Channapatna By Election: ಹೆಜ್ಜೆ ಮುಂದಿಡಲು ಬಿಜೆಪಿ-ಜೆಡಿಎಸ್, ಕಾಂಗ್ರೆಸ್‌ಗೆ ಆತಂಕ!
ರಾಮನಗರ, ಆಗಸ್ಟ್ 12: ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ದಿನಾಂಕ ಯಾವುದೇ ಕ್ಷಣದಲ್ಲಿ ಘೋಷಣೆಯಾಗಲಿದೆ. ಆದರೆ ಉಪ ಚುನಾವಣೆಯ ಹೆಜ್ಜೆ ಮುಂದಿಡಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ, ಕಾಂಗ್ರೆಸ್‌ಗೆ ಆತಂಕ ಕಾಡುತ್ತಿದೆ. ಚನ್ನಪಟ್ಟಣದ ಉಪ ಚುನಾವಣೆ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ನಾಯಕರ ಪ್ರತಿಷ್ಠೆಗೆ ಧಕ್ಕೆ ಆಗಲಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿಯ ಸಿ. ಪಿ. ಯೋಗೇಶ್ವರ 80,677 ಮತ ಪಡೆದು ಸೋತರು. ಕಾಂಗ್ರೆಸ್‌ನ ಗಂಗಾಧರ್ ಎಸ್. ಪಡೆದಿದ್ದು ಕೇವಲ 15,374 ಮತಗಳು. ಚನ್ನಪಟ್ಟಣ ಚುನಾವಣೆ ಎಂದರೆ ಅದು ಸಿ. ಪಿ. ಯೋಗೇಶ್ವರ, ಎಚ್. ಡಿ. ಕುಮಾರಸ್ವಾಮಿ ನಡುವಿನ ಹೋರಾಟ. ಆದರೆ ಈಗ ಮೈತ್ರಿ ಕಾರಣಕ್ಕೆ ಇಬ್ಬರೂ ಒಂದಾಗಿದ್ದಾರೆ.

ಚನ್ನಪಟ್ಟಣದ ಶಾಸಕ ಎಚ್. ಡಿ. ಕುಮಾರಸ್ವಾಮಿ 2024ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿದು ಗೆದ್ದರು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪ ಚುನಾವಣೆ ಎದುರಾಗಿದೆ. ಈಗ ಕಾಂಗ್ರೆಸ್ ಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಉಪ ಚುನಾವಣೆಯಲ್ಲಿ ಎದುರಿಸಬೇಕಿದೆ. ಆದರೆ ಅಭ್ಯರ್ಥಿಗಳು ಯಾರು? ಎಂಬ ಚರ್ಚೆಗಳು ಜೋರಾಗಿವೆ.
ಪಕ್ಷಗಳಿಗೆ ಆತಂಕ: ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತವರು ಕ್ಷೇತ್ರ. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ ರಾಮನಗರ ಜಿಲ್ಲೆಯಲ್ಲಿರುವ ಕ್ಷೇತ್ರ. ಉಪ ಚುನಾವಣೆ ಗೆಲುವು ಜೆಡಿಎಸ್, ಎಚ್. ಡಿ. ಕುಮಾರಸ್ವಾಮಿಗೆ ಪ್ರತಿಷ್ಠೆಯ ಪ್ರಶ್ನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ತಂತ್ರ ಹಣೆದಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಚನ್ನಪಟ್ಟಣ ಯಾರಿಗೆ? ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಬಿಜೆಪಿಯ ಸಿ. ಪಿ. ಯೋಗೇಶ್ವರ ಮೈತ್ರಿಕೂಟದ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಕುಮಾರಸ್ವಾಮಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಒಂದು ಶಾಸಕ ಸ್ಥಾನ ಕಳೆದುಕೊಂಡಿರುವ ಜೆಡಿಎಸ್. ಅಭ್ಯರ್ಥಿ ಜೆಡಿಎಸ್ ಚಿನ್ಹೆಯಿಂದ ಕಣಕ್ಕಿಳಿಯಬೇಕು ಎಂದು ಬೇಡಿಕೆ ಇಟ್ಟಿದೆ ಎಂಬ ಮಾತಿದೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೇತೃತ್ವದಲ್ಲಿ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಬುಧವಾರ ಸಭೆ ನಡೆಯಲಿದೆ. ಈ ಸಭೆಗಾಗಿ ಬಿಜೆಪಿಯ ಸಿ. ಪಿ. ಯೋಗೇಶ್ವರ ದೆಹಲಿ ತಲುಪಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತನಾಡಿದ್ದು, ಮುಂದಿನ ಹೆಜ್ಜೆ ಕುತೂಹಲಕ್ಕೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಪಕ್ಷವನ್ನೂ ಮೀರಿ ವರ್ಚಸ್ಸು ಹೊಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷದಿಂದಲೂ ಸೋಲು-ಗೆಲುವು ಕಂಡವರು. ಒಂದು ವೇಳೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನ ಕೈಗೊಂಡರೆ ಮೈತ್ರಿಕೂಟ, ಕಾಂಗ್ರೆಸ್‌ಗೆ ತಲೆನೋವು ಖಚಿತವಾಗಿದೆ.
ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು? ಎಂಬುದು ಇನ್ನೂ ನಿಗೂಢ. ಡಿ. ಕೆ. ಶಿವಕುಮಾರ್ ಪದೇ ಪದೇ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದು, ಅವರೇ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಲೋಕಸಭೆಯಲ್ಲಿ ಸೋತ ಡಿ. ಕೆ. ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಅಭ್ಯರ್ಥಿ ಕುರಿತು ಕಾಂಗ್ರೆಸ್ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.
ಮೊದಲು ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಕುರಿತ ಎಲ್ಲಾ ಸುದ್ದಿಗಳಿಗೆ ಎಚ್. ಡಿ. ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಖಚಿತವಾಗಿಲ್ಲ.












Click it and Unblock the Notifications