ಸಿಎಂ ಬಗ್ಗೆ ಅವಹೇಳನಕಾರಿ ಪೋಸ್ಟ್ : ಚನ್ನಪಟ್ಟಣದಲ್ಲಿ ದೂರು ದಾಖಲು
ರಾಮನಗರ, ಆಗಸ್ಟ್.10:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಸಿದ್ದನಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಸಿದ್ದೇಗೌಡ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, "ಕುಮಾರಸ್ವಾಮಿ ಅವರ ಸಾಧನೆ ಅಂದ್ರೆ ರಾಮನಗರಕ್ಕೆ ಮುನೀರ್ ಎಂಬ ಉಗ್ರನಿಗೆ ಆಶ್ರಯ ನೀಡಿದ್ದು, ಉಗ್ರ ಮುನೀರ್ ಬಗ್ಗೆ ಕುಮಾರಸ್ವಾಮಿ ಏನಂತಾರೆ? ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಅವನು ರೈತನೇ ಎನ್ನುವರು" ಎಂದು ಪೋಸ್ಟ್ ಮಾಡಿದ್ದಾನೆ.

ಈ ಪೋಸ್ಟ್ ಇದೀಗ ತಾಲೂಕಿನಲ್ಲಿ ಸದ್ದು ಮಾಡುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಫೇಸ್ ಬುಕ್ ನಲ್ಲಿ ಸಿದ್ದೇಗೌಡಗೆ ಎಗ್ಗಾ ಮಗ್ಗಾ ಜಾಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಣ್ಣ ಎಂಬುವರು ಸಿದ್ದೇಗೌಡ ವಿರುದ್ಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರು ದಾಖಲಿಸಿಕೊಂಡು ಎಫ್ಐರ್ ಹಾಕಿರುವ ಪೊಲೀಸರು ಸಿದ್ದೇಗೌಡನ ಬಂಧಿಸಲು ಬಲೆ ಬೀಸಿದ್ದಾರೆ.












Click it and Unblock the Notifications