ಬಾವಿಗೆ ಬಿದ್ದಿದ್ದು ಎರಡು ಕರಡಿ, ಆದರೆ ಕಂಡಿದ್ದು ಮಾತ್ರ ಒಂದೇ
ರಾಮನಗರ, ನವೆಂಬರ್ 15: ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬಂದು ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳು ರಾಮನಗರ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.
ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಆಹಾರ ಅರಸಿ ಬಂದ ಎರಡು ಕರಡಿಗಳು ಬಾವಿಯೊಂದರಲ್ಲಿ ಬಿದ್ದಿದ್ದವು. ಆದರೆ ಒಂದು ಕರಡಿ ಮಾತ್ರ ಕಂಡುಬಂದಿದೆ. ಅಧಿಕಾರಿಗಳು ಸ್ಥಳ ಪರೀಕ್ಷಿಸಿ ಬಾವಿಗೆ ಏಣಿ ಬಿಟ್ಟು ಅದಕ್ಕೆ ಸುತ್ತಲೂ ರಕ್ಷಣೆ ಒದಗಿಸಿ ಕರಡಿ ಮೇಲೆ ಬರುವಂತೆ ಸಹಾಯ ಮಾಡಿದ್ದರು.
ಕೂಡಲೇ ಅಗ್ನಿಶಾಮಕ ದಳದ ಸಹಾಯ ಪಡೆದು ದೊಡ್ಡ ಏಣಿ ಬಿಟ್ಟಿದ್ದರು. ಅದರ ಸಹಾಯದಿಂದ ಮೇಲೆ ಬಂದ ಕರಡಿ ಕಾಡಿನತ್ತ ಓಡಿತ್ತು. ಈ ಘಟನೆಯಾದ ಎರಡು ದಿನಗಳ ನಂತರ, ಅಂದರೆ ಇಂದು ಬೆಳಿಗ್ಗೆ ಮತ್ತೊಂದು ಕರಡಿಯ ಶವ ಬಾವಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.

ಬಾವಿಯಲ್ಲಿ ನೀರಿದ್ದ ಕಾರಣ ಮತ್ತೊಂದು ಕರಡಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕರಡಿ ಮೃತದೇಹ ಬಾವಿಯಲ್ಲಿ ತೇಲುತ್ತಿರುವುದನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.












Click it and Unblock the Notifications