Wrestlers protest: ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ರಾಯಚೂರಿನಲ್ಲಿ ಪ್ರತಿಭಟನೆ
ರಾಯಚೂರು, ಜೂನ್. 01: ದೆಹಲಿಯಲ್ಲಿ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ವಿರೋಧಿಸಿ ನಡೆಸುತ್ತಿರುವ ನ್ಯಾಯೋಚಿತ ಹೋರಾಟವನ್ನು ಹತ್ತಿಕ್ಕುತ್ತಿರುವ ದೆಹಲಿ ಪೋಲೀಸರ ಫ್ಯಾಸಿಸ್ಟ್ ಕ್ರಮವನ್ನು ವಿರೋಧಿಸಿ ಆರೋಪಿ ಬ್ರಿಜ್ ಭೂಷಣ್ ಶರಣ್‌ಸಿಂಗ್ ಬಂಧನಕ್ಕೆ ಆಗ್ರಹಿಸಿ ಇಂದು ಇಡೀ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಹಾಗೆಯೇ ರಾಯಚೂರು ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳಾದ ಎಐಡಿಎಸ್‌ಓ, ಎಐಎಂಎಸ್‌ಎಸ್, ಎಐಡಿವೈಓ ಹಾಗೂ ಎಐಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಿ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಅವರ ಪ್ರತಿಕೃತಿ ದಹಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಜಂತರ್ ಮಂತರ್‌ನಲ್ಲಿ ಹೋರಾಟವನ್ನು ನಡೆಸುತ್ತಿರುವ ಅಂತಾರಾಷ್ಟ್ರೀಯ ಪದಕ ವಿಜೇತ ಮಹಿಳಾ ಕುಸ್ತಿ ಪಟುಗಳು ಮಹಿಳೆಯರ ಘನತೆ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅವರನ್ನು ಫೆಡರೇಶನ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಅವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಇವರ ನ್ಯಾಯಯುತ ಹೋರಾಟಕ್ಕೆ ಇಡೀ ದೇಶವೇ ಸಾಥ್ ನೀಡಿದೆ ಎಂದು ಸಂಘಟನೆಗಳು ತಿಳಿಸಿವೆ.
ಈ ಹೋರಾಟ ಮುಂದುವರೆದ ಭಾಗವಾಗಿ ಮೇ 28 ರಂದು ದೆಹಲಿಯಲ್ಲಿ ಬೃಹತ್ ಮಹಿಳಾ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿತ್ತು. ಅಂದು ಪ್ರತಿಭಟನಾಕಾರರನ್ನು ದೆಹಲಿಯ ಬೀದಿಯಲ್ಲಿ ಎಳೆದಾಡಿ ಅಮಾನವೀಯವಾಗಿ ಬಂಧಿಸಿರುವ ಕ್ರಮ, ಪ್ರತಿಭಟನಾಕಾರರನ್ನು ಜಂತರ್ ಮಂತರ್‌ನಿಂದ ತೆರವುಗೊಳಿಸಿರುವುದು, ನಂತರ ಪ್ರತಿಭಟನೆಗೆ ಸ್ಥಳವಕಾಶ ಕೊಡದಿರುವುದು, ಪ್ರತಿಭಟನಾನಿರತರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅತ್ಯಂತ ಜನತಂತ್ರ ವಿರೋಧಿ ನಡೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಇದುವರೆಗೂ ಅವರ ಬೇಡಿಕೆಗಳಿಗೆ ಸ್ಪಂಧಿಸದಿರುವ ಸರ್ಕಾರ ಆರೋಪಿಯನ್ನು ಬಂಧಿಸುವುದು ಒತ್ತಟ್ಟಿಗಿರಲಿ, ಕನಿಷ್ಠ ಪಕ್ಷ ಪ್ರತಿಭಟನಾಕಾರರೊಂದಿಗೆ ಘನತೆಯಿಂದ ನಡೆದುಕೊಳ್ಳದೆ ಮೌನವಾಗಿರುವುದು, ಶಾಂತಿಯುತ ಹೋರಾಟವನ್ನು ಹತ್ತಿಕ್ಕುವುದು ಫ್ಯಾಸಿಸ್ಟ್ ಧೋರಣೆಯಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು, ಪ್ರಜಾಪ್ರಭುತ್ವದ ಹೆಬ್ಬಾಗಿಲು ಎಂದು ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿಗಳು ಹೋರಾಟನಿರತರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನೆ ವೇಳೆ ಆಕ್ರೋಶ ಹೊರಹಾಕಲಾಗಿದೆ.
'ಬೇಟಿ ಪಡಾವೋ - ಬೇಟಿ ಬಚಾವೋ ಎಂದು ಹೇಳುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಮಹಿಳಾ ಕುಸ್ತಿ ಪಟುಗಳ ಬೇಡಿಕೆಗಳ ಕುರಿತು ಮೌನ ಮುರಿದು ಉತ್ತರಿಸಿ, ಅವರ ಬೇಡಿಕೆಗಳಾದ ಫೆಡರೇಶನ್ ಅಧ್ಯಕ್ಷ ಹಾಗೂ ಕೇಂದ್ರ ಬಿಜೆಪಿ ಶಾಸಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಫೆಡರೇಶನ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಅವರನ್ನು ಬಂಧಿಸಬೇಕು. ಅವರ ಮೇಲೆ ಕಾನೂನು ಕ್ರಮ ಕ್ರಗೊಳ್ಳಬೇಕು' ಎಂದು ಸಂಘಟನೆಗಳು ಆಗ್ರಹಿಸಿವೆ.












Click it and Unblock the Notifications