ರಾಯಚೂರಿನಲ್ಲಿ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ರಾಯಚೂರು, ಜೂ 3: ರಾಯಚೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 20ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.
ಕಾಡ್ಲೂರು ಗ್ರಾಮದಲ್ಲಿ ಜಿಂದಾವಲಿ, ಬಸಮ್ಮ, ಮೋದಿನ್ ಸಾಬ್ ಚೌದ್ರಿ ಮೊದಲಾದವರಿಗೆ ಸೇರಿದ 20 ಮನೆಗಳ ಮೇಲ್ಛಾವಣಿ ಹಾರಿಕೊಂಡು ಹೋಗಿವೆ. ಅಲ್ಲಲ್ಲಿ ಮರಗಿಡಗಳು, ವಿದ್ಯುತ್ ಕಂಬಗಳು ಬಿದ್ದಿವೆ. ರಸ್ತೆಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಸುರಿದ ಗಾಳಿ ಸಹಿತ ಮಳೆಗೆ ದವಸ ದಾನ್ಯಗಳು ಹಾಳಾಗಿವೆ. ಸೇರಿದಂತೆ ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ.
ದೇವಸೂಗರು, ಶಕ್ತಿನಗರ, ಯದ್ಲಾಪುರ,ಗುರ್ಜಾಪುರ, ಕಾಡ್ಲೂರು ಸೇರಿದಂತೆ ಎಲ್ಲೆಡೆ ಮಳೆ ಆಗಿರುವ ವರದಿ ಆಗಿದೆ.

ನೆಲಕಚ್ಚಿದ ಮಾವು ತೋಟಗಳು:
ಕಳೆದ ದಿನಗಳಲ್ಲಿ ಸುರಿದ ಆಲಿಕಲ್ಲಿನ ಮಳೆಯಿಂದ ರೈತರ ಮಾವು ತೋಟಗಳು ನೆಲಕೆಚ್ಚಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಬೆಂಡಾದ ಭೂಮಿಗೆ ಮಳೆ ತಂಪೆರಿದಿದೆ.
ರಾಯಚೂರು ತಾಲ್ಲೂಕಿನ ವಡ್ಲುರು, ಹನುಮನದೊಡ್ಡಿ , ದೇವಸೂಗೂರು , ಯದ್ಲಾಪುರ, ಶಕ್ತಿನಗರ, ಕೊರವಿಹಾಳ್, ಕೊರ್ತಕುಂದಾ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತಿ ಆಲಿಕಲ್ಲು ಮಳೆ ಸುರಿದಿದೆ. ಆ ಸೀಮಾಂತರದ ಪ್ರದೇಶದ ಜಮೀನುಗಳಲ್ಲಿ ಬೆಳೆದಿದ್ದ ಮಾವು ತೋಟಗಳು ಹಾಳಾಗಿರುವುದರಿಂದ ಸಾಲ ಮಾಡಿ ಬೆಳೆದಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು , ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

6 ಎಕೆರೆಯಲ್ಲಿ ಬೆಳೆದಿದ್ದ ಮಾವು ತೋಟ
ಮಳೆಗಿಂತ ಗಾಳಿ ಮತ್ತು ಆಲಿಕಲ್ಲುಗಳು ಆರ್ಭಟ ಹೆಚ್ಚಾಗಿತ್ತು. 6 ಎಕೆರೆಯಲ್ಲಿ ಬೆಳೆದಿದ್ದ ಮಾವು ತೋಟ ತೋಟ ನೆಲಕೆಚ್ಚಿದ್ದು 12 ಲಕ್ಷಾ ರೂಪಾಯಿ ನಷ್ಟವಾಗಿದೆ ಎಂದು ಕೊರವಿಹಾಳ್ ಗ್ರಾಮದ ರೈತ ರವೀಂದ್ರ ಅವರನ್ನು ಸಂಪರ್ಕಿಸಿದಾಗ ಹೇಳಿದರು. ಆಲಿಕಲ್ಲು ಮಳೆಯಿಂದಾಗಿ ದೇವಸೂಗೂರು ಗ್ರಾಮದ ಜನತಾ ಕಾಲೊನಿಯಲ್ಲಿ ಎರಡು ಕುರಿಗಳು ಮೃತಪಟ್ಟಿವೆ. ಜಂಭಣ್ಣ ಪೂಜಾರಿ ಅವರ ಟಗರುಗಳು ಮೃತಪಟ್ಟಿದ್ದು ಅಂದಾಜು 40 ಸಾವಿರ ರೂಪಾಯಿ ನಷ್ಟ ಆಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸುರೇಶ್ ಮತ್ತು ಪಶು ವೈದ್ಯ ಡಾ.ಮಹಾದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications