Karnataka assembly election 2023: ಮಾಗಡಿ ಕ್ಷೇತ್ರದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ನಡುವೆ ಟಾಕ್ ವಾರ್ ಶುರು
ರಾಮನಗರ, ಜನವರಿ, 09: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಈಗಾಗಲೇ ಎಲ್ಲೆಡೆ ಚುನಾವಣೆ ಕಾವು ರಂಗೇರಿದೆ. ಹಾಗೆಯೇ ಮಾಗಡಿ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ವಾಕ್ ಸಮರ ತಾರಕ್ಕೇರಿದೆ. ಹಾಲಿ ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಮುಂದಾಗಿದ್ದರು ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದರು. ಇದೀಗ ಇದೇ ಹೇಳಿಕೆ ಕ್ಷೇತ್ರದಲ್ಲಿ ಇಬ್ಬರು ನಾಯಕರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಎ.ಮಂಜುನಾಥ್, ಹಿಂದೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಸಮಯದಲ್ಲಿ ನನನ್ನು ಸಿ.ಪಿ.ಯೋಗೇಶ್ವರ್ ಸಂಪರ್ಕಿಸಿ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದು ನಿಜ. ಆದರೆ ಅಂದೇ ಅವರ ಆಹ್ವಾನವನ್ನು ತಿರಸ್ಕಾರ ಮಾಡಿದ್ದೇನೆ. ನಿಮಗೆ ಈ ಬಗ್ಗೆ ಮಾಹಿತಿ ಬೇಕಿದ್ದರೆ ಸಿ.ಪಿ.ಯೋಗೇಶ್ವರ್ ಬಳಿ ದೃಢಪಡಿಸಿಕೊಳ್ಳಿ ಎಂದು ಟಾಂಗ್ ನೀಡಿದರು.

ದೇವರ ಮೇಲೆ ಪ್ರಮಾಣ ಮಾಡಿ
ನಾನು ಮಾಜಿ ಶಾಸಕರ ರೀತಿ ಸೇಲ್ ಆಗುವ ಗಿರಾಕಿ ಅಲ್ಲ. ಬೇಕಿದ್ದರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಮಾಗಡಿ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಎ.ಮಂಜುನಾಥ್, ಬಾಲಕೃಷ್ಣ ಅವರನ್ನು ದೇವರ ಮುಂದೆ ಪ್ರಮಾಣ ಮಾಡಲು ಆಹ್ವಾನ ನೀಡಿ. "ನಾನು ನಿಮ್ಮ ಹಾಗೆ ಹಲ್ಕಾ ಅಲ್ಲ, ನಿಯತ್ತಿನ ನಾಯಿಯಾಗಿದ್ದೇನೆ." ನನಗೂ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ. ಆದರೆ ಬಾಲಕೃಷ್ಣನ ರೀತಿ ಮಣ್ಣು ತಿನ್ನುವ ಕೆಲಸವನ್ನು ಮಾಡಲಿಲ್ಲ. ನಿಮ್ಮ ಹಾಗೆ ಪಕ್ಷ ದ್ರೋಹ ಮಾಡಿ 10ಕೋಟಿಗೆ ತಲೆಮಾರಿಕೊಳ್ಳುವ ಕೆಲಸವನ್ನು ಮಾಡಲಿಲ್ಲ ಎಂದು ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.
ನಿಯತ್ತಿನ ನಾಯಿ ಆಗಿದ್ದೇನೆ
ಎಚ್‌ಡಿಕೆ ಹೆಸರಲ್ಲಿ ನಾಯಿ ನರಿಗಳೆಲ್ಲ ಗೆದ್ದಿವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮಾಜಿ ಶಾಸಕ ಬಾಲಕೃಷ್ಣಗೆ ಆತ್ಮಸಾಕ್ಷಿ ಇದ್ಯಾ? ಈ ಹಿಂದೆ ಅವರೂ ಜೆಡಿಎಸ್‌ನಿಂದ ಗೆದ್ದಿದ್ದರು. ಹಾಗಿದ್ದರೆ ಇವರೇನು?. ಬಾಲಕೃಷ್ಣ ಅವರಿಗೆ ಮಾತಿನಲ್ಲಿ ಹಿಡಿತ ಇರಬೇಕು. ನಾನು ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರುಗಳ ಆಶೀರ್ವಾದಲ್ಲಿ ಗೆದ್ದಿದ್ದೇನೆ. ನೇರವಾಗಿ ಬಿಜೆಪಿ ಸಚಿವರ ಮನೆಗೆ ಹೋಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇನೆ. ನಾನು ತಾಲೂಕಿನ ಜನರಿಗಾಗಿ ಕೆಲಸ ಮಾಡುವ ನಿಯತ್ತಿನ ನಾಯಿ ಆಗಿದ್ದೇನೆ. ನಾನು ಹೊಟ್ಟೆ ಪಾಡಿಗಾಗಿ ರಾಜಕಾರಣಕ್ಕೆ ಬಂದಿಲ್ಲ. ನಿಮ್ಮನ್ನು ಮನೆಗೆ ಕಳುಹಿಸಲು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸವಾಲ್ ಹಾಕಿದರು.












Click it and Unblock the Notifications