ಮಗುವಿನ ಡೈಪರ್ಗೆ ಖಾರದಪುಡಿ ಹಾಕಿ ಅಂಗನವಾಡಿ ಸಹಾಯಕಿ ವಿಕೃತಿ
ರಾಮನಗರ, ಮಾರ್ಚ್ 21: ಮನೆಯಲ್ಲೇ ಪೋಷಕರ ಜೊತೆಗೆ ಇದ್ದ ಮಗು ಇತರ ಮಕ್ಕಳ ಜೊತೆ ಬೆರೆಯಲಿ, ಹೊಸತೇನಾದರೂ ಕಲಿಯಲಿ ಎಂದು ತಂದೆ-ತಾಯಿ ಸಮೀಪದ ಅಂಗನವಾಡಿಗೆ ಬಿಡುವುದು ಸರ್ವೇ ಸಾಮಾನ್ಯ. ಮಗುವಿಗೆ ಮುಂದೆ ಒಂದನೇ ತರಗತಿ ಶಾಲೆಗೆ ಹೋಗಲು ಅಭ್ಯಾಸವಾಗಲಿ ಎನ್ನುವ ಕಾರಣಕ್ಕೆ ಅನೇಕ ಪೋಷಕರು ಮಗು ಅತ್ತರೂ, ಕಿರುಚಾಡಿದರೂ ಅಂಗನವಾಡಿ ಶಾಲೆಗೆ ಬಿಟ್ಟು ಬರುತ್ತಾರೆ.
ಅಲ್ಲಿಯವರೆಗೂ ಮನೆಯ ಜನರ ಮುದ್ದಿನಲ್ಲಿದ್ದ ಮಗು ಒಮ್ಮೆಲೆ ಅಪರಿಚಿತರನ್ನು ಕಂಡರೆ, ಅದರಲ್ಲೂ ತಂದೆ-ತಾಯಿ ಬಿಟ್ಟು ಹೋಗುತ್ತಾರೆ ಅಂತಾ ಗೊತ್ತಾದ ತಕ್ಷಣ ಅಳುವುದು, ಹಠ ಮಾಡುವುದು ಮಾಡಿಯೇ ಮಾಡುತ್ತಾರೆ. ಈ ವೇಳೆ ಮಕ್ಕಳನ್ನು ಸಂತೈಸುವುದು ಅವರನ್ನು ಶಾಲೆಯಲ್ಲಿ ಖುಷಿಯಾಗಿ ನೋಡಿಕೊಳ್ಳುವುದು ಅಂಗನವಾಡಿ ಶಿಕ್ಷಕಿ ಹಾಗೂ ಅಂಗನವಾಡಿ ಸಹಾಯಕಿಯ ಕರ್ತವ್ಯ.

ಪೋಷಕರು ಕೂಡ ಅದೇ ನಿರೀಕ್ಷೆಯಲ್ಲಿರುತ್ತಾರೆ. ಅನೇಕ ಅಂಗನವಾಡಿ ಸಹಾಯಕಿಯರು ತಮ್ಮ ಶಾಲೆಯಲ್ಲಿರುವ ಪ್ರತಿ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಪೋಷಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನೆಲ್ಲಾ ಸಿಟ್ಟನ್ನು ಅಂಗನವಾಡಿಗೆ ಬಂದ ಮಗುವಿನ ಮೇಲೆ ತೋರಿಸಿ, ಈಗ ಕೆಲಸ ಕಳೆದುಕೊಂಡು ಮನೆ ಸೇರಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹರಾಜಕಟ್ಟೆ ಗ್ರಾಮದ ಅಂಗನವಾಡಿಯ ಸಹಾಯಕಿ ಮಗು ಹಠ ಮಾಡುತ್ತಿದೆ ಎಂದು ಮಗುವಿನ ಕೈಗೆ ಬರೆ ಎಳೆದು, ಡೈಪರ್ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹರಾಜಕಟ್ಟೆ ಗ್ರಾಮದ ರಮೇಶ್ ಹಾಗೂ ಚೈತ್ರಾ ಎನ್ನುವವರ ಮಗುವನ್ನು ಮನೆ ಸಮೀಪದ ಅಂಗನವಾಡಿಯಲ್ಲಿ ಬಿಡಲಾಗಿತ್ತು. ಈ ವೇಳೆ ಮಗು ಹಠ ಮಾಡಿದ್ದು, ಅಂಗನವಾಡಿಯ ಸಹಾಯಕಿ ಚಂದ್ರಮ್ಮ ಆತನ ಕೈಗೆ ಬರೆ ಹಾಕಿ, ಡೈಪರ್ ಒಳಗೆ ಖಾರದಪುಡಿ ಹಾಕಿದ್ದಾರೆ ಎನ್ನಲಾಗಿದೆ. ಮತ್ತೆ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ಪೋಷಕರು ಇದನ್ನು ಗಮನಿಸಿದ್ದು, ತಕ್ಷಣವೇ ಅಂಗನವಾಡಿಯ ಸಹಾಯಕಿ ಚಂದ್ರಮ್ಮನ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬೆನ್ನೆಲ್ಲೇ ಚಂದ್ರಮ್ಮನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.












Click it and Unblock the Notifications