ಚನ್ನಪಟ್ಟಣ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ನಡುವೆ ಕಿತ್ತಾಟ
ರಾಮನಗರ, ಡಿಸೆಂಬರ್ 07: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರನ್ನು ಸಂಘಟಿಸುವ ದೃಷ್ಟಿಯಿಂದ ಕರೆದಿದ್ದ ಸಭೆಯಲ್ಲಿ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಪಟ್ಟಣದಲ್ಲಿ ಕರೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಎದುರೇ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿ ಕಿತ್ತಾಡಿಕೊಂಡರು. ಹೊಂಗನೂರು ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾಚಂದ್ರು ಹಾಗೂ ಮುಖಂಡ ಮಹಾಲಿಂಗು ನಡುವೆ ಗದ್ದಲ ನಡೆಯಿತು.
ಗ್ರಾಮ ಪಂಚಾಯಿತಿ ಚುನಾವಣೆಯ ಹೊಣೆಯನ್ನು ಆಯಾ ಜಿಲ್ಲಾ ಪಂಚಾಯಿತಿ ಸದಸ್ಯರು ನಿಭಾಯಿಸುವುದಾಗಿ ಭರವಸೆ ನೀಡುವ ಸಂದರ್ಭ ಹೊಂಗನೂರು ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾಚಂದ್ರು ಅವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆ ನಿಭಾಯಿಸುವುದಾಗಿ ವೇದಿಕೆ ಮೇಲೆ ಹೇಳಿದ ತಕ್ಷಣ ಸಿಟ್ಟಿಗೆದ್ದ ಕೆಲವರು ವೀಣಾಚಂದ್ರು ಅವರ ಉಸ್ತುವಾರಿ ನಮಗೆ ಬೇಡ ಎಂದು ವಿರೋಧಿಸಿದರು.

ವೇದಿಕೆಯ ಮೇಲಿದ್ದ ಸಂಸದ ಡಿ.ಕೆ.ಸುರೇಶ್ ಮಧ್ಯ ಪ್ರವೇಶ ಮಾಡಿ ಏನೇ ಗೊಂದಲ ಇದ್ದರೆ ಸರಿಪಡಿಸೋಣ, ಮಾಧ್ಯಮದವರು ಇದನ್ನೇ ತಪ್ಪಾಗಿ ಬಿಂಬಿಸುತ್ತಾರೆ ಎಂದು ಮುಖಂಡ ಮಹಾಲಿಂಗು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ, ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಸಭೆ ಮುಗಿಸಿ ಸಂಸದ ಡಿ.ಕೆ.ಸುರೇಶ್ ವೇದಿಕೆಯಿಂದ ನಿರ್ಗಮಿಸುವ ವೇಳೆ ಮತ್ತೆ ಜಿಲ್ಲಾ ಪಂಚಾಯತಿ ಸದಸ್ಯೆ ವೀಣಾಚಂದ್ರು, ಅವರ ಮಗ ಸಾಗರ್ ಮುಖಂಡ ಮಹಾಲಿಂಗು ಮತ್ತವರ ಬೆಂಬಲಿಗರು ಬೈದಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಇದರಿಂದ ವಿಚಲಿತರಾದ ಸಂಸದ ಡಿ.ಕೆ.ಸುರೇಶ್ ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.












Click it and Unblock the Notifications