Chennapatna: ಉಪ ಚುನಾವಣೆಗೆ ಮಾಜಿ ಸಂಸದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ?
ರಾಮನಗರ, ಸೆಪ್ಟೆಂಬರ್ 18: ಕರ್ನಾಟಕದ ರಾಜಕೀಯ ವಲಯದಲ್ಲಿ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದೆ. ಭಾರೀ ಚರ್ಚೆಗೆ ಕಾರಣವಾಗಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಬಗೆಗಿನ ಸುದ್ದಿ ಇದು. ಕಾಂಗ್ರೆಸ್ ಪಕ್ಷದಿಂದ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಣೆ ಮಾಡಿಕೊಂಡಿದ್ದು, ಚುನಾವಣೆ ಕಾವು ಈಗಾಗಲೇ ಹೆಚ್ಚಿಸಿದೆ.
ಚನ್ನಪಟ್ಟಣದ ಶಾಸಕರಾಗಿದ್ದ ಎಚ್. ಡಿ. ಕುಮಾರಸ್ವಾಮಿ 2024 ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿದು ಗೆಲವು ಸಾಧಿಸಿದರು. ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ಉಪ ಚುನಾವಣೆ ಎದುರಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ದಿನಾಂಖ ಘೋಷಣೆಯಾಗಲಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ.

ಚನ್ನಪಟ್ಟಣದ ಟಿಕೆಟ್‌ಗಾಗಿ ಬಿಜೆಪಿ ನಾಯಕ, ಎಂಎಲ್‌ಸಿ ಸಿ. ಪಿ. ಯೋಗೇಶ್ವರ ರಾಮನಗರದಿಂದ ದೆಹಲಿ ತನಕ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಗೆ ಬಂದಿದೆ. ಇದರ ನಡುವೆಯೇ ಬುಧವಾರ ಮಹತ್ವದ ಸುದ್ದಿಯೊಂದು ಹೊರ ಬಂದಿದೆ.
ಮಾಜಿ ಸಂಸದರು ಅಭ್ಯರ್ಥಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಸದ್ಯದ ಸುದ್ದಿ. ಈ ಕುರಿತು ಜೆಡಿಎಸ್ ನಾಯಕರು ಒಪ್ಪಿಗೆ ನೀಡಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರಿಂದ ಹಸಿರು ನಿಶಾನೆ ಸಿಕ್ಕಿದರೆ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರುವ ನಿರೀಕ್ಷೆ ಇದೆ.
ಮೈತ್ರಿ ಅಭ್ಯರ್ಥಿ ಅಂತಿಮಗೊಳಿಸಲು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಒಪ್ಪಿಗೆ ಬೇಕಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಕೈತಪ್ಪಿತ್ತು. ಹಾಲಿ ಸಂಸದರಾದರೂ, ಸಾಕಷ್ಟು ಕೆಲಸ ಮಾಡಿದರೂ ಅವರಿಗೆ ಟಿಕೆಟ್ ಕೈತಪ್ಪಿದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಅವರನ್ನು ಉಪ ಚುನಾವಣೆ ಕಣಕ್ಕಿಳಿಸಿ ರಾಜ್ಯ ರಾಜಕೀಯಕ್ಕೆ ಕರೆತರಲು ಎಚ್. ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಲಿದ್ದಾರೆಯೇ?.
ಸಿ. ಪಿ. ಯೋಗೇಶ್ವರಗೆ ಚನ್ನಪಟ್ಟಣದ ಟಿಕೆಟ್ ನೀಡಲು ಕೆಲವು ಬಿಜೆಪಿ ನಾಯಕರು, ಜೆಡಿಎಸ್‌ನ ನಾಯಕರು ಒಪ್ಪಿಗೆ ನೀಡುತ್ತಿಲ್ಲ. ಕೈ ತಪ್ಪುವ ಭೀತಿಯಿಂದ ಅವರು ಈಗಾಗಲೇ ದೆಹಲಿಗೆ ಹೋಗಿ ಪಕ್ಷದ ನಾಯಕರನ್ನು ಸಹ ಭೇಟಿ ಮಾಡಿ ಬಂದಿದ್ದು, ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ. ಈ ನಡುವೆ ಪ್ರತಾಪ್ ಸಿಂಹ ಹೆಸರು ಕೇಳಿ ಬರುತ್ತಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದ 'ಮೈಸೂರು ಚಲೋ' ಬಳಿಕ ಚನ್ನಪಟ್ಟಣದ ಚುನಾವಣಾ ಚಿತ್ರಣ ಬದಲಾಗಿದೆ. 2019ರಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಪಕ್ಷದ ಹೊರತಾಗಿಯೂ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಪ್ರಭಾವ ಹೊಂದಿದ್ದಾರೆ. ಟಿಕೆಟ್ ಕೈತಪ್ಪಿದರೆ ಅವರ ಮುಂದಿನ ನಡೆ ಉಪ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಚ್ಚರಿಕೆಯ ಹೆಜ್ಜೆಯನ್ನು ಇಡಲಿದೆ.
ಈ ಮೊದಲು ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದರು. ಆದರೆ ಸಿ. ಪಿ. ಯೋಗೇಶ್ವರಗೆ ಟಿಕೆಟ್ ನೀಡಲು ಜೆಡಿಎಸ್ ನಾಯಕರು ಒಪ್ಪಿಗೆ ನೀಡುತ್ತಿಲ್ಲ. ಆದ ಕಾರಣ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬುದು ಕುತೂಹಲ.












Click it and Unblock the Notifications