Lok Sabha Election 2024 Result: ರಾಯಚೂರು ಎಸ್.ಟಿ.ಮೀಸಲು ಲೋಕಸಭಾ ಕ್ಷೇತ್ರ: ಎಂಟು ಸುತ್ತಿನ ಮತ ಎಣಿಕೆ- ಕಾಂಗ್ರೆಸ್ ಮುನ್ನಡೆ
ರಾಯಚೂರು ಜೂನ್ 4: ರಾಯಚೂರು ಲೋಕಸಭಾ ಚುನಾವಣೆಯ ಮತ ಎಣಿಕೆಯ 23 ಸುತ್ತುಗಳ ಪೈಕಿ ಒಟ್ಟು ಎಂಟು ಸುತ್ತುಗಳು ಪೂರ್ಣಗೊಂಡಿವೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸಂಜೆ ವೇಳೆಗೆ ಅಂತಿಮ ಫಲಿತಾಂಶ ಹೊರ ಬೀಳಲಿದೆ.
ಈವರೆಗಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಗೆಲುವಿನ ನಗೆ ಬೀರಿದ್ದಾರೆ. ಅವರು 515611 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು 443607 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 72,004 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

ರಾಯಚೂರು ಲೋಕಸಭಾ ಚುನಾವಣೆ 1957 ಹಾಗೂ 1962 ಕಾಂಗ್ರೆಸ್ ಜಯ ಸಾಧಿಸಿತ್ತು. 1967ರಲ್ಲಿ ಸ್ವತಂತ್ರ ಪಕ್ಷ ಅಧಿಕಾರಕ್ಕೆ ಬಂದರೆ, 1971, 1977, 1980, 1984, 1986, 1989, 1091ರಲ್ಲಿ ಸತತ ಏಳು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂತು.
1996ರಲ್ಲಿ ಜನತಾ ದಳ, 1998, 1999, 2004ರಲ್ಲಿ ಕಾಂಗ್ರೆಸ್, 2009ರಲ್ಲಿ ಬಿಜೆಪಿ, 2014ರಲ್ಲಿ ಕಾಂಗ್ರೆಸ್, 2019ರಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿತು.
ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಯಾದಗಿರಿ ಜಿಲ್ಲೆಯ ಮೂರು ಹಾಗೂ ರಾಯಚೂರು ಜಿಲ್ಲೆಯ ಐದು ಕ್ಷೇತ್ರಗಳು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾದಗಿರಿ, ಶಹಾಪುರ, ರಾಯಚೂರು ಗ್ರಾಮೀಣ, ಮಾನ್ವಿ ವಿಧಾನಸಭಾ ಕ್ಷೇತ್ರಗಳಲ್ಲಿಕಾಂಗ್ರೆಸ್ ಶಾಸಕರಿದ್ದರೆ, ರಾಯಚೂರು ನಗರ, ಲಿಂಗಸೂಗೂರು ಕ್ಷೇತ್ರದಲ್ಲಿ ಬಿಜೆಪಿಯ ಹಾಗೂ ದೇವದುರ್ಗದಲ್ಲಿ ಜೆಡಿಎಸ್‌ನ ಶಾಸಕರಿದ್ದಾರೆ. ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ನಿಧನರಾಗಿರುವುದರಿಂದ, ಲೋಕಸಭೆ ಚುನಾವಣೆ ಜತೆಗೆ ಉಪ ಚುನಾವಣೆ ಎದುರಿಸುತ್ತಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ರಾಯಚೂರಿನಲ್ಲಿ ಮತದಾರರು ಮೆಚ್ಚಿದಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಸಂಖ್ಯಾತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಅಲ್ಲದೆ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಮೆಚ್ಚಿ ಮಹಿಳೆಯರು ಹೆಚ್ಚಿನ ಮತದಾನ ಮಾಡಿದ್ದಾರೆ ಎಂಬ ಕಾಂಗ್ರೆಸ್ ಕಾರ್ಯಕರ್ತರು ಲೆಕ್ಕಾಚಾರ ಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಲೀಡ್ ಸಾಧಿಸಬೇಕು ಎಂಬ ಲೆಕ್ಕಚಾರದಲ್ಲಿ ಇದ್ದ ಶಾಸಕರು ಚುನಾವಣಾ ಮುಗಿಯುತ್ತಿದ್ದಂತೆ ಕ್ಷೇತ್ರದ ಪ್ರತಿ ಹಳ್ಳಿಗಳ ಮತದಾನ ವಿವರ ಪಡೆದಿದ್ದಾರೆ. ಆ ಮೂಲಕ ತಮಗೆ ಯಾವ ಯಾವ ಮತಗಟ್ಟೆಗಳಲ್ಲಿ ಮುನ್ನಡೆ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಒಟ್ಟಾರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಲೆಕ್ಕಾಚಾರದಲ್ಲಿ ಇದ್ದಾರೆ. ಮತದಾರ ಪ್ರಭು ಯಾವ ಕಡೆ ವಾಲಿದ್ದಾರೆ ಎಂಬುದು ಸಂಜೆ ವೇಳೆ ತಿಳಿಯಲಿದೆ.












Click it and Unblock the Notifications