Channapatna By Election: ಸಿಪಿ ಯೋಗೇಶ್ವರ ಕಾಂಗ್ರೆಸ್ ಸೇರುವ ಹಾದಿ ಸುಲಭವಲ್ಲ!
ಬೆಂಗಳೂರು, ಆಗಸ್ಟ್ 18: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಣೆ ಮಾಡುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಿದ್ದೆ ಕದ್ದಿದ್ದಾರೆ. ಎಂಎಲ್‌ಸಿ ಸಿ. ಪಿ. ಯೋಗೇಶ್ವರ ಮೈತ್ರಿಕೂಟದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಆದರೆ ವರಿಷ್ಠರಿಂದ ಇನ್ನೂ ಸಹ ಹಸಿರು ನಿಶಾನೆ ಸಿಕ್ಕಿಲ್ಲ.
2024ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದು ಗೆದ್ದ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ಉಪ ಚುನಾವಣೆ ಎದುರಾಗಿದ್ದು, ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ ಚುನಾವಣಾ ಕಣ ಮಾತ್ರ ರಂಗೇರಿದೆ.

ಸಿ. ಪಿ. ಯೋಗೇಶ್ವರಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ಏನು?. ಕಾಂಗ್ರೆಸ್ ಸೇರ್ಪಡೆಯೋ? ಅಥವ ಪಕ್ಷೇತರನಾಗಿ ಸ್ಪರ್ಧೆಯೋ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆ ಅಷ್ಟು ಸುಲಭವಾಗಿಲ್ಲ ಎಂಬುದು ಅಭಿಪ್ರಾಯ. ಅದಕ್ಕೆ ಕಾರಣ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್.
ಸೋಲು ಮರೆಯದ ಡಿಕೆಶಿ: 2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ. ಎನ್. ಮಂಜುನಾಥ್ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಡಿ. ಕೆ. ಸುರೇಶ್ ಎದುರಾಳಿಯಾಗಿದ್ದರು. ಡಾ. ಮಂಜುನಾಥ್ 1079002 ಮತಗಳನ್ನು ಪಡೆದು ಜಯಗಳಿಸಿದರು. ಡಿ. ಕೆ. ಸುರೇಶ್ 809355 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಡಿ. ಕೆ. ಸುರೇಶ್ ಸೋಲಿಸಲು ಸಿ. ಪಿ. ಯೋಗೇಶ್ವರ ಸಹ ಕಾರಣ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಬಿಜೆಪಿ ನಾಯಕರ ಜೊತೆ ಸೇರಿ ಸಕ್ರಿಯವಾಗಿ ಸಿ. ಪಿ. ಯೋಗೇಶ್ವರ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಉಪ ಮುಖ್ಯಮಂತ್ರಿಯಾಗಿದ್ದರೂ ಸಹ ಡಿ. ಕೆ. ಸುರೇಶ್ ಗೆಲ್ಲಿಸಲು ಸಾಧ್ಯವಾಗಿಲ್ಲ ಎಂಬ ನೋವು ಡಿ. ಕೆ. ಶಿವಕುಮಾರ್ ಅವರಲ್ಲಿದೆ.
ಆದ್ದರಿಂದ ಸಿ. ಪಿ. ಯೋಗೇಶ್ವರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಪಕ್ಷ ಸೇರಲು ಪ್ರಯತ್ನ ನಡೆಸಿದರೆ ಅದು ಅಷ್ಟು ಸುಲಭವಲ್ಲ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್, ಸಿ. ಪಿ. ಯೋಗೇಶ್ವರ ರಾಮನಗರದಲ್ಲಿ ಮುಖಾಮುಖಿಯಾಗಿದ್ದರು.
ಸಿ. ಪಿ. ಯೋಗೇಶ್ವರ ಈಗಾಗಲೇ ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಅಭಿಮಾನಿಗಳ ಜೊತೆ ಚನ್ನಪಟ್ಟಣದಲ್ಲಿ ಸಭೆಯನ್ನು ನಡೆಸಿದ್ದಾರೆ. ಆದರೆ ಸಿ. ಪಿ. ಯೋಗೇಶ್ವರಗೆ ಟಿಕೆಟ್ ಕೊಡುವ ವಿಚಾರದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಅಸಮಾಧಾನವಿದೆ.
ಚನ್ನಪಟ್ಟಣ ಉಪ ಚುನಾವಣೆ ಎಂದರೆ ಅದು ಎಚ್. ಡಿ. ಕುಮಾರಸ್ವಾಮಿ, ಸಿ. ಪಿ. ಯೋಗೇಶ್ವರ ನಡುವಿನ ಹೋರಾಟ. ಸಿ. ಪಿ. ಯೋಗೇಶ್ವರ ಪಕ್ಷವನ್ನೂ ಮೀರಿ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಅಷ್ಟಿಲ್ಲ. ಆದರೆ ತವರು ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂಬುದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಪ್ರತಿಷ್ಠೆಯಾಗಿದೆ.
ಕಳೆದ ಚುನಾವಣೆ ನೋಡುವುದಾದರೆ ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಗೆದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ. ಪಿ. ಯೋಗೇಶ್ವರ 80,677 ಮತ ಪಡೆದು ಸೋತರು. ಕಾಂಗ್ರೆಸ್‌ನ ಗಂಗಾಧರ್ ಎಸ್. ಪಡೆದಿದ್ದು ಕೇವಲ 15,374 ಮತ. ಈಗ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಟಿಕೆಟ್ ಯಾರಿಗೆ? ಎಂಬುದು ಕುತೂಹಲ.












Click it and Unblock the Notifications