ಚನ್ನಪಟ್ಟಣ ಉಪ ಚುನಾವಣೆ: ಒಂದು ಫೋನ್ ಕರೆ ಯೋಗೀಶ್ವರ್ ದೆಹಲಿಗೆ!
ರಾಮನಗರ, ಜೂನ್ 26: ಚನ್ನಪಟ್ಟಣ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಶಾಸಕರಾಗಿದ್ದ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಚುನಾವಣೆ ಪ್ರತಿಷ್ಠೆಯಾಗಿದೆ.
ಚನ್ನಪಟ್ಟಣದ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರು? ಎಂಬುದು ಸದ್ಯದ ಪ್ರಶ್ನೆ. ಕಾಂಗ್ರೆಸ್‌ನಿಂದ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಯಾರು ಅಭ್ಯರ್ಥಿ ಎಂಬ ಚರ್ಚೆಗಳು ಜೋರಾಗಿವೆ. ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ.

ಮೈತ್ರಿ ಧರ್ಮದ ಪ್ರಕಾರ ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ ಎಂಬ ಸುಳಿವು ಸಿಕ್ಕಿದೆ. ಇದರಿಂದಾಗಿ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರಗೆ ನಿರಾಸೆಯಾಗಿದೆ. ಆದ್ದರಿಂದ ಅವರು ದೆಹಲಿಗೆ ತೆರಳಿದ್ದಾರೆ.
ದೆಹಲಿಯಲ್ಲಿ ಸಭೆ: ಲೋಕಸಭೆ ಚುನಾವಣೆ ಬಳಿಕ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರದ ಉಪ ಚುನಾವಣೆ ನಡೆಯಬೇಕಿದೆ. ಮೂರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಚರ್ಚಿಸಲು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ದೆಹಲಿಯಲ್ಲಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಅವರು ಉಪ ಚುನಾವಣೆ ಬಗ್ಗೆ ಚರ್ಚಿಸಲಿದ್ದಾರೆ.
ಶಿಗ್ಗಾವಿ, ಸಂಡೂರು, ಚನ್ನಪಟ್ಟಣದ ಪೈಕಿ ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಿದೆ. ಅಲ್ಲದೇ 2023ರ ಚುನಾವಣೆಯಲ್ಲಿ ಜೆಡಿಎಸ್ ಗೆದ್ದ ಕ್ಷೇತ್ರವಿದು. ಆದ್ದರಿಂದ ಅದನ್ನು ಪಕ್ಷಕ್ಕೆ ಬಿಟ್ಟುಕೊಡುವುದು ಬಿಜೆಪಿಯ ಲೆಕ್ಕಾಚಾರ. ಇದರಿಂದಾಗಿ ಯೋಗೀಶ್ವರಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.
ಆದ್ದರಿಂದ ರಮೇಶ್ ಜಾರಕಿಹೊಳಿ ಮೂಲಕ ವರಿಷ್ಠರನ್ನು ಭೇಟಿಯಾಗಿ ಟಿಕೆಟ್ ನೀಡುವಂತೆ ಅವರು ಮನವಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಬಿ. ವೈ. ವಿಜಯೇಂದ್ರ ಸಿ. ಪಿ. ಯೋಗೀಶ್ವರಗೆ ಕರೆ ಮಾಡಿದಾಗ ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತೆದೆ ಎಂದು ಹೇಳಿದ್ದಾರೆ. ಆದ್ದರಿಂದ ದೆಹಲಿಗೆ ಅವರು ತೆರಳಿದ್ದಾರೆ.
ಸಿ. ಪಿ. ಯೋಗೀಶ್ವರ ಹಾಲಿ ವಿಧಾನ ಪರಿಷತ್ ಸದಸ್ಯರು. ಅವರ ಸದಸ್ಯತ್ವದ ಅವಧಿ 2026ರ ತನಕ ಇದೆ. ಈಗ ಚನ್ನಪಟ್ಟಣದಲ್ಲಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ತಮ್ಮ ಪಕ್ಷದಿಂದ ಕಣಕ್ಕಿಳಿಯಬೇಕು ಎಂದು ಬೇಡಿಕೆ ಇಟ್ಟಿದೆ ಎಂಬ ಮಾತಿದೆ. ಯೋಗೀಶ್ವರ ಜೆಡಿಎಸ್‌ನಿಂದ ಕಣಕ್ಕಿಳಿಯಬೇಕಾದರೆ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ.
ಚನ್ನಪಟ್ಟಣದಿಂದ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕುಮಾರಸ್ವಾಮಿ ನಿಖಿಲ್ ಕಣಕ್ಕಿಳಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೂ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆ.
ಸಿ. ಪಿ. ಯೋಗೀಶ್ವರ ಚನ್ನಪಟ್ಟಣದಲ್ಲಿ ಪಕ್ಷದ ವರ್ಚಸ್ಸು ಮೀರಿ ಪ್ರಭಾವ ಹೊಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷದಿಂದ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅಭ್ಯರ್ಥಿ ಮಾಡಲು ಎಚ್. ಡಿ. ಕುಮಾರಸ್ವಾಮಿ ಸಹ ಒಪ್ಪಿಗೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಯೋಗೀಶ್ವರ ಅಭ್ಯರ್ಥಿಯಾದರೆ ಕ್ಷೇತ್ರ ಮೈತ್ರಿಕೂಟದ ಪಾಲಾಗಲಿದೆ ಎಂಬುದನ್ನು ಜೆಡಿಎಸ್ ನಾಯಕರು ಒಪ್ಪುತ್ತಾರೆ. ಆದ್ದರಿಂದ ಯೋಗೀಶ್ವರ ಕಣಕ್ಕಿಳಿಸಲು ಪಕ್ಷದ ನಾಯಕರು ಒಪ್ಪಿದ್ದಾರೆ. ಬಿಜೆಪಿ ಯಾವ ಕ್ಷೇತ್ರ ಯಾರಿಗೆ ಎಂದು ಶೀಘ್ರವೇ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ರಾಮನಗರ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ತವರು ಕ್ಷೇತ್ರ. ಚನ್ನಪಟ್ಟಣದಲ್ಲಿ ಗೆಲ್ಲಬೇಕು ಎಂದು ಅವರು ತಂತ್ರ ರೂಪಿಸುತ್ತಿದ್ದಾರೆ. ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆಡಳಿತ ಮತ್ತು ವಿರೋಧ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಉಪ ಚುನಾವಣೆ ಕಾವು ಹೆಚ್ಚಿಸಿದೆ.












Click it and Unblock the Notifications