ಚುನಾವಣೋತ್ತರ ಸಮೀಕ್ಷೆ; ಮಸ್ಕಿಯಲ್ಲಿ ಪ್ರಬಲ ಪೈಪೋಟಿ!
ರಾಯಚೂರು, ಏಪ್ರಿಲ್ 29; ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕುತೂಹಲವನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗಿತ್ತು. ಏಪ್ರಿಲ್ 17ರಂದು ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅಭ್ಯರ್ಥಿಗಳು. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದೇ ಚುನಾವಣೆಯಿಂದ ದೂರ ಉಳಿದಿದೆ. ಈ ಇಬ್ಬರೂ ನಾಯಕರು 2018ರ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದರು. ಆದರೆ ಉಪ ಚುನಾವಣೆಯಲ್ಲಿ ಇಬ್ಬರೂ ಸಹ ಪಕ್ಷ ಬದಲಾಯಿಸಿದ್ದಾರೆ.
ಗುರುವಾರ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಟಿವಿ 9 ವಾಹಿನಿ ನಡೆಸಿದ ಸಮೀಕ್ಷೆಯ ಪ್ರಕಾರ ಕ್ಷೇತ್ರದಲ್ಲಿ ನೇರ ಪೈಪೋಟಿ ನಡೆಯಲಿದೆ. ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಸಮೀಕ್ಷೆಯ ಸಮಯದಲ್ಲಿ ಈಗ ನೀವು ಯಾರಿಗೆ ಮತ ಹಾಕಿದ್ದೀರಿ? ಎಂದು ಜನರನ್ನು ಪ್ರಶ್ನೆ ಮಾಡಲಾಗಿತ್ತು. ಶೇ 47ರಷ್ಟು ಜನರು ಬಿಜೆಪಿ, ಶೇ 48ರಷ್ಟು ಜನರು ಕಾಂಗ್ರೆಸ್, ಶೇ 5ರಷ್ಟು ಜನರು ಇತರರಿಗೆ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಪಕ್ಷ ಬಿಟ್ಟಿದ್ದು ಹಿನ್ನಡೆ?: ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಪಕ್ಷ ಬದಲಿಸಿದ್ದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಲಾಗಿತ್ತು. ಬದಲಿಸಿದ್ದು ತಪ್ಪು ಎಂದು ಶೇ 41ರಷ್ಟು ಜನರು ಹೇಳಿದ್ದಾರೆ. ಬದಲಿಸಿದ್ದು ಸರಿ ಎಂದು ಶೇ 27 ಜನರು ಅಭಿಪ್ರಾಯಪಟ್ಟಿದ್ದಾರೆ. ಹೇಳೋಕಾಗಲ್ಲ ಎಂದು ಶೇ 32ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್‌ನಲ್ಲಿದ್ದರು. ಬಸನಗೌಡ ತುರ್ವಿಹಾಳ ಬಿಜೆಪಿಯಲ್ಲಿದ್ದರು. ಈಗ ಇಬ್ಬರ ಪಕ್ಷಗಳು ಅದಲು ಬದಲಾಗಿವೆ. ಆದ್ದರಿಂದ, ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
(ಮಾಹಿತಿ; ಟಿವಿ 9 ವೆಬ್ ಸೈಟ್)












Click it and Unblock the Notifications