Sanganna Karadi Gets Emotional: ಕೈತಪ್ಪಿದ ಬಿಜೆಪಿ ಟಿಕೆಟ್: ವೇದಿಕೆ ಮೇಲೆ ಕಣ್ಣೀರಿಟ್ಟ ಸಂಗಣ್ಣ ಕರಡಿ
ರಾಯಚೂರು ಮಾ.16: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ವೇದಿಕೆಯ ಮೇಲೆಯೇ ಸಿಂಧನೂರಿನಲ್ಲಿ ನೆಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ನಗರದ ರೈಲು ನಿಲ್ದಾಣದಲ್ಲಿ ನಡೆದ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ರೈಲು ಸಿಂಧನೂರಿನವರೆಗೆ ವಿಸ್ತರಣೆ ಉದ್ಘಾಟನಾ ಸಮಾರಂಭ ಮುಗಿದ ನಂತರ, ಬೆಂಬಲಿಗರು ಮತ್ತು ಕಾರ್ಯಕರ್ತರು ಬಂದು ಮಾತನಾಡಿಸಿದಾಗ ಭಾವುಕರಾದರು.

'ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಆಗದೇ ಇರುವಂತಹ ಕೆಲಸ ಮಾಡಿದ್ದೀರಿ. 30 ವರ್ಷಗಳ ಕಾಲ ಆಗದೇ ಇರುವ ರೈಲ್ವೆ ಮಾರ್ಗ, ಬೈಪಾಸ್ ರಸ್ತೆ ಸೇರಿದಂತೆ ಹಲವಾರು ಕೆಲಸ ಮಾಡಿದ ನಿಮಗೆ ಟಿಕೆಟ್ ನಿರಾಕರಿಸುವ ಮನಸು ಹೈಕಮಾಂಡ್‍ಗೆ ಹೇಗೆ ಬಂತು' ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಇದನ್ನು ಕೇಳಿದ ಸಂಸದರು ಬಿಕ್ಕಿಬಿಕ್ಕಿ ಅತ್ತರು.
'ಇಂದಿನ ಕಾಲದಲ್ಲಿ ಪ್ರಾಮಾಣಿಕರಿಗೆ, ಕೆಲಸ ಮಾಡುವ ವ್ಯಕ್ತಿಗಳಿಗೆ ಬೆಲೆ ಇಲ್ಲದಂತಾಗಿದೆ' ಎನ್ನುತ್ತಲೇ ಸಂಸದರು ಕಣ್ಣೀರಾದರು. ಪಕ್ಕದಲ್ಲಿದ್ದ ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರ ಕಣ್ಣಾಲಿಗಳೂ ತೇವಗೊಂಡವು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಣ್ಣ ಕರಡಿ ಅವರು, 'ಲೋಕಸಭೆ ಚುನಾವಣೆಯ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ನನಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂಬುದು ತಿಳಿಯುತ್ತಿಲ್ಲ. ಬಿಜೆಪಿ ನಾಯಕರು ಸೌಜನ್ಯಕ್ಕಾದರೂ ಫೋನ್ ಮಾಡಿ ಟಿಕೆಟ್ ನಿರಾಕರಿಸುವ ಕುರಿತು ಮಾತನಾಡಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಮಾತನಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ನನ್ನೊಂದಿಗೆ ಮಾತನಾಡಿಲ್ಲ. ನಾನು ಬಿಜೆಪಿಯಿಂದಲೇ ಸಂಸದನಾಗಿದ್ದು, ಇಲ್ಲಿಯೇ ಇರುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡುತ್ತೇನೆ' ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ
ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ (ಮಾರ್ಚ್) ಸಂಜೆ ಬಿಡುಗಡೆ ಮಾಡಿತು. ಆದರೆ ಈ ಪಟ್ಟಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕರಡಿ ಸಂಗಣ್ಣ (Karadi Sanganna) ಬದಲಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ (Dr Basavaraj S Kyavator) ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಇದು ಕರಡಿ ಸಂಗಣ್ಣ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಕರಡಿ ಅವರ ಬೆಂಬಲಿಗರು ಗುರುವಾರ ಕೊಪ್ಪಳದ ಬಿಜೆಪಿ ಕಚೇರಿಯ ಕಿಟಕಿ ಗಾಜು ಚೂರು ಚೂರು ಮಾಡಿದ್ದಾರೆ.
ಕರಡಿ ಬೆಂಬಲಿಗರ ಆಕ್ರೋಶ
ಮಾತ್ರವಲ್ಲದೆ ಕಲ್ಲು ತೂರಾಟ ನಡೆಸಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಕಳೆದ ದಿನ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೆ ಗುರುವಾರ ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಏಕಾಏಕಿ ಬಂದ ಕರಡಿ ಸಂಗಣ್ಣ ಅವರ ಬೆಂಬಲಿಗರ ಗುಂಪು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಲ್ಲು ತೂರಾಟ ಮಾಡಿದ್ದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರಡಿ ಸಂಗಣ್ಣ ಅವರು,'ನನಗೆ ಯಾಕೆ ಟಿಕೆಟ್ ಮಿಸ್ ಆಯ್ತು ನನಗೆ ಗೊತ್ತಿಲ್ಲ. ಯಾರು ಅಭ್ಯರ್ಥಿ ಆಗಿದ್ದಾರೋ ಅವರಿಗೆ ಒಳ್ಳೆಯದಾಗಲಿ. ಬಿಜೆಪಿ ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಬಹುಶ: ಅವರೆಲ್ಲಾ ತುಂಬಾ ಬ್ಯೂಸಿ ಇರಬೇಕು. ಫ್ರೀ ಆದ್ಮೆಲೆ ಮಾತನಾಡಬಹುದು. ಜನರ ಆಶೀರ್ವಾದಕ್ಕೆ ನಾನು ಋಣಿಯಾಗಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿ. ಶಾಂತತೆಯಿಂದ ವರ್ತಿಸಿ' ಎಂದು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.
ಹೊಸಬರಿಗೆ ಮಣೆ
ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಮಾಜಿ ಶಾಸಕ ಕೆ.ಶರವಣ್ಣಪ್ಪ ಅವರ ಪುತ್ರ ಹಾಗೂ ವೈದ್ಯ ಡಾ.ಕೆ.ಬಸವರಾಜ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಸವರಾಜ ಹೊಸಬರಾಗಿದ್ದು ಇವರ ಹೆಸರು ಘೋಷಣೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.












Click it and Unblock the Notifications