ಜಿ.ಪಂ , ತಾ.ಪಂ ಚುನಾವಣೆ ಸಿದ್ಧತೆ: ಗೆಲ್ಲುವ ಕುದುರೆಯ ಬೆನ್ನು ಹತ್ತಿದ ರಾಜಕೀಯ ಪಕ್ಷಗಳು
ರಾಯಚೂರು, ಅಕ್ಟೋಬರ್ 06: ಹಲವು ಕಾರಣದಿಂದ ವಿಳಂಬವಾಗುತ್ತಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಿರುವ ಅಡ್ಡಿಗಳು ಒಂದೊಂದಾಗಿ ಕರಗಿವೆ. ಹೊಸದಾಗಿ ಕ್ಷೇತ್ರ ವಿಂಗಡನೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 36 ಜಿಲ್ಲಾ ಪಂಚಾಯಿತಿ , 133 ತಾಲೂಕು ಪಂಚಾಯಿತಿ ಕ್ಷೇತ್ರಗಳು ಚುನಾವಣೆಗೆ ಅಣಿಯಾಗುತ್ತಿವೆ.
ಪಂಚಾಯತ್‌ನಲ್ಲಿ ಕುಬೇರರ ಹುಡುಕಾಟದಲ್ಲಿ ತೊಡಗಿದ್ದು ಈ ಬಾರಿ ಜಿಲ್ಲೆಯಲ್ಲಿ ಕ್ಷೇತ್ರ ವಿಂಗಡಣೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳಾಗಿವೆ. ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಾಗುವುದರ ಜತೆಗೆ ಒಂದಷ್ಟು ಕ್ಷೇತ್ರಗಳು ಚದುರಿ ಹೊಸ ಕ್ಷೇತ್ರಗಳಾಗಿ ನಿರ್ಮಾಣ ಗೊಂಡಿರುವುದು ಖುಷಿಯ ವಿಚಾರವಾದರೆ , ಕೆಲ ನಾಯಕರು ಕಂಗಲಾಗಿದ್ದಾರೆ.

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿಗೆ ಸಂಪನ್ಮೂಲ ಹೊಂದಿಸುವ ಚಿಂತೆಯಲ್ಲಿದ್ದರೆ , ಮೋದಿ ಮೋಡಿ ನಡೆಯದ ಕಾರಣ ಅಧಿಕಾರದಿಂದ ಕಳಗಿಳಿದ ಬಿಜೆಪಿ ಪ್ರತಿಪಕ್ಷದ ನಾಯಕನ ಹುಡುಕಾಟದಲ್ಲಿದೆ.
ರಾಜ್ಯದಲ್ಲಿ ನೆಲಗಚ್ಚಿರುವ ಜೆಡಿಎಸ್ ಟೇಕಾಫ್ ಆಗಲು ಮೈತ್ರಿಯ ಸಿದ್ಧತೆ ನಡೆಸುತ್ತಿದೆ. ಇದು ರಾಜ್ಯಕಾರಣದ ಚಿತ್ರಣವಾದರೆ , ಜಿಲ್ಲೆಯ ಪರಿಸ್ಥಿತಿಯೇನು ಭಿನ್ನವಾಗಿಲ್ಲ. ಈಗ ಚುನಾವಣೆ ಎದುರಿಸುವವರಿಗೆ ಜನಬಲದ ಜೊತೆಗೆ ಹಣ ಬಲದ ಅಗತ್ಯವೂ ಇರುವುದರಿಂದ ಕೋಟಿ ಕೋಟಿ ರೂಪಾಯಿ ಚೆಲ್ಲುವ ಕುಬೇರರ ಹುಡುಕಾಟದಲ್ಲಿ ಪಕ್ಷಗಳು ತಲ್ಲೀನವಾಗಿವೆ.

ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನು ಪಡೆದುಕೊಂಡಿರುವ ಮಹಿಳೆಯರು ಫುಲ್ ಖುಷಿಯ ಮೂಡಿನಲ್ಲಿದ್ದಾರೆ. ಆದರೆ ಇದು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಮತವಾಗಿ ಪರಿವರ್ತನೆಯಾಗುವುದು ಕಷ್ಟ ಸಾಧ್ಯವಾಗುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ರಾಜಕೀಯ ಪಕ್ಷಗಳ ಹಂಗಿಲ್ಲದೇ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಗಳ ಲೇಬಲ್ ತಲೆ ಹಾಕಿದ್ದು ಇಲ್ಲಿ ಪ್ರಾಬಲ್ಯ ಸಾಧಿಸಿದವವರು ಟಿಕೆಟ್ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಪಕ್ಷಗಳ ಟಿಕೆಟ್ ಕೈ ತಪ್ಪಿದರೆ ಸ್ವತಂತ್ರವಾಗಿ ಒಂದು ಕೈ ನೋಡೋಣ ಎನ್ನುವ ಹಂತದಲ್ಲಿ ನಾಯಕರು ಇದ್ದಾರೆ.

ಹಾಲಿ ಶಾಸಕರ ಗೆಲುವಿಗೆ ಸಹಕರಿಸಿದವರಿಗೆ ಟಿಕೆಟ್ ನೀಡಿದರೆ ಮುಂದೆ ಅವರು ಚುನಾವಣೆಗೆ ಬೆಂಬಲವಾಗಿ ನಿಲ್ಲುವ , ಇಲ್ಲದಿದ್ದರೆ ಅವರನ್ನೇ ಒಂದು ಕೈ ನೋಡೋಣ ಎನ್ನುವ ಸ್ಥಿತಿಯಲ್ಲಿ ಇದೀಗ ಆಕಾಂಕ್ಷಿಗಳು ಸಿದ್ಧರಾಗುತ್ತಿದ್ದಾರೆ. ಒಟ್ಟಿನಲ್ಲಿ ಜಾತಿವಾರು ಹಾಗೂ ಹಣ ಬಲವನ್ನು ಹೊಂದಿದ ನಾಯಕರಿಗಾಗಿ ಪಕ್ಷಗಳು ಹುಡುಕಾಟದಲ್ಲಿ ತೊಡಗಿವೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿರುವ ಬಣ ರಾಜಕೀಯಕ್ಕೆ ಬೆಲೆತೆತ್ತು ಗೆಲ್ಲುವ ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಪಕ್ಷದಲ್ಲಿದ್ದ ಅಧಿಕೃತ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವವರಿಗೆ ಟಿಕೆಟ್ ನೀಡಬಾರದೆಂಬ ಕೂಗು ಕೂಡ ಜೋರಾಗಿದೆ. ಇದರಿಂದ ಇಡೀ ಜಿಲ್ಲೆಯಲ್ಲಿ ದೇವದುರ್ಗ ಹೊರತುಪಡಿಸಿ ಎಲ್ಲಿಯೂ ಜೆಡಿಎಸ್ ಗೆಲ್ಲದಿರುವುದು ಕಾರಣ , ಸಿಂಧನೂರು , ಲಿಂಗಸೂಗೂರು , ಮಾನ್ವಿಯಲ್ಲಿ ಗಮನಾರ್ಹ ಮತಗಳನ್ನು ಪಡೆಯುವ ಮೂಲಕ ತನ್ನದೇ ಅಸ್ತಿತ್ವ ಉಳಿಸಿಕೊಂಡಿದ್ದು ತನ್ನದೇ ಆದ ಸ್ಥಾನಗಳನ್ನು ಗಳಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಸದ್ಯದ ಸ್ಥಿತಿ ಕೈ ಟಿಕೆಟ್ ಗೆ ಭಾರಿ ಬೇಡಿಕೆ ಇದ್ದು ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸೇ ಮುಖ್ಯ ಎನ್ನುವುದು ಮುಖ್ಯವಾಗಿದೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆಗೆ ಗೆಲ್ಲಲು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತಿದ್ದಾರೆ. ಅದರಲ್ಲೂ ಯುವಕರಿಗೆ ಟಿಕೆಟ್ ನೀಡಿ ಮುಂಬರುವ ಚುನಾವಣೆಯಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯೋಚಿಸುತ್ತಿವೆ. ಈ ಬಾರಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಚಿತರ ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ. ಅದರಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ' ಎಂದು ರಾಯಚೂರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ್ ಹೇಳಿದರು.












Click it and Unblock the Notifications