ಸ್ವಾಮೀಜಿಗಳು ಮೀಸಲಾತಿ ಪದದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ- ಕೇಂದ್ರ ಸಚಿವ ನಾರಾಯಣಸ್ವಾಮಿ
ರಾಮನಗರ, ಡಿಸೆಂಬರ್ 23: ದೇಶದ ಹಾಗೂ ರಾಜ್ಯದ ಸ್ವಾಮೀಜಿಗಳು ಸೇರಿದಂತೆ ಹಲವು ಸಂಘಟನೆಗಳು ಮೀಸಲಾತಿ ಎನ್ನುವ ಪದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ನಾರಾಯಣಸ್ವಾಮಿ ಕಿಡಿಕಾರಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಯಾರಿಗೆ ಕೊಡಬೇಕು ಎಂದು ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ರಚನಾ ಸಮಿತಿ ಸದಸ್ಯರು ಹಾಗೂ ಅವತ್ತಿನ ರಾಜಕಾರಣಿಗಳಿಗೆ ದೃಷ್ಟಿಕೋನ ಇತ್ತು ಎಂದು ತಿಳಿಸಿದರು.
ಇನ್ನು ಭೌಗೋಳಿಕವಾಗಿ ಯಾವ ಸಮುದಾಯ ಮುಖ್ಯವಾಹಿನಿ ಬಂದಿರಲಿಲ್ಲ, ಯಾವ ಸಮಾಜದಲ್ಲಿ ಅಸ್ಪಶ್ಯತೆ ಇತ್ತು ಅಂತಹವರಿಗೆ ಮೀಸಲಾತಿ ಕೊಡಲಾಗಿತ್ತು ಆದರೆ ಈಗ ಸಂವಿಧಾನದ ಆಶಯಕ್ಕೆ ಧಕ್ಕೆ ತಂದು ಎಲ್ಲಾ ವರ್ಗಗಳು ಮೀಸಲಾತಿ ಬೇಕು ಎನ್ನುತ್ತಿವೆ ಎಂದರು.

ಯಾವ ಆಧಾರದ ಮೇಲೆ ಮೀಸಲಾತಿ ಕೇಳಬೇಕು ಎನ್ನುವುದರ ಅರಿವಿರಬೇಕು
ಮಾತು ಮುಂದುವರಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಈಗಾಗಲೇ ದೇಶದ 90 % ಸಮಾಜದ ಜನರಿಗೆ ಮೀಸಲಾತಿ ಬಂದಿದೆ. ಹೀಗಾಗಿ ಮೀಸಲಾತಿ ಎಂಬ ಪದ ಅರ್ಥ ಕಳೆದುಕೊಳ್ಳುತ್ತಿದೆ. ಮೀಸಲಾತಿಗಾಗಿ ರಾಜ್ಯ ಸರ್ಕಾರ ಹಾಗೂ ಸಿಎಂಗೆ ಗೆರೆ ಹಾಕಿ ಮೀಸಲಾತಿ ಕೊಡಿ ಎನ್ನುವುದು ಶೋಭೆ ತರುವುದಿಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವರ, ಆಡಳಿತ ಮಾಡುವುದಕ್ಕೆ ಎನ್ನುವುದು ಸರಿಯಲ್ಲ. ಯಾವ ಆಧಾರದ ಮೇಲೆ ಮೀಸಲಾತಿ ಕೇಳಬೇಕು ಎನ್ನುವುದರ ಅರಿವಿರಬೇಕು ಎಂದರು.

ಕೊರೊನಾ ಹೆಚ್ಚಳದ ಬಗ್ಗೆ ಪ್ರಧಾನಿ ತುರ್ತು ಸಭೆ
ಚೀನಾದಲ್ಲಿ ಕೊರೊನಾ ಮಹಾ ಮಾರಿ ಸೋಂಕು ಹೆಚ್ಚಳದಿಂದ ದೇಶಕ್ಕೆ ಆತಂಕ ಉಂಟುಮಾಡಿದೆ. ಈಗಾಗಲೇ ಕೊರೊನಾ ಹೆಚ್ಚಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ತುರ್ತು ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೂ ಸಲಹೆ ನೀಡಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು
ಮತ್ತೊಮ್ಮೆ ಕೊರೊನಾ ಮಹಾಮಾರಿ ಆತಂಕ ಉಂಟುಮಾಡಿದೆ. ಅದರೆ ಬಗ್ಗೆ ರಾಜಕೀಯ ನಾಯಕರು ಉಡಾಫೆ ಮಾತುಗಳನ್ನಾಡಬಾರದು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ಉಡಾಫೆ ಮಾತುಗಳನ್ನು ಗಮನಿಸಿದ್ದೇನೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಚೀನಾದಲ್ಲಿರುವ ಪರಿಸ್ಥಿತಿ ನಮ್ಮ ದೇಶಕ್ಕೆ ಬರಬಾರದು. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆ ಹಾಗೂ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದರು.

ಮುಖ್ಯಮಂತ್ರಿಗಳ ಹೇಳಿಕೆಗೆ ರಾಜ್ಯದ ಸರ್ವಪಕ್ಷಗಳು ಬೆಂಬಲಿಸಿವೆ
ಚುನಾವಣೆಗಳ ಸನಿಹ ಹಾಗೂ ಚುನಾವಣೆಗಳು ಬಂದಾಗ ಗಡಿ ವಿವಾದಗಳು ಉಲ್ಬಣಗೊಳ್ಳುತ್ತವೆ ಎಂಬುದನ್ನು ಗಮನಿಸಿದ್ದೇನೆ. ಅಲ್ಲದೇ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಗಡಿವಿಚಾರವಾಗಿ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗೆ ರಾಜ್ಯದ ಸರ್ವಪಕ್ಷಗಳು ಬೆಂಬಲಿಸಿವೆ. ಈಗಾಗಲೇ ಕೇಂದ್ರದ ಗೃಹ ಮಂತ್ರಿಗಳಾದ ಅಮಿತ್ ಶಾ ಸಭೆ ಕರೆದು ಮಾರ್ಗದರ್ಶನ ಮಾಡಿದ್ದಾರೆ. ಗಡಿ ವಿಚಾರದಲ್ಲಿ ಕೆಲವರು ಗೊಂದಲ ಉಂಟುಮಾಡಿದ್ದಾರೆ ಎಲ್ಲವು ಬಗೆಹರಿಯುತ್ತದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಕರಣ ರೀತಿಯಲ್ಲೇ ಗಡಿ ವಿವಾದ ಬಗೆಹರಿಯುತ್ತದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications