ಭೂ ಕಬಳಿಕೆ ಆರೋಪದ ಬಗ್ಗೆ ಸಂಸದ ಸಿಎನ್ ಮಂಜುನಾಥ್ ಹೇಳಿದ್ದೇನು?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿಎನ್ ಮಂಜುನಾಥ್ ಅವರ ಮೇಲೆ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಬಗ್ಗೆ ಸಂಸದ ಮಂಜುನಾಥ್ ಅವರು ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.
ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಭೂ ಕಬಳಿಕೆ ಮಾಡಿದ್ದಾರೆಂಬ ಆರೋಪ ನಿನ್ನೆಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ವಾಸ್ತವವಾಗಿ 1996ರಲ್ಲಿ ನಮ್ಮ ತಂದೆಯವರಾದ ನಂಜಪ್ಪ ಉರುಫ್ ಚಾಮರಾಜೇಗೌಡ ಅವರು ಕೇತಗಾನಹಳ್ಳಿಯಲ್ಲಿ 3 ಎಕರೆ 25 ಗುಂಟೆ ಜಮೀನನ್ನು ಕ್ರಮಬದ್ಧವಾಗಿ ಖರೀದಿಸಿದ್ದರು. ಅವರ ನಂತರ ಅದು ನನ್ನ ಹೆಸರಿಗೆ ವರ್ಗಾವಣೆಯಾಗಿದೆ. ಈ ಎಲ್ಲವೂ ಕ್ರಮಬದ್ಧವಾಗಿ, ಕಾನೂನಾತ್ಮಕವಾಗಿ ನಡೆದಿದ್ದು, ಯಾವುದೇ ರೀತಿಯ ಒತ್ತುವರಿ ನಡೆದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ನಾನು ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲೂ ತಿಳಿಸಿರುತ್ತೇನೆ. ಇತ್ತೀಚಿಗೆ ಕೆಲವು ಮಾಧ್ಯಮಗಳಲ್ಲಿ ವಾಸ್ತವಾಂಶವನ್ನು ತಿರುಚಿ ಜನತೆಗೆ ತಪ್ಪು ಸಂದೇಶ ನೀಡುತ್ತಿರುವುದು ಹಾಗೂ ನನ್ನ ಹೆಸರಿಗೆ ಚ್ಯುತಿ ಬರುವ ರೀತಿ ಆರೋಪಗಳನ್ನು ಮಾಡುತ್ತಿರುವುದು ನನಗೆ ನೋವುಂಟು ಮಾಡಿದೆ. ಕಳೆದ ಅನೇಕ ದಶಕಗಳಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ. ನಾನು ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡಿಲ್ಲ. ನನ್ನ ಮೇಲೆ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಆರೋಪ?: ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಗೆ ಬರುವ ಕೇತಗಾನಹಳ್ಳಿಯಲ್ಲಿ 71 ಎಕರೆ ಗೋಮಾಳ ಜಮೀನು ಕಬಳಿಕೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಆರೋಪ ಮಾಡಿದ್ದಾರೆ. ಈ ಕಬಳಿಕೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಾ ಸಿ.ಎನ್.ಮಂಜುನಾಥ್, ಡಿಸಿ ತಮ್ಮಣ್ಣ ಸೇರಿದಂತೆ ಹಲವರು ಶಾಮೀಲಾಗಿದ್ದಾರೆ ಎಂದು ದೂರಿದ್ದರು. ಅಲ್ಲದೆ ಇದಕ್ಕೆ ಸ್ಥಳೀಯರ ಬೆಂಬಲ ಕೊಟ್ಟರೆ ಈ ಕೇಸ್ ವಿಚಾರವಾಗಿ ಹೋರಾಡುತ್ತೇನೆ ಎಂದು ಬಾಂಬ್ ಸಿಡಿಸಿದ್ದರು.

ಸದ್ಯ ಈ ವಿಚಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ.ಸಿಎನ್ ಮಂಜುನಾಥ್ ಅವರು ಈ ಹಿಂದೆ ವೈದ್ಯಕೀಯ ವೃತ್ತಿಯಲ್ಲಿ ಹೃದಯದ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದರು. ಜಯದೇವ ಆಸ್ಪತ್ರೆಯಲ್ಲಿ ಅವರ ಸೇವೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಬಳಿಕ ದಿಢೀರನೆ ಅವರು ರಾಜಕೀಯಕ್ಕೆ ಬಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರೂ ಆಗಿದ್ದಾರೆ. ಮಂಜುನಾಥ್ ಅವರ ಮೇಲೆ ಇದೀಗ ಆರೋಪ ಕೇಳಿಬಂದಿದೆ.
ಸಿಎನ್ ಮಂಜುನಾಥ್ ಅವರ ಮೇಲಿನ ಆರೋಪದ ಬಗ್ಗೆ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಹಾರ್ಟ್ ಸರ್ಜನ್‌ನ ಹಾರ್ಟ್ ಬ್ರೇಕಿಂಗ್ ಸ್ಟೋರಿ! ಕೇತಗಾನಹಳ್ಳಿಯಲ್ಲಿ 71 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಸುವ ಮೂಲಕ ಸಂಸದರಾಗಿ ಆಯ್ಕೆಯಾದ ಕೇವಲ 7 ತಿಂಗಳಿನಲ್ಲಿಯೇ ತಮ್ಮ ಭ್ರಷ್ಟಾಚಾರದ ವರಸೆ ತೋರಿದರಾ ಡಾ.ಮಂಜುನಾಥ್? ಎಂದು ಟೀಕಿಸಿದೆ.












Click it and Unblock the Notifications