ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ
Recommended Video

ರಾಮನಗರ, ಅಕ್ಟೋಬರ್ 15: ರಾಮನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.
ಅವುಗಳ ಒಟ್ಟಾರೆ ಮೌಲ್ಯ ಸುಮಾರು 100ಕೋಟಿ ರೂ.ಗಳಷ್ಟಿದ್ದು, ಅವರು 8.14 ಕೋಟಿ ರೂ. ಮೊತ್ತದ ಸಾಲವನ್ನೂ ಹೊಂದಿದ್ದಾರೆ.
ರಾಜ್ಯ ಚುನಾವಣಾ ಆಯೋಗಕ್ಕೆ ನಾಮಪತ್ರ ಮತ್ತು ಅಫಿಡವಿಟ್ ಸಲ್ಲಿಸಿರುವ ಅನಿತಾ ಕುಮಾರಸ್ವಾಮಿ, ತಾವು ಬಿ.ಇ. ಪದವೀಧರೆ ಎಂಬ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಚರ ಹಾಗೂ ಸ್ಥಿರಾಸ್ತಿಯ ವಿವರಗಳನ್ನು ಭರ್ತಿ ಮಾಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದಾಗಿ ರಾಮನಗರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಅದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುತ್ತಿದ್ದಾರೆ.

68.79 ಕೋಟಿ ರೂ. ಹೂಡಿಕೆ
ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ 68.79 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅಲ್ಲದೆ, 17.6 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಅವರ ಬಳಿ ಇರುವ ಚರಾಸ್ತಿ ಮೌಲ್ಯ 94 ಕೋಟಿ ರೂ. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ 14 ಕೋಟಿ ಮೌಲ್ಯದ ಕಟ್ಟಡವಿದೆ. ದೊಡ್ಡನಕುಂಟೆ ಬಳಿ 16 ಕೋಟಿ ರೂ ಮೌಲ್ಯದ ಕಟ್ಟಡ ಮಾಲೀಕರಾಗಿದ್ದಾರೆ.

76.35 ಲಕ್ಷ ರೂ ಆದಾಯ
2017-18ನೇ ಸಾಲಿನಲ್ಲಿ 76.35 ಲಕ್ಷ ರೂಪಾಯಿ ಆದಾಯ ಬಂದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಬಳಿ 2660 ಗ್ರಾಂ ಚಿನ್ನ, 17 ಕೆ.ಜಿ. ಬೆಳ್ಳಿ, 40 ಕ್ಯಾರೆಟ್ ವಜ್ರ ಸೇರಿದಂತೆ 93.33 ಲಕ್ಷ ಮೌಲ್ಯದ ಆಭರಣ ಇದೆ ಎಂದು ಘೋಷಿಸಿದ್ದಾರೆ. 8.29 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್‌ಸನ್ ಬೈಕ್ ಮತ್ತು 20 ಲಕ್ಷ ರೂಪಾಯಿ ಮೌಲ್ಯದ ವಾಹನ ತಮ್ಮ ಹೆಸರಿನಲ್ಲಿದೆ ಎಂದು ತಿಳಿಸಿದ್ದಾರೆ.

ವಿವಿಧೆಡೆಗಳಿಂದ ಸಾಲ
ವಿವಿಧ ವ್ಯಕ್ತಿ, ಸಂಸ್ಥೆ ಹಾಗೂ ಬ್ಯಾಂಕುಗಳಿಂದ 93.39 ಕೋಟಿ ರೂ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ 42 ಲಕ್ಷ ರೂ. ನಗದು, 1.90 ಕೋಟಿ ರೂಪಾಯಿ ಠೇವಣಿ ಇರಿಸಲಾಗಿದೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಸುಮಾರು 8.14 ಕೋಟಿ ಸಾಲ ಪಡೆದಿರುವುದಾಗಿ ವಿವರಿಸಿದ್ದಾರೆ. ಕೈಯಲ್ಲಿ 42 ಲಕ್ಷ ರೂಪಾಯಿ ನಗದು ಹಣವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಒಮ್ಮತದ ಅಭ್ಯರ್ಥಿ
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡಲ್ಲಿಯೂ ಗೆಲುವು ಕಂಡಿದ್ದರು. ಬಳಿಕ ತವರು ಕ್ಷೇತ್ರವಾದ ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಳೆದ ಮಂಗಳವಾರ ರಾಮನಗರ ತಾಲೂಕು ಘಟಕದ ಮುಖಂಡರು ಅನಿತಾ ಕುಮಾರಸ್ವಾಮಿ ಅವರ ಹೆಸರು ಘೋಷಣೆ ಮಾಡಿದ್ದರು. ಆದರೆ, ಕೆಲವು ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ದೇವೇಗೌಡರು ಬುಧವಾರ ಮತ್ತೊಮ್ಮೆ ಸಭೆ ನಡೆಸಿದರು.
ಸ್ಥಳೀಯ ಮುಖಂಡರ ಮನವೊಲಿಸಿದ ಬಳಿಕ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ರಾಮನಗರ ಜೆಡಿಎಸ್‌ನ ನೆಲೆಯಾಗಿರುವುದರಿಂದ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಗೋಜಿಗೆ ಹೋಗದೆ ಜೆಡಿಎಸ್‌ಗೆ ಬೆಂಬಲ ಘೋಷಿಸಿದೆ.











Click it and Unblock the Notifications