ವಿವಾಹವಾಗಿತ್ತು. ವಿವಾಹದ ಬಳಿಕ ಗಂಟಪ್ಪ ಮಗ ಮತ್ತು ಸೊಸೆಯನ್ನು ಮನೆಗೆ ಸೇರಿಸಿಕೊಳ್ಳದೇ ಹೊರ ಹಾಕಿದ್ದರು.

ಸೊಸೆ ಚೈತ್ರಾಳಿಗೆ ತುಂಬಾ ಅವಮಾನ ಮಾಡಿದ್ದರು. ಯಾವುದೇ ಆಸ್ತಿ ಮತ್ತು ಹಣ, ಒಡವೆಗಳನ್ನು ಕೊಟ್ಟಿರಲಿಲ್ಲ. ತಮ್ಮ ಗೆಳೆಯ ನವೀನ್‌ಗೆ 30 ಗ್ರಾಂ ಚಿನ್ನದ ಚೈನನ್ನು ನೀಡಿ, ಇನ್ನೂ ಹೆಚ್ಚಿನ ಹಣವನ್ನು ಕೊಡುತ್ತೇನೆ ಎಂದು ಹೇಳಿ, ಇಬ್ಬರೂ ಯೋಜನೆ ರೂಪಿಸಿಕೊಂಡು ಕೊಲೆ ಮಾಡಿಸಿದ್ದರು.
ಗಂಟಪ್ಪನ ಕೊಲೆ ಆರೋಪಿಗಳಾದ ಚೈತ್ರಾ ಮತ್ತು ನವೀನ್ ಇಬ್ಬರನ್ನು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತುಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications