ಕಾವೇರಿ ಕಿಚ್ಚು: ಸೆ.26ಕ್ಕೆ ಬೆಂಗಳೂರು ಜೊತೆಗೆ ರಾಮನಗರವೂ ಬಂದ್
ರಾಮನಗರ, ಸೆಪ್ಟೆಂಬರ್ 24: ಕಾವೇರಿ ಕಿಚ್ಚು ರಾಜ್ಯದಲ್ಲಿ ಹೆಚ್ಚಿದ್ದು ಸೆಪ್ಟೆಂಬರ್ 26ರಕ್ಕೆ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿರುವ ಬೆನ್ನಲ್ಲೇ ಇದೀಗ ರಾಮನಗರ ಬಂದ್‌ಗೂ ಕರೆ ನೀಡಲಾಗಿದೆ.
ರಾಮನಗರ ಜಿಲ್ಲೆಯ ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಸೆಪ್ಟೆಂಬರ್ 26ರಂದು ರಾಮನಗರ, ಚನ್ನಪಟ್ಟಣ, ಬಿಡದಿ ಸಂಪೂರ್ಣ ಸ್ತಬ್ಧವಾಗಲಿದ್ದು, ಕಾವೇರಿ ನೀರಿಗಾಗಿ ಹೋರಾಟದ ಬಂದ್‌ಗೆ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತು ಪಡಿಸಿ ಉಳಿದೆಲ್ಲ ಸೇವೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸಂಪೂರ್ಣ ಬಂದ್ ಆಗಲಿದೆ. ಸೆಪ್ಟೆಂಬರ್ 26ರ ಬೆಳಗ್ಗೆ ಹತ್ತು ಗಂಟೆಗೆ ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮೌನ ಪ್ರತಿಭಟನೆ ನಡೆಸಲಿರುವ ಹೋರಾಟಗಾರರು, ಬಳಿಕ ಹಳೇ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಕಾವೇರಿ ನೀರಿಗಾಗಿ ಮಾಡುತ್ತಿರುವ ಹೋರಾಟಕ್ಕೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬೆಂಬಲಿಸುವಂತೆ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 26 ಬೆಂಗಳೂರು ಬಂದ್
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 26ರಂದು ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಬಂದ್‌ಗೆ ರೈತ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ 150ಕ್ಕೂ ಹೆಚ್ಚು ಸಂಘಗಳು ಬೆಂಬಲ ಘೋಷಿಸಿವೆ. ಬೆಂಗಳೂರು ಬಂದ್‌ಗೆ ಪ್ರತಿಪಕ್ಷ ಬಿಜೆಪಿ ಕೂಡ ಬೆಂಬಲ ಸೂಚಿಸಿರುವುದರಿಂದ ರಾಜಧಾನಿಯು ಸಂಪೂರ್ಣವಾಗಿ ಸ್ತಬ್ಧವಾಗುವ ಸಾಧ್ಯತೆಗಳಿವೆ. ಜೊತೆಗೆ ಯಶವಂತಪುರ ಎಪಿಎಂಸಿ ಸಂಪೂರ್ಣ ಬಂದ್ ಆಗಲಿದೆ.












Click it and Unblock the Notifications