ಮಾಜಿ ಸಿಎಂ ಎಚ್ಡಿಕೆ ಕ್ಷೇತ್ರದಲ್ಲಿ ಸಿಹಿ ಹಂಚಿದ ಬಿಜೆಪಿ ಕಾರ್ಯಕರ್ತರು
ಚನ್ನಪಟ್ಟಣ, ಡಿಸೆಂಬರ್ 9: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಉಸ್ತುವಾರಿಯ ಕ್ಷೇತ್ರದ ಸೋಲಿನ ನಡುವೆಯೂ 13 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್ ಡಿಕೆ ಪ್ರತಿನಿಧಿಸುವ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿಪಿವೈಗೆ ಜೈಕಾರ ಹಾಕಿದರು.
ಉಪ ಚುನಾವಣೆ ಘೋಷಣೆಯಾದ ಪ್ರಾರಂಭದಲ್ಲಿ ಹುಣಸೂರಿನಿಂದ ಸಿಪಿವೈ ಸ್ಪರ್ಧೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಪಿವೈ ಬೆಂಬಲಿಗರು ಪೋಸ್ಟ್ ಗಳನ್ನು ಹರಿಬಿಟ್ಟಿದ್ದರು. ಆದರೆ ಕೊನೆ ಗಳಿಗೆಯಲ್ಲಿ ವಿಶ್ವನಾಥ್ ಸ್ಪರ್ಧೆ ಮಾಡಿದ್ದರು. ಸಿ.ಪಿ.ಯೋಗೇಶ್ವರ್ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಈ ಚುನಾವಣೆಯಲ್ಲಿ ವಿಶ್ವನಾಥ್ ಸೋಲು ಅನುಭವಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರರಲ್ಲಿ ಸಿಪಿವೈ ಉಸ್ತುವಾರಿ ಕ್ಷೇತ್ರ ಸೋತ ಬೇಸರವಿದ್ದರೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.












Click it and Unblock the Notifications