CP Yogeshwar: ಸಿಪಿ ಯೋಗೇಶ್ವರ ಕಾಂಗ್ರೆಸ್‌ಗೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸಂಕಷ್ಟ!
ಬೆಂಗಳೂರು, ಅಕ್ಟೋಬರ್ 23: 'ಕಾದು ನೋಡಿ' ಎಂಬ ಬಿಜೆಪಿ ಹೈಕಮಾಂಡ್ ನಾಯಕರ ಮಾತಿಗೆ ಮನ್ನಣೆ ಕೊಡದ ಪಕ್ಷದ ನಾಯಕ ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿರುವ ಅವರು ಕೆಪಿಸಿಸಿ ಕಛೇರಿಯಲ್ಲಿ 11 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ಈ ಮೂಲಕ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕಾವು ಏರಿಸಿದ್ದಾರೆ. ನವೆಂಬರ್ 13ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?.
ಸೋಮವಾರ ಸಿ. ಪಿ. ಯೋಗೇಶ್ವರ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿಯಾಗಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಘೋಷಣೆ ಮಾಡಿದ್ದರು. ಆದರೆ ಬುಧವಾರ ಕಾಂಗ್ರೆಸ್ ಸೇರಿದ್ದು, ಚನ್ನಪಟ್ಟಣದ ಚುನಾವಣಾ ಚಿತ್ರಣ ಬದಲಿಸಿದೆ.

ಚನ್ನಪಟ್ಟಣ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಆದ್ದರಿಂದ ಈಗ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಎದುರಾಳಿಯಾಗಿ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು ಎಂಬ ಒತ್ತಡ ಇನ್ನಷ್ಟು ಹೆಚ್ಚಾಗಿದೆ.
ಮೈತ್ರಿಕೂಟಕ್ಕೆ ಹೊಸ ಸಂಕಷ್ಟ: ವಾಟ್ಸಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಸೇರಲಿದ್ದಾರೆ. ಗುರುವಾರ ಅವರು ನಾಮಪತ್ರ ಸಲ್ಲಿಕೆ ಮಾಡಲು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ. ಇಷ್ಟು ದಿನ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಿ. ಪಿ. ಯೋಗೇಶ್ವರ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಸೇರಿರುವ ಕುರಿತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಲಿದ್ದಾರೆ. ಈಗ ಮೈತ್ರಿಕೂಟದ ಮುಂದಿರುವ ಕಗ್ಗಂಟು ಅಭ್ಯರ್ಥಿ ಘೋಷಣೆ ಮಾಡುವುದು. ನಿಖಿಲ್ ಕುಮಾರಸ್ವಾಮಿ ಅಥವ ಜಯಮುತ್ತು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಮಂಗಳವಾರ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಷಣ ಮಾಡುವಾಗ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಎಂಬ ಘೋಷಣೆಗಳು ಕೇಳಿ ಬರುತ್ತಿದ್ದವು. ಇಂದು ಮಧ್ಯಾಹ್ನ ಚನ್ನಪಟ್ಟಣದ ಮುಖಂಡರ ಸಭೆಯನ್ನು ಎಚ್. ಡಿ. ಕುಮಾರಸ್ವಾಮಿ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಧರ್ಮದಂತೆ ಸಂಡೂರು, ಶಿಗ್ಗಾವಿ ಬಿಜೆಪಿಗೆ ಬಿಟ್ಟುಕೊಡಲಾಗಿದೆ. ಚನ್ನಪಟ್ಟಣಕ್ಕೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಬೇಕು. ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಸೇರಿದ್ದು, ಚನ್ನಪಟ್ಟಣದ ಚುನಾವಣಾ ತಂತ್ರವನ್ನು ತಲೆಕೆಳಗು ಮಾಡಿದೆ. ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಸಹ ಮತಬ್ಯಾಂಕ್ ಹೊಂದಿರುವ ಯೋಗೇಶ್ವರಗೆ ಈಗ ಕಾಂಗ್ರೆಸ್ ಬೆಂಬಲವೂ ಸಿಕ್ಕಿದೆ. ಆದ್ದರಿಂದ ಉಪ ಚುನಾವಣೆ ಹಣಾಹಣಿ ಇನ್ನಷ್ಟು ರೋಚಕವಾಗಿದೆ.
ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅಲ್ಲದೇ ರಾಮನಗರ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ. ಉಪ ಚುನಾವಣೆಯಲ್ಲಿ ಸಿ. ಪಿ. ಯೋಗೇಶ್ವರ ಗೆದ್ದರೆ ಚನ್ನಪಟ್ಟಣದ ಅಭಿವೃದ್ಧಿಗೆ ಅನುದಾನ ತರುವುದು ಸುಲಭವಾಗಲಿದೆ. ಆದ್ದರಿಂದ ಸೂಕ್ತ ಅಭ್ಯರ್ಥಿ ಹುಡುಕುವ ಸಂಕಷ್ಟದಲ್ಲಿ ಮೈತ್ರಿಕೂಟವಿದೆ.
ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಮಾಡಲು ಮೊದಲು ಎಚ್. ಡಿ. ಕುಮಾರಸ್ವಾಮಿ ಬಯಸಿದ್ದರು. ಆದರೆ ಈಗ ಯೋಗೇಶ್ವರ ಹೊಸ ನಡೆ ಕುಮಾರಸ್ವಾಮಿಗೂ ತಲೆನೋವು ತಂದಿದೆ. ನಿಖಿಲ್ ಕುಮಾರಸ್ವಾಮಿ ನಿಲ್ಲಿಸಿ, ಸರ್ಕಾರವನ್ನೇ ಎದುರು ಹಾಕಿಕೊಂಡು ಉಪ ಚುನಾವಣೆ ಎದುರಿಸುವುದ ಅಷ್ಟು ಸುಲಭವಲ್ಲ ಎಂಬುದು ಬಿಜೆಪಿ, ಜೆಡಿಎಸ್ ಇಬ್ಬರಿಗೂ ತಿಳಿದಿದೆ.












Click it and Unblock the Notifications