CP Yogeshwar: ಸಿಪಿ ಯೋಗೇಶ್ವರ್ ಕೈ ಹಿಡಿದಿರುವುದರ ಹಿಂದಿದೆ ದೊಡ್ಡ ಲೆಕ್ಕಾಚಾರ!
ರಾಮನಗರ ಅಕ್ಟೋಬರ್ 23: ಚನ್ನಪಟ್ಟಣ ಉಪಚುನಾವಣೆ ಅಖಾಡ ದಿನ ಕಳೆದಂತೆ ರಂಗೇರುತ್ತಿದೆ. ಚನ್ನಪಟ್ಟಣದಲ್ಲಿ ಗೆಲ್ಲುವ ಕುದುರೆ ಎಂದೇ ಬಿಂಬಿಸಿಕೊಂಡಿರುವ ಸಿಪಿ ಯೋಗೇಶ್ವರ್ ಅವರ ಮಾಸ್ಟರ್ ಪ್ಲ್ಯಾನ್ ಸದ್ಯ ವರ್ಕೌಟ್ ಆಗಿದೆ. ದಳಪತಿಗಳ ಒಳಸಂಚಿನಿಂದಾಗಿ ಸಿಪಿ ಯೋಗೇಶ್ವರ್ ಅವರು ಎಷ್ಟೇ ಪ್ರಯತ್ನ ಪಟ್ಟರೂ ಚನ್ನಪಟ್ಟಣದಿಂದ ಟಿಕೆಟ್ ಸಿಗಲಿಲ್ಲ. ಕೇಂದ್ರಮಟ್ಟದಲ್ಲಿ ಸಿಪಿವೈ ಲಾಬಿ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಸಿಪಿವೈ ಸಾಕಷ್ಟು ಅಳೆದು ತೂಗಿ ಪಕ್ಷ ಬದಲಾಯಿಸಿದ್ದಾರೆ. ಅಷ್ಟಕ್ಕೂ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದರ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ.
ಹೌದು... ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಒಬ್ಬ ಪ್ರಭಾವಿ ನಾಯಕ. ಈವರೆಗೆ ಚನ್ನಪ್ಪಟ್ಟಣದಲ್ಲಿ ಬಿಜೆಪಿಗೆ ಇದ್ದ ಏಕೈಕ ಗೆಲ್ಲುವ ಕುದರೆ ಅಂದರೆ ಅದು ಸಿಪಿವೈ ಮಾತ್ರ. ಆದರೆ ಅದೇ ಬಿಜೆಪಿಗೆ ಈ ಬಾರಿ ಸಿಪಿವೈಗೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಲಾಗಲಿಲ್ಲ. ಯಾಕೆಂದರೆ ಇದಕ್ಕೆ ಅಡ್ಡಿಯಾಗಿದ್ದು ಮೈತ್ರಿ ಪಕ್ಷ ಜೆಡಿಎಸ್. ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಚನ್ನಪಟ್ಟಣದಲ್ಲಿ ಬಿಜೆಪಿಗಿಂತಲೂ ಹೆಚ್ಚು ಜನಬಲವನ್ನು ಹೊಂದಿರುವುದು ಜೆಡಿಎಸ್. ಹೀಗಾಗಿ ಕಳೆದ ಬಾರಿ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಅವರನ್ನು ಹೆಚ್‌ಡಿ ಕುಮಾರಸ್ವಾಮಿ ಸೋಲಿಸಿದ್ದರು. ಆದರೆ ಈ ಗೆಲುವು ಹೆಚ್ಚು ಮತಗಳ ಅಂತರದಿಂದ ಆಗಿರಲಿಲ್ಲ. ಈ ಹಿಂದೆ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದ ಸಿಪಿವೈ ಈ ಬಾರಿಯಾದರೂ ಟಿಕೆಟ್ ಪಡೆದು ಗೆಲ್ಲುವ ಇಂಗಿತವನ್ನು ಹೊಂದಿದ್ದರು. ಆದರೆ ಮೈತ್ರಿ ಇದಕ್ಕೆ ಅವಕಾಶ ನೀಡಲೇ ಇಲ್ಲ.
ಹೀಗಾಗಿ ಬೇಸರಗೊಂಡ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಷ್ಟಕ್ಕೂ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಿರುವುದರ ಹಿಂದೆ ದೊಡ್ಡ ಜಾತಿ ಲೆಕ್ಕಾಚಾರವಿದೆ. ಹೌದು... ಸಿಪಿವೈ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಿಂತಲೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.
ಒಂದು ವೇಳೆ ಕಾಂಗ್ರೆಸ್ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ನೀಡಿದರೆ ಸಿಪಿ ಯೋಗೇಶ್ವರ್‌ಗೆ ಹೆಚ್ಚು ಪ್ರಯೋಜನವಾಗಲಿದೆ. ವಿಶೇಷವಾಗಿ ಯೋಗೇಶ್ವರ್ ಗೆಲ್ಲುವ ಕನಸು ಕೂಡ ನನಸಾಗಲಿದೆ. ಹಾಗಾದರೆ ಕಾಂಗ್ರೆಸ್ ಪಕ್ಷದಿಂದ ಯೋಗೇಶ್ವರ್‌ಗೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಅವಕಾಶ ಸಿಕ್ಕರೆ ಏನೆಲ್ಲಾ ಲಾಭ?

ಕಾಂಗ್ರೆಸ್ ಪಂಚ ಗ್ಯಾರಂಟಿ ಲಾಭ ಸಿಪಿವೈಗೆ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಗ್ಯಾರಂಟಿಗಳನ್ನು ಜಾರಿಗೆ ತಂದು ಜನ ಮೆಚ್ಚಿಗೆಯನ್ನು ಪಡೆದುಕೊಂಡಿದೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಲಿ ಜನ ಮತ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ವಿಚಾರವನ್ನ ಸಿಪಿ ಯೋಗೇಶ್ವರ್ ಪರೋಕ್ಷವಾಗಿ ಇಂದು ಕಾಂಗ್ರೆಸ್ ಸೇರ್ಪಡೆಗೊಳ್ಳುವಾಗ ಪ್ರಸ್ತಾಪಿಸಿದರು. ಕಾಂಗ್ರೆಸ್ ಮಾಡುತ್ತಿರುವ ಜನಪರ ಕೆಲಸಗಳಲ್ಲಿ ನಾನು ಕೂಡ ಒಬ್ಬನಾಗಬೇಕು ಎಂದು ನಾನು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ ಎಂದು ಸಿಪಿ ಯೋಗೇಶ್ವರ್ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್‌ಗೆ ಚನ್ನಪಟ್ಟಣ ಟಿಕೆಟ್ ಖಾತರಿಯಾದರೆ ಪಂಚ ಗ್ಯಾರಂಟಿಗಳೇ ಅವರನ್ನು ಗೆಲ್ಲಿಸಲಿವೆ.
'ಯೋಗೇಶ್ವರ್ ಎಲ್ಲಿ ಇರ್ತಾರೋ ಅಲ್ಲಿ ನಾವು' ಕಾರ್ಯಕರ್ತರು ಶಪತ
ಇನ್ನೂ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಂತೆ ಕಾರ್ಯಕರ್ತರೂ ತಮ್ಮ ನೆಚ್ಚಿನ ನಾಯಕನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಸಿಪಿ ಯೋಗೇಶ್ವರ ಇರದ ಪಕ್ಷಕ್ಕೆ ನಾವು ಬೆಂಬಲ ನೀಡುವುದಿಲ್ಲ. ನಮ್ಮ ನಾಯಕ ಎಲ್ಲಿ ಇರುತ್ತಾರೋ ಅದೇ ನಮ್ಮ ಪಕ್ಷ ಎಂದಿದ್ದಾರೆ. ಹೀಗಾಗಿ ಕಾರ್ಯಕರ್ತರ ಈ ನಿರ್ಧಾರ ಸಿಪಿ ಯೋಗೇಶ್ವರ್ ಅವರಿಗೆ ಮತ್ತಷ್ಟು ಬಲ ನೀಡಿದೆ.
ಜಾತಿ ಲೆಕ್ಕಾಚಾರ
ಚನ್ನಪಟ್ಟಣ ಒಕ್ಕಲಿಗರ ಶಕ್ತಿ ಕೇಂದ್ರವಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ 2.32 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ ಒಕ್ಕಲಿಗ ಸಮುದಾಯದ ಸುಮಾರು 1.05 ಲಕ್ಷ ಮತಗಳಿವೆ. 30 ಸಾವಿರ ಮುಸ್ಲಿಂ ಮತಗಳು, ದಲಿತ ಮತಗಳು 40 ಸಾವಿರ ಇದೆ. ಬೆಸ್ತರು ಮತ್ತು ತಿಗಳರು ತಲಾ 10 ಸಾವಿರ, ಇತರೆ ಹಿಂದುಳಿದ ವರ್ಗಗಳು 25 ಸಾವಿರದಷ್ಟಿದ್ದರೆ, ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳ 5 ಸಾವಿರ ಮತಗಳಿವೆ. ಇದರಲ್ಲಿ ದಲಿತ, ಮುಸ್ಲಿಂ, ಒಕ್ಕಲಿಗ ಸಮುದಾಯದ ಹೆಚ್ಚು ಮತಗಳು ಕಾಂಗ್ರೆಸ್ ಪರವಾಗಿದ್ದು ಸಿಪಿ ಯೋಗೇಶ್ವರ್ ಅವರಿಗೆ ಆನೆ ಬಲ ನೀಡಲಿದೆ. ಇದೆಲ್ಲಾ ವಿಚಾರಗಳನ್ನು ಅಳೆದು ತೂಗಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಕೈ ಹಿಡಿದಿದ್ದು ಇವರ ಆಲೋಚನೆ ಅದೆಷ್ಟು ಕೈ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications