Get Updates
Get notified of breaking news, exclusive insights, and must-see stories!

ರಾಯಚೂರು: ಹಳ್ಳ ಹಿಡಿದ್ವು ಪಶುಗಳಿಗೆ ಸಂಜೀವಿನಿ ಆಗಬೇಕಿದ್ದ 9 ಆಂಬ್ಯುಲೆನ್ಸ್‌ಗಳು, ಇದಕ್ಕೆ ಪ್ರಮುಖ ಕಾರಣ ಏನು?

ರಾಯಚೂರು, ಆಗಸ್ಟ್‌, 16: ರಾಯಚೂರು ಜಿಲ್ಲೆಯಲ್ಲಿರುವ ಪಶು ಪಾಲನೆ ಮತ್ತು ವೈದ್ಯಕೀಯ ಇಲಾಖೆಗೆ ಸರ್ಕಾರ ನೀಡಿದ ಸಂಚಾರಿ ಪಶು ಚಿಕಿತ್ಸಾ ಪಾಲಿಕ್ಲಿನಿಕ್ ವಾಹನಗಳು ನಿಂತ ಜಾಗ ಬಿಟ್ಟಿಲ್ಲ. ಈ ಹಿಂದಿನ ಸರ್ಕಾರ ಪಶು ಸಂಗೋಪನೆ ಇಲಾಖೆಗೆ ಪಶು ಪಾಲನೆ ಮತ್ತು ವೈದ್ಯ ಸೇವಾ ಇಲಾಖೆ ಎಂದು ಹೆಸರು ಬದಲಿಸಿದ್ದು ಬಿಟ್ಟರೆ ಹದಗೆಟ್ಟ ವ್ಯವಸ್ಥೆ ಸುಧಾರಿಸಲೇ ಇಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ.

ಅಲ್ಲದೆ ಒಂದು ವರ್ಷದ ಹಿಂದೆ ನೀಡಿದ ಪಶು ಶಸ್ತ್ರ ಚಿಕಿತ್ಸಾ ಪಾಲಿ ಕ್ಲಿನಿಕ್‌ನ ಆಂಬ್ಯುಲೆನ್ಸ್‌ಗಳು ಉದ್ಘಾಟನೆ ದಿನ ಜಾಗ ಬಿಟ್ಟು ಮರಳಿ ಅಲ್ಲಿಯೇ ನಿಂತಿದ್ದು, ಒಂದಿಂಚು ಕದಲಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ರಾಯಚೂರು ಜಿಲ್ಲೆಗೆ ಹಿಂದಿನ ಬಿಜೆಪಿ ಸರ್ಕಾರ ಸುಸಜ್ಜಿತ ಜಾನುವಾರುಗಳಿಗೆ ಅಗತ್ಯ ಇರುವ ವೈದ್ಯಕೀಯ ಪರಿಕರಗಳನ್ನೊಳಗೊಂಡ ಸುಮಾರು ಕೋಟಿ ವೆಚ್ಚದಲ್ಲಿ 9 ಸಂಚಾರಿ ವಾಹನಗಳನ್ನು ನೀಡಿತ್ತು.

Veterinary clinic Ambulances reached for repair in Raichur district

ಅವುಗಳ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಒಂದು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಅಲ್ಲದೆ ಆಂಬ್ಯುಲೆನ್ಸ್ ನಿರ್ವಹಣೆ ಜವಾಬ್ದಾರಿ ಹೊತ್ತ ಏಜೆನ್ಸಿಗೆ ಚಾಲಕ ಕಂ ಅಟೆಂಡರ್, ಓರ್ವ ವೈದ್ಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ ಮುಗಿಸಿದ ಓರ್ವ ಸಿಬ್ಬಂದಿ ಒದಗಿಸಬೇಕಿತ್ತು. ಆದರೆ, ಆ ಸಂಸ್ಥೆ ಕಾರ್ಯಾರಂಭ ಮಾಡುವಲ್ಲಿ ಎಡವಿದ್ದಲ್ಲದೆ ಸರ್ಕಾರ ಬದಲಾಗುತ್ತಿದ್ದಂತೆ ಮಾಹಿತಿ ಪಡೆದ ಇಲಾಖೆ ಸಚಿವರು ಏಜೆನ್ಸಿಯನ್ನು ಬದಲಿಸಿದ್ದು ಮತ್ತಷ್ಟು ಕಗ್ಗಂಟಾಗಿದೆ.

ತಾಲೂಕಿಗೊಂದು ವಾಹನ ನೀಡಿ ಉಳಿದ ಎರಡು ಆಂಬ್ಯುಲೆನ್ಸ್ ಜಿಲ್ಲಾ ಕೇಂದ್ರದಲ್ಲಿರಿಸಿಕೊಳ್ಳುವ ಚಿಂತನೆ ಕಾರ್ಯರೂಪಕ್ಕೆ ಬಂದಿಲ್ಲ. ಈ ಸಂಚಾರಿ ವಾಹನಗಳು ರಸ್ತೆಗೆ ಇಳಿದಿದ್ದರೆ ರೈತರು ತಮ್ಮ ಜಾನುವಾರುಗಳಿಗೆ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬರುವ ವಿವಿಧ ಕಾಯಿಲೆಗಳಿಗೆ ದೂರದ ಊರಿಗೆ ಹೋಗುವ ಅಥವಾ ಖಾಸಗಿ ಪಶು ವೈದ್ಯರ ಅವಲಂಬಿಸುವುದು ತಪ್ಪಿಸಬಹುದಾಗಿತ್ತು.

ಆದರೆ ಇದೀಗ ಈ ವ್ಯವಸ್ಥೆ ಇಲ್ಲದ ಕಾರಣ ದುಬಾರಿ ಹಣ ನೀಡಿ ರೈತರು ಜಾನುವಾರು, ಪ್ರಾಣಿ, ಪಕ್ಷಿ, ಕುರಿ, ಮೇಕೆಗಳಿಗೆ ಬರುವ ವಿವಿಧ ರೋಗ, ಶಸ್ತ್ರ ಚಿಕಿತ್ಸೆಯನ್ನು ಕೊಡಿಸುವುದು ಅನಿವಾಚಿವಾಗಿದೆ. ಈ ಸಂಚಾರಿ ವಾಹನಗಳ ಮೂಲಕ ಸ್ಥಳದಲ್ಲಿಯೇ ಅಗತ್ಯವಾದ ಆಧುನಿಕ ಸೌಲಭ್ಯ ಉಳ್ಳ ವೈದ್ಯಕೀಯ ಸಾಮಾಗ್ರಿಗಳೊಂದಿಗೆ ಸಿಗಬೇಕಿತ್ತು.

ಆದರೆ ರಾಯಚೂರು ಜಿಲ್ಲೆಗೆ ನೀಡಿದ ಆಂಬ್ಯುಲೆನ್ಸ್ ನಿರ್ವಹಣೆ ಹೊಣೆ ಹೊತ್ತಿದ್ದ ಹಿಂದಿನ ಎಡ್ಯುಸ್ಟಾರ್ಕ್‌ ಸಂಸ್ಥೆಯವರು ಇಲಾಖೆಯ ಉಪ ನಿರ್ದೇಶಕರಿಗೆ ಆ ವಾಹನಗಳ ಬೀಗವನ್ನೂ ನೀಡಿಲ್ಲ. ಅದರೊಳಗೆ ಏನಿದೆ ಎನ್ನುವ ಬಗ್ಗೆಯೂ ಹೇಳದೆ ಕೇಳದೆ ಹೋಗಿರುವುದು ಇದೀಗ ಬೆಳಕಿಗೆಬಂದಿದೆ. ಈ ಬಗ್ಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಲ್ಲದೆ ವಾರದ ಹಿಂದೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದರೂ ಸಂಚಾರಿ ವಾಹನಗಳ ಕೀಲಿ ಮಾತ್ರ ಈಗಲೂ ಅಧಿಕಾರಿಗಳ ಕೈಗೆ ಕೊಟ್ಟಿಲ್ಲ ಎನ್ನುವ ಸಂಗತಿ ಕುತೂಹಲ ಮೂಡಿಸಿದೆ.

ಹಲವು ಬಾರಿ ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳುತ್ತಾರೆ ಇಲ್ಲಿನ ಅಧಿಕಾರಿಗಳು. ಈ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಸಂಚಾರಿ ವಾಹನ ಸೇವೆ ಒದಗಿಸಲು ಮುಂದಾಗಿ ಕಾರ್ಯರೂಪಕ್ಕೆ ಯೋಜನೆ ತಲುಪಿಸದ ಎಡ್ಯು ಸ್ಟಾರ್ಕ ಸಂಸ್ಥೆಗೆ ನೀಡಿದ ಗುತ್ತಿಗೆ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದ್ದಾಗಿ ಗೊತ್ತಾಗಿದೆ.

ಈ ಬಗ್ಗೆ ಕಳೆದ ಮೂರು ದಿನಗಳ ಹಿಂದೆ ಇಲಾಖೆಯ ಆಯುಕ್ತರು ಉಪ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದ್ದು, ಉದ್ಭವ್ ಎನ್ನುವ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಆ ಸಂಸ್ಥೆಗೆ ಆದೇಶ ನೀಡಿವುದು ಬಾಕಿ ಇದ್ದು, ಆ ಸಂಸ್ಥೆಯಾದರೂ ಸಂಚಾರಿ ವಾಹನಗಳನ್ನು ರಸ್ತೆಗೆ ಇಳಿಸಿ ರೈತರಿಗೆ ಸೇವೆ ಸಿಗಬಹುದೆ ಎನ್ನುವ ಪ್ರಶ್ನೆ ಸದ್ಯ ಎದುರಾಗಿದೆ. ಒಟ್ಟಾರೆ ಕೋಟಿ ಹಣ ಕೊಟ್ಟು ಆಧುನಿಕ ಸ್ಪರ್ಶ ನೀಡಿ ರೈತರಿಗೆ ಸೇವೆ ನೀಡಬೇಕಿದ್ದ ಪಶು ಇಲಾಖೆ ಹೆಸರು ಬದಲಿಸಿದ್ದು ಬಿಟ್ಟರೆ ಸಂಚಾರಿ ವಾಹನ ನಿಂತಲ್ಲೇ ದುರಸ್ತಿಗೆ ಬಂದಿರುವುದು ದುರಂತವಾಗಿದೆ.

ಜಿಲ್ಲೆಗೆ ಸರ್ಕಾರ 9 ಸಂಚಾರಿ ವಾಹನಗಳನ್ನು ನೀಡಿದ್ದು, ಅದರ ನಿರ್ವಹಣೆ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಆದರೆ ಅವು ಕಾರ್ಯರಂಭವೇ ಆಗಿಲ್ಲ. ಇತ್ತೀಚೆಗೆ ಈ ಬಗ್ಗೆ ಗಮನಕ್ಕೆ ತಂದಿದ್ದರಿಂದ ಹೊಸ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದ್ದು, ಇನ್ನೊಂದು ವಾರದಲ್ಲಿ ಹಸ್ತಾಂತರವಾಗುವ ನಿರೀಕ್ಷೆಯಿದೆ. ಆಗ ಎಲ್ಲ ತಾಲ್ಲೂಕಿನಲ್ಲೂ ಈ ವಾಹನಗಳ ಓಡಾಟ ಆರಂಭವಾಗಲಿದೆ ಎನ್ನಲಾಗಿದೆ.

ವಾಹನದ ಬೀಗ ಹೋಳೆ ಏಜೆನ್ಸಿಯವರ ಬಳಿ ಇದ್ದು, ನಮ್ಮಲ್ಲಿ ಇಲ್ಲದ ಕಾರಣ ಅದರೊಳಗೆ ಏನಿವೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ರಾಯಚೂರು ಪಶು ಪಾಲನೆ ಇಲಾಖೆಯ ಉಪ ನಿರ್ದೇಶಕ ಅಶೋಕ ಕೋಲ್ಕರ್ ಹೇಳಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಜನರ ಆರೋಗ್ಯ ರಕ್ಷಣೆಗೆ ಜಾರಿ ಮಾಡಲಾದ 108 ಆಂಬ್ಯುಲೆನ್ಸ್ ಸೇವೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಸಿಗದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. ಹಿಂದುಳಿದ ಜಿಲ್ಲೆಯ ಜನರ ಆರೋಗ್ಯ ಸುಧಾರಣೆಗೆ ನೀಡಿರುವ ಆಂಬ್ಯುಲೆನ್ಸ್‌ಗಳು ನಿರ್ವಹಣೆ ಕೊರತೆ ಎದುರಿಸುತ್ತಿರುವುದು ಕಂಡುಬಂದಿದೆ.

ಆರಂಭದಲ್ಲಿ 108 ಅಂಬ್ಯುಲೆನ್ಸ್‌ಗಳು ಮೊದಲು ಜನರ ಜೀವ ರಕ್ಷಕ ಸಾಧನಗಳಾಗಿ ಕಾರ್ಯನಿರ್ವಹಿಸಿದ್ದವು. ನಂತರ ವಾಹನ ಚಾಲಕರಿಗೆ ಹಾಗೂ ಆಂಬ್ಯುಲೆನ್ಸ್‌ಗಳಲ್ಲಿ ಸಮರ್ಪಕ ಸೌಲಭ್ಯ ಒದಗಿಸಲಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹಿನ್ನಡೆಯೂ ಆಗಿದೆ. ಜಿಲ್ಲೆಗೆ ನೀಡಿರುವ ಕೆಲ ಆಂಬ್ಯೂಲೆನ್ಸ್‌ಗಳ ಟೈರ್‌ಗಳು ಪಂಕ್ಚರ್ ಆಗಿ 15ಕ್ಕಿಂತಲೂ ಹೆಚ್ಚು ದಿನಗಳಾಗಿವೆ. ಇನ್ನು ಕೆಲವು ವಾಹನಗಳ ಟೈರ್‌ಗಳು ಸಂಪೂರ್ಣ ಸವೆದು ತಂತಿಗಳು ಹೊರಬಂದಿವೆ.

ದುರಸ್ತಿಗೆ ಒಳಗಾದ ರಸ್ತೆಗಳಲ್ಲಿ 108 ವಾಹನಗಳು ಸಂಚರಿಸುವುದು ಅಸಾಧ್ಯವಾಗಿದೆ. ವಾಹನಗಳು ಕೆಟ್ಟು ನಿಂತರೂ ನಿರ್ವಹಣೆಗೆ ಅಥವಾ ಹೊಸ ಸಾಧನ ಅಳವಡಿಸಲು ಸಂಬಂಧಿಸಿದ ಏಜೆನ್ಸಿ ಗಮನಹರಿಸಿಲ್ಲ. ದುರಸ್ತಿಗೂ ಮುಂದಾಗಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜಿಲ್ಲೆಯ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ.

ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಪ್ರಾರಂಭ ಮಾಡಿದ ನಂತರ 2008ರಿಂದ 2014ರವರೆಗೆ ಕೇವಲ 18 ವಾಹನಗಳನ್ನು ಸರ್ಕಾರ ನೀಡಿತ್ತು. ಇದಾದ ನಂತರ ಮತ್ತೆ ಸರ್ಕಾರ 5 ವಾಹನಗಳನ್ನು ನೀಡಿತ್ತು. ಆದರೆ 108 ವಾಹನಗಳನ್ನು ಸರಿಯಾಗಿ ಬಳಕೆ ಮಾಡದ ಕಾರಣ 5 ವಾಹನಗಳು ರಿಪೇರಿಗೆ ಬಂದಿದ್ದು, ಇವುಗಳನ್ನು ನಗರದಲ್ಲಿ ನಿಲ್ಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 150 (ಎ) ಯಲ್ಲಿ ಹೆಚ್ಚಿನ ಅವಘಡಗಳು ಸಂಭವಿಸಲಿವೆ. ಇಂಟಿರಿಯರ್ ಪ್ರದೇಶಗಳ ಜನರಿಗೆ ತುರ್ತು ಸೇವೆಗೆ ಗ್ರಾಮೀಣ ಜನರು 108 ಆಂಬ್ಯುಲೆನ್ಸ್ ಗಳನ್ನೇ ಅವಲಂಬಿಸಿದ್ದಾರೆ. ಆದರೆ ಈ ವಾಹನಗಳು ಸುಸ್ಥಿತಿಯಲ್ಲಿ ಇಲ್ಲ. ಯಾವ ಸಂದರ್ಭದಲ್ಲಿ ಕೆಟ್ಟು ನಿಲ್ಲುತ್ತದೆ ಎಂಬುದು ಚಾಲಕನಿಗೂ ಗೊತ್ತಿಲ್ಲದಂತಾಗಿದೆ. ಟೈರ್‌ಗಳನ್ನು ಬದಲಾವಣೆ ಮಾಡದ ಕಾರಣ ತುರ್ತು ಸೇವೆ ಮರೀಚಿಕೆಯಾಗಿದೆ.

ರಾಯಚೂರು ಜಿಲ್ಲೆಯ ಕಲ್ಲೂರು, ಬಳಗಾನೂರು, ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳೆದ 4 ವರ್ಷದಿಂದ ಆಂಬ್ಯುಲೆನ್ಸ್‌ಗಳನ್ನು ಸರ್ಕಾರ ನೀಡದ ಕಾರಣದಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಒಂದು ವೇಳೆ ಕಲ್ಲೂರಿಗೆ ಆಂಬ್ಯುಲೆನ್ಸ್ ಬೇಕಾದರೆ ಮಾನ್ವಿ, ಸಿರವಾರ ಇಲ್ಲವಾದಲ್ಲಿ ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕರೆಸಬೇಕಾಗುತ್ತದೆ. ಅದೇ ರೀತಿ ಬಾದರ್ಲಿ ಹಾಗೂ ಬಳಗಾನ್ರರಿಗೆ ಅಂಬ್ಯುಲೆನ್ಸ್ ಬೇಕಾದರೆ ಸಿಂಧನೂರು ಇಲ್ಲವೇ ಮಸ್ಕಿಯಿಂದ ಕರೆಸಬೇಕಿದ್ದು, ಇದರಿಂದ ಸಾರ್ವಜನಿಕರು, ವೈದ್ಯರಿಗೆ ಕಳೆದ 4 ವರ್ಷದಿಂದ ಸಮಸ್ಯೆ ಉದ್ಭವವಾಗಿದೆ.

ಜಿಲ್ಲೆಯ 18 ಆಂಬ್ಯುಲೆನ್ಸ್‌ಗಳಿಗೆ ನಿರ್ವಹಣೆ ಕೊರತೆ ಎದುರಾಗಿದ್ದು, ಹೊಸದಾಗಿ ಬಂದಿರುವ ವಾಹನಕ್ಕೆ 5 ಸಾವಿರ ಕಿ.ಮೀ.ಗೆ ಸರ್ವಿಸ್ ಮಾಡಿಸಬೇಕು. ಆದರೆ 40 ಸಾವಿರ ಕಿಲೋ ಮೀಟರ್‌ ಆದರೂ ಸರ್ವಿಸ್ ಮಾಡಿಸಿಲ್ಲ. ಏಜೆನ್ಸಿಯವರು ಟೈರ್ ಬದಲಾವಣೆಯ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವುದರಿಂದ ವಾಹನಗಳು ಕೆಟ್ಟು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಅದೇ ರೀತಿ ರೋಗಿಯನ್ನು ಅಪಘಾತ ಅಥವಾ ಯಾವುದೇ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಚೆನ್ನಾಗಿರಬೇಕು. ಆದರೆ ಆಂಬ್ಯುಲೆನ್ಸ್‌ಗಳಿಗೆ ರಾತ್ರಿ ವೇಳೆ ಸಂಚಾರ ಮಾಡಲು ಹೆಡ್ ಲೈಟ್ ಇಲ್ಲದೆ ಇರುವುದರಿಂದ ವಾಹನ ಚಾಲಕರು ಆಂಬ್ಯುಲೆನ್ಸ್‌ಗಳನ್ನು ಓಡಿಸಲು ಹಿಂದೇಟು ಹಾಕುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಇತ್ತ ಗಮನಹರಿಸಬೇಕಿದೆ.

ಜಿಲ್ಲೆಗೆ ಸರ್ಕಾರದಿಂದ ಮಂಜೂರಾದ ಆಂಬ್ಯುಲೆನ್ಸ್‌ಗಳನ್ನು ಏಜೆನ್ಸಿಯವರು ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆ ಏಜೆನ್ಸಿ ಗಮನಕ್ಕೆ ತಂದರೆ ಅವರು ಮತ್ತಷ್ಟು ಹೆಚ್ಚಿನ ಕೆಲಸದ ಹೊರೆ ಹಾಕಲಿದ್ದಾರೆ. ಹೀಗಾಗಿ ಸುಮ್ಮನಿದೇವೆ ಎಂದು ಹೆಸರು ಹೇಳಲು ಇಚ್ಛಿಸದ ಆಂಬ್ಯುಲೆನ್ಸ್ ಚಾಲಕರೊಬ್ಬರು ಹೇಳಿದರು.

ಜಿಲ್ಲೆಯಲ್ಲಿ 108 ನಂಬರ್‌ನ ವಾಹನಗಳ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಸರಕಾರಕ್ಕೆ ಮನವಿ ಮಾಡಲಾಗಿದೆ. ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಮ್ಮ ಚಾಲಕರಿಗೆ ಸ್ವಲ್ಪ ಸಮಸ್ಯೆ ಎದುರಾಗಿದ್ದು, ತ್ವರಿತವಾಗಿ ಬಗೆಹರಿಸುವೆ ಎಂದು ಕಲಬುರಗಿ ಜಿವಿಕೆ ಸಂಸ್ಥೆಯ ರಿಜಿನಲ್ ಮ್ಯಾನೇಜರ್ ನಾಸೀರ್ ಹುಸೇನ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+