ರಾಮನಗರ: ಸರ್ಕಾರಿ ಬಾಲ ಮಂದಿರದಿಂದ 7 ಬಾಲಕಿಯರು ಪರಾರಿ
ರಾಮನಗರ, ಜುಲೈ 15: ಸರ್ಕಾರಿ ಬಾಲ ಮಂದಿರದ ರಕ್ಷಣೆಯಲ್ಲಿದ್ದ 7 ಬಾಲಕಿಯರು ಪರಾರಿಯಾಗಿರುವ ಘಟನೆ ರಾಮನಗರದ ಮಲ್ಲೇಶ್ವರ ಬಡಾವಣೆಯಲ್ಲಿರುವ ಬಾಲ ಮಂದಿರದಲ್ಲಿ ನಡೆದಿದೆ.
Recommended Video
ನಗರದ ಮಲ್ಲೇಶ್ವರ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ ಸ್ಥಳಾಂತರಗೊಂಡಿದ್ದ ಬಾಲ ಮಂದಿರದಿಂದ 8 ಬಾಲಕಿಯರು ನಿನ್ನೆ ರಾತ್ರಿ 11 ಗಂಟೆ ವೇಳೆಯಲ್ಲಿ ಬಾಲಮಂದಿರದ ಮೇಲ್ಛಾವಣಿ ಹತ್ತಿ ಪರಾರಿಯಾಗಿದ್ದಾರೆ.
ತಕ್ಷಣವೇ ಎಚ್ಚೆತ್ತ ಪೊಲೀಸರು ಹಾಗೂ ಬಾಲ ಮಂದಿರದ ಸಿಬ್ಬಂದಿ ಓರ್ವ ಬಾಲಕಿಯನ್ನು ಸ್ವಲ್ಪ ದೂರದಲ್ಲಿ ಪತ್ತೆ ಮಾಡಿದ್ದು, ಇನ್ನುಳಿದ ಏಳು ಬಾಲಕಿಯರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಇನ್ನು ಬಾಲಕಿಯರು ಪರಾರಿಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದ ಬಾಲಕಿಯರ ಪತ್ತೆಗೆ ಮುಂದಾಗಿದ್ದಾರೆ.
ಈ ಹಿಂದೆ ಬಾಲ ಮಂದಿರವು ಬೆಂಗಳೂರು-ಮೈಸೂರು ಹೆದ್ದಾರಿ ವಂದಾರಗುಪ್ಪೆ ಗ್ರಾಮದ ಬಳಿ ಇದ್ದಾಗ ಎರಡು ಬಾರಿ ಬಾಲಕಿಯರು ಪರಾರಿಯಾಗಲು ಯತ್ನಿಸಿ ವಿಫಲರಾಗಿದ್ದರು. ಇದೇ ಕಾರಣಕ್ಕಾಗಿ ಬಾಲ ಮಂದಿರವನ್ನು ಮಲ್ಲೇಶ್ವರ ಬಡವಾಣೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಬಾರಿ ವಾರ್ಡನ್ ಕಣ್ತಪ್ಪಿಸಿ ಬಾಲಕಿಯರು ಎಸ್ಕೇಪ್ ಆಗಿದ್ದಾರೆ.












Click it and Unblock the Notifications