ರಾಯಚೂರಿಗೆ ವರ್ಗಾವಣೆಗಾಗಿ ಸಚಿವರು, ಶಾಸಕರ ಆಪ್ತರಿಗೆ ಅಧಿಕಾರಿಗಳ ಗಾಳ
ರಾಯಚೂರು, ಜೂನ್ 18: ಸರ್ಕಾರ ಬದಲಾಗುತ್ತಿದ್ದಂತೆ ಎರಡು ತಿಂಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದ್ದು, ಅದೇ ರೀತಿ ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಪುನಃ ರಾಯಚೂರು ಜಿಲ್ಲೆಯ ಆಯಾ ಕಟ್ಟಿನ ಸ್ಥಳಕ್ಕೆ ಬರಲು ಪೈಪೋಟಿ ನಡೆಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯವರೇ ಆದ ಎನ್.ಎಸ್.ಬೋಸರಾಜು ಅವರು ಸಚಿವರಾಗುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ರಾಯಚೂರಿನಲ್ಲಿ ಕಾರ್ಯನಿರ್ವಹಿಸಿದ ಪಿಎಸ್‌ಐ, ಸಿಪಿಐ , ಡಿವೈಎಸ್‌ಪಿ ಹಂತದವರಲ್ಲದೆ ಕೆಳ ಹಂತದ ಪೇದೆಗಳು ಅವರ ಮನೆಗೆ ದೌಡಾಯಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಡ್ತಿ ಹೊಂದಿದ ಸಿಪಿಐ ಒಬ್ಬರು ರಾಯಚೂರು ಪಶ್ಚಿಮ ಠಾಣೆಗೆ , ಬಳ್ಳಾರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಒಬ್ಬರು ರಾಯಚೂರು ನಗರ ಠಾಣೆಗೆ ಬರಲು ಸಚಿವ ಬೋಸರಾಜು ಅವರ ಆಪ್ತರ ಮೂಲಕ ಕಸರತ್ತು ಆರಂಭಿಸಿರುವುದು ಚರ್ಚಗೆ ಇಂಬು ನೀಡಿದೆ.
ಬೋಸರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ ಆಯಾ ಕಟ್ಟಿನ ಸ್ಥಳಕ್ಕೆ ಸುಲಭವಾಗಿ ಬರಬಹುದಿತ್ತು ಎಂದುಕೊಂಡಿದ್ದ ಪೊಲೀಸ್ ಅಧಿಕಾರಿಗಳು ಈಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲರ ಶಿಫಾರಸ್ಸಿಗೆ ಅವರ ಆಪ್ತರೊಬ್ಬರ ಮೂಲಕ ಸಂಪರ್ಕಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಯಚೂರಿನ ಯರಗೇರಾ, ಗ್ರಾಮೀಣ ಠಾಣೆ, ಯಾಪಲದಿನ್ನಿ, ಗಬ್ಬೂರು , ದೇವದುರ್ಗ , ಮಾನ್ವಿ , ಸಿರವಾರ, ಸಿಂಧನೂರು ಗ್ರಾಮೀಣ ಠಾಣೆಗೆ ಪಿಎಸ್ ಐಗಳು , ಸಿಪಿಐಗಳು ಬರಲು ಜನಪ್ರತಿನಿಧಿಗಳು ಹಾಗೂ ಅವರ ಆಪ್ತರ ಮೂಲಕ ಒತ್ತಡ ಹಾಕಲು ಆರಂಭಿಸಿದ್ದಾರೆ.
ಇನ್ನು ರಾಯಚೂರು ಉಪ ವಿಭಾಗಕ್ಕೆ ಡಿವೈಎಸ್‌ಪಿಯಾಗಲು ಈ ಹಿಂದೆ ಸಿಪಿಐ ಆಗಿ , ಈಗ ಡಿವೈಎಸ್‌ಪಿ ಆಗಿ ಬಡ್ತಿ ಹೊಂದಿರುವ ಅಧಿಕಾರಿ ಮತ್ತು ಸಿಂಧನೂರು ಉಪ ವಿಭಾಗಕ್ಕೆ ಈ ಹಿಂದೆ ರಾಯಚೂರು ಉಪ ವಿಭಾಗಕ್ಕೆ ಡಿಎಸ್‌ಪಿ ಆದವರ ಪೈಕಿ ಒಬ್ಬ ಅಧಿಕಾರಿ ಸಚಿವ ಮತ್ತು ಶಾಸಕರ ಶಿಫಾರಸು ಪತ್ರಕ್ಕೆ ಅಲೆದಾಡುತ್ತಿರುವುದು ಕಂಡು ಬಂದಿದೆ.
ವರ್ಗಾವಣೆಗಳು ಕೇವಲ ಪೊಲೀಸ್ ಇಲಾಖೆಗೆ ಶಿಫಾರಸು ಪತ್ರ ಸೀಮಿತವಾಗಿಲ್ಲ. ಈ ಹಿಂದೆ ಜಿಲ್ಲೆಯ ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಇಬ್ಬರು ಅಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಾಗಿ ಬಡ್ತಿ ಹೊಂದಿದ್ದು ಶತಾಯಗತಾಯ ಮರಳಿ ರಾಯಚೂರಿಗೆ ಬಂದು ಆಸೀನರಾಗಲು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯೊಳಗೆ ಚರ್ಚೆ ಜೋರಾಗಿದೆ.
ಜಿಲ್ಲೆಯ ಪೊಲೀಸ್ ಇಲಾಖೆಯ ಕೆಲವು ಠಾಣೆಗಳು ಮರಳು ದಂಧೆಯ ಆದಾಯದ ಖಾಜಾನೆಗಳಾಗಿದ್ದು ಆ ಠಾಣೆಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಹಿರಿಯ, ಕಿರಿಯ ಪೊಲೀಸರು ಮರಳಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಯ ಶಾಸಕರಿಗೂ ಜಾತಿ ಬಲ, ನಂಬಿಕಸ್ಥರು, ತಮ್ಮವರು, ನಿಷ್ಠರು ಎನ್ನುವ ಕಾರಣಕ್ಕೆ ಮಾತು ಕೇಳುವವರನ್ನೇ ಠಾಣೆಗಳಲ್ಲಿ , ಕೆಲ ಇಲಾಖೆಗಳ ಮುಖ್ಯಸ್ಥರ ಸ್ಥಾನದಲ್ಲಿ ಕೂಡಿಸಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ನೂತನ ಸಚಿವ, ಶಾಸಕರು ಮತ್ತವರ ಬೆಂಬಲಿಗರನ್ನು ಗುಟ್ಟಾಗಿ ಇಲ್ಲಿಂದ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳು ಭೇಟಿಯಾಗುತ್ತಿದ್ದಾರೆ. ಇನ್ನೂ ಕೆಲವರು ಇಲ್ಲಿ ಸೇವೆ ಸಲ್ಲಿಸಿ ಬೇರೆ ಕಡೆ ವರ್ಗಾವಣೆಯಾಗಿ ಹೋದವರು ಮತ್ತೆ ಜಿಲ್ಲೆಗೆ ಬರಲು ಕಾತರರಾಗಿದ್ದು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಐದು ವಿಧಾನಸಭೆ ಕ್ಷೇತ್ರದ ಶಾಸಕರ ಶಿಫಾರಸು ಪತ್ರಕ್ಕಾಗಿ ಸನ್ಮಾನ, ಅಭಿನಚಿದನೆ ಹೇಳುವ ನೆಪದಲ್ಲಿ ಪೊಲೀಸ್ ಅಧಿಕಾರಿಗಳು, ಪೇದೆಗಳು ಅವರ ಮನೆಗಳಿಗೆ ಎಡ ತಾಕುತ್ತಿರುವುದು ಕಂಡು ಬಂದಿದೆ. ಶಾಸಕರು, ಸಚಿವ ಬೋಸರಾಜು ಅವರ ಖಾಸಗಿ ಆಪ್ತ ಸಹಾಯಕರು, ಆಪ್ತರ ಮೂಲಕ ಜಿಲ್ಲೆಯ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಿದ್ದಾರೆ. ರಾಯಚೂರಿನಲ್ಲಿ ಈ ಹಿಂದೆ ಪಿಎಸ್‌ಐ ಆಗಿ ಈಗ ಸಿಪಿಐಗಳಾಗಿ ಬಡ್ತಿ ಹೊಂದಿದವರು, ಸಿಪಿಐಯಿಂದ ಡಿವೈಎಸ್‌ಪಿ ಆದವರು ಉಪ ವಿಭಾಗದ ಹುದ್ದೆ ಮೇಲೆ ಚಿತ್ತ ಹರಿಸಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications