ರಿಯಾಕ್ಟ್ ಮಾಡುತ್ತಾರೆ ಅಂದ್ರೆ ಮೋದಿ ಆಗಮನದಿಂದ ಭಯ ಬಂದಿದೆ ಎಂದರ್ಥ- ಆರ್.ಅಶೋಕ್
ರಾಮನಗರ, ಮೇ 03: 2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧೆಯಿಂದ ಹೈವೊಲ್ಟೇಜ್ ಕ್ಷೇತ್ರ ಎನಿಸಿರುವ ಕನಕಪುರ ಕ್ಷೇತ್ರಕ್ಕೆ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಂದಿರುವುದು ನನಗೆ ಬೂಷ್ಟರ್ ತರಹ ಎಂದು ಬಿಜೆಪಿ ಆಭ್ಯರ್ಥಿ ಆರ್.ಅಶೋಕ್ ಹೇಳಿದ್ದಾರೆ.
ಕನಕಪುರದ ಖಾಸಗಿ ತೋಟದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಆರ್.ಅಶೋಕ್ ಪರ ಮತಯಾಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್, ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಂದಿರುವುದು ನನಗೆ ಬೂಷ್ಟರ್ ತರಹ. ಅವರು ಜನರಿಗೆ ಕಾರ್ಯಕರ್ತರಿಗೆ ಬಿಜೆಪಿ ಬಗ್ಗೆ ಅರಿವು ಮೂಡಿಸಿದ್ದಾರೆ.ಇದರಿಂದ ಕನಕಪುರ ಜನತೆ ಕೂಡ ಬಿಜೆಪಿ ಕಡೆ ಬರುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರಲ್ಲ, ಯಾರು ಬಂದರೂ ಜೆಡಿಎಸ್ ಟಚ್ ಮಾಡಲು ಸಾಧ್ಯವಿಲ್ಲ ಎನ್ನುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ಇದು ದೇವೇಗೌಡರ ಹಳೆಯ ಡೈಲಾಗ್. ಮೋದಿ ರಾಜ್ಯಕ್ಕೆ ಬಂದರೆ ಅವರು ಯಾಕೆ ಭಯಬೀಳುತ್ತಿದ್ದಾರೆ?. ಮೋದಿ ಬಂದರೆ ಯಾಕೆ ರಿಯಾಕ್ಟ್ ಮಾಡುತ್ತಾರೆ. ಮೋದಿ ಆಗಮನ ಅವರಿಗೆ ಭಯ ಬಂದಿದೆ ಎಂದರ್ಥ. ಮೋದಿ ಬಂದ ಭಾಗಗಳಲ್ಲಿ 25 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಹೀಗಾಗಿ ಅವರನ್ನು ವಿರೋಧ ಪಕ್ಷಗಳು ಅಟ್ಯಾಕ್ ಮಾಡುತ್ತಾರೆ ಎಂದರು.
ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ರಾಷ್ಟ್ರ ನಾಯಕರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತ ಬರಬೇಕು ಎಂದು ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಚನ್ನಪಟ್ಟಣಕ್ಕೆ ಬಂದಿದ್ದು ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಆಭ್ಯರ್ಥಿಗಳ ಗೆಲುವಿಗೆ ಸಹಾಯ ಆಗುತ್ತದೆ ಎಂದರು.

ಬಡವರ ಪರ ಯೋಜನೆ ತರುವುದು ಕುಮಾರಸ್ವಾಮಿ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಡವರ ಪರ ಯಾವ ಯೋಜನೆಯನ್ನು ಕುಮಾರಸ್ವಾಮಿ ತಂದಿಲ್ಲ. ಅವರು ಆ ಯೋಜನೆಗಳನ್ನು ತಂದಿದ್ದರೆ ಅವರೇ ಮುಖ್ಯಮಂತ್ರಿ ಆಗಬೇಕಿತ್ತು. ಕುಮಾರಸ್ವಾಮಿ ಅವರು ಕರ್ನಾಟಕದ ಜನರ ಪರ ಯಾವತ್ತೂ ನಿಂತಿಲ್ಲ. ಅವರು ಕುಟುಂಬದ ಪರ ಮಾತ್ರ ನಿಂತಿದ್ದಾರೆ. ಇದನ್ನೇ ಮೋದಿ ಅವರು ಎಲ್ಲಾ ಕಡೆ ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ, ದೇವೇಗೌಡರ ಕುಟುಂಬ ರಾಜಕಾರಣ ಹೋಗಬೇಕು. ಪ್ರಜಾಪ್ರಭುತ್ವ ಬರಬೇಕು ಎಂದು. ಪ್ರಜಾಪ್ರಭುತ್ವ ಉಳಿಸಲು ಮೋದಿ ಅವರು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಪದ್ಮನಾಭ ನಗರದಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರದ ವೇಳೆ ನನ್ನನ್ನೂ ಬೈದಿದ್ದಾರೆ. ಅದನ್ನೆಲ್ಲಾ ನಾವು ಎದುರಿಸುತ್ತೇವೆ. ಕನಕಪುರದಲ್ಲಿ ಸ್ಪರ್ಧೆ ಮಾಡುವ ಅವಕಾಶವನ್ನು ಪಕ್ಷ ನನಗೆ ನೀಡಿದೆ. ಇದಕ್ಕಾಗಿ ನಾನು ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ. ಕನಕಪುರದಲ್ಲಿ ಬಿಜೆಪಿ ಗೆಲ್ಲಿಸಿ ಇತಿಹಾಸ ಬರೆಯಲು ನಾನು ಬಂದಿದ್ದೇನೆ ಎಂದರು.
ಕನಕಪುರದಲ್ಲಿ ಆರ್.ಅಶೋಕ್ ಭರ್ಜರಿ ಪ್ರಚಾರ
ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಸಾಫ್ಟ್‌ಕಾರ್ನರ್ ನಿಲುವು ಹೊಂದಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುದಿಲ್ಲ ಎಂಬ ಅಪಖ್ಯಾತಿಯಿಂದ ಮುಕ್ತವಾಗಲು ಬಿಜೆಪಿ ವರಿಷ್ಠರು ಕಂದಾಯ ಸಚಿವ ಆರ್.ಅಶೋಕ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಯಾವುದೇ ಪಕ್ಷದ ಪ್ರಭಾವಿ ಅಭ್ಯರ್ಥಿಗಳ ವಿರುದ್ಧ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಸುತ್ತೇವೆ ಎಂಬ ಸಂದೇಶ ರವಾನಿಸಿತ್ತು.
ಆರ್.ಅಶೋಕ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಅಶೋಕ್ ಅವರ ಸ್ಪರ್ಧೆ ಕೇವಲ ನೆಪ ಮಾತ್ರ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಕ್ಷೇತ್ರ ಚುನಾವಣಾ ಪ್ರಚಾರದ ಹೊಣೆಯನ್ನು ವಹಿಸಿಕೊಂಡ ನಾಯಕರು ಕ್ಷೇತ್ರಕ್ಕೆ ಸಾಲು ಸಾಲು ರಾಷ್ಟ್ರ ಹಾಗೂ ರಾಜ್ಯದ ನಾಯಕರನ್ನು ಕರೆತಂದು ಚುನಾವಣಾ ಪ್ರಚಾರ ಮಾಡುವ ಮೂಲಕ ಕನಕಪುರದಲ್ಲಿ ಗೆಲುವಿಗಾಗಿ ಶತ ಪ್ರಯತ್ನ ನಡೆಸುತ್ತಿದ್ದಾರೆ.












Click it and Unblock the Notifications