ಅಧಿಕಾರಿಗಳು, ರಾಜಕಾರಣಿಗಳ ವ್ಯಾಪಕ ಭ್ರಷ್ಟಾಚಾರದಿಂದ ನಲುಗಿದ ಜಿಲ್ಲೆ: ಅಭಿವೃದ್ಧಿಯತ್ತ ಹೆಜ್ಜೆ ಇಡದ ರಾಯಚೂರು

ರಾಯಚೂರು ಡಿಸೆಂಬರ್ 25: 2023ನೇ ವರ್ಷದ ಕೊನೆಯ ದಿನದಲ್ಲಿದ್ದೇವೆ. 2023ನೇ ವರ್ಷ ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದರೆ, ಜಿಲ್ಲೆಯ ರಾಜಕಾರಣದಲ್ಲಿ ದೂಳೆಬ್ಬಿಸಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೆರೆದ ರಾಜಕಾರಣಿಗಳು ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದರು. ಪಿಡಿಒಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು ಹಾಗೂ ಅಕ್ರಮ ಮರಳು ದಂದೆ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡಿತು.

ಜೂನ್ 28ರಂದು ಸಿಂಧನೂರಲ್ಲಿ ನಗರ ಯೋಜನೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರಣಪ್ಪ ಮಡಿವಾಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 13 ಲಕ್ಷ ನಗದು, ಚಿನ್ನಾಭರಣ ವಶಪಡಿಸಿಕೊಂಡರು.

Raichur is rocked by widespread corruption of politicians

ದೇವದುರ್ಗ ತಾಲ್ಲೂಕು ಭ್ರಷ್ಟಾಚಾರದ ಕಪ್ಪುಚುಕ್ಕೆ ಹಚ್ಚಿಕೊಂಡಿತು. ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳೇ ಭ್ರಷ್ಟರನ್ನು ರಕ್ಷಿಸಿ ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತ ವಿಷಯ ಇಸಿಹಾಸ ಪುಟಗಳಲ್ಲಿ ದಾಖಲಾಯಿತು. ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ಲೂಟಿ, ಎಗ್ಗಿಲ್ಲದೇ ನಡೆದ ಅಕ್ರಮ ಮರಳುಗಾರಿಕೆ ಹೆಚ್ಚು ಚರ್ಚೆಗೆ ಬಂದಿತು.

2023ರ ಆಗಸ್ಟ್‌ನಲ್ಲಿ ವಿಶೇಷ ಸಾಮಾಜಿಕ ಲೆಕ್ಕಪರಿಶೋಧನೆ ತಂಡ ರಾಯಚೂರು ಜಿಲ್ಲೆಗೆ ಭೇಟಿ ನೀಡಿ ಪಿಡಿಒ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನರೇಗಾ ಯೋಜನೆಯಡಿ ₹200 ಕೋಟಿ ಭ್ರಷ್ಟಾಚಾರ ಮಾಡಿರುವುದನ್ನು ಬಯಲಿಗೆ ಎಳೆಯಿತು. 33 ಪಿಡಿಒಗಳ ವಿರುದ್ಧ ಗಂಭೀರ ಆರೋಪಗಳಿದ್ದರೂ ಕೇವಲ 6 ಪಿಡಿಒಗಳನ್ನು ಅಮಾನತು ಮಾಡಿ ಮೃದುಧೋರಣೆ ಅನುಸರಿಸಲಾಯಿತು. ಹೀಗಾಗಿ ಸಾಮಾಜಿಕ ಕಾರ್ಯಕರ್ತರೇ ಜಿಲ್ಲಾ ಪಂಚಾಯಿತಿ ಸಿಇಒ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ರಾಜಕೀಯ ಏರುಪೇರು

ವಿಧಾನಸಭೆ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಶಿವನಗೌಡ ನಾಯಕ ತಮ್ಮದೇ ಸಮುದಾಯದವರ ಬೆಂಬಲ ದೊರೆಯದೇ ಜೆಡಿಎಸ್‌ನ ಕರೆಮ್ಮ ನಾಯಕ ಎದುರು ಸೋಲು ಅನುಭವಿಸಬೇಕಾಯಿತು. ಕಾಂಗ್ರೆಸ್‌ನ ಆರ್. ಬಸನಗೌಡ ತುರುವಿಹಾಳ ಎರಡನೇ ಬಾರಿಗೆ ಬಿಜೆಪಿಯ ಪ್ರತಾಪಗೌಡ ಪಾಟೀಲ ಅವರನ್ನು ಸೋಲಿಸಿದರು. ಕಾಂಗ್ರೆಸ್ನ ಜಿ.ಹಂಪಯ್ಯ ನಾಯಕ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಸಿಂಧನೂರಿನ ಹಂಪನಗೌಡ ಬಾದರ್ಲಿ ಅವರು ವೆಂಕಟರಾವ್ ನಾಡಗೌಡ ಅವರನ್ನು ಸೋಲಿಸಿ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿದರು.

Raichur is rocked by widespread corruption of politicians

ಮಾನ್ವಿಯ ಮಾಜಿ ಶಾಸಕ ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು ಒಂದು ದಾಖಲೆ. ಇದಲ್ಲದೇ 38ವರ್ಷಗಳ ನಂತರ ಮಾನ್ವಿ ವಿಧಾನಸಭಾ ಕ್ಷೇತ್ರದ ಮುಖಂಡರೊಬ್ಬರಿಗೆ ಸಚಿವ ಸ್ಥಾನ ಒಲಿದಿರುವುದು ದಾಖಲಾಯಿತು.

ಅಭಿವೃದ್ಧಿ ಮರೀಚಿಕೆ

ಜಿಲ್ಲಾಧಿಕಾರಿ ಕಚೇರಿಗಳ ಆಡಳಿತ ಸಂಕೀರ್ಣ ಉದ್ಘಾಟನೆಯಾಗಲಿಲ್ಲ. ಹೊಸ ತಾಲ್ಲೂಕುಗಳಲ್ಲಿ ಹೊಸ ತಹಶೀಲ್ದಾರ್‌ ಕಚೇರಿಗಳು ನಿರ್ಮಾಣವಾಗಲಿಲ್ಲ. ಜಿಲ್ಲಾ ರಂಗ ಮಂದಿರ ಮೇಲ್ದರ್ಜೆಗೇರಿಸುವ ಕಾಮಗಾರಿ ಈವರ್ಷವೂ ತೆವಳುತ್ತ ಸಾಗಿತು. ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ವರ್ಷಪೂರ್ತಿ ಕಲಾವಿದರು ತೊಂದರೆ ಅನುಭವಿಸಬೇಕಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಿನ್ನಡೆ ಆಯಿತು. ಜಿಲ್ಲೆಯ ಕ್ರೀಡಾಂಗಣದ ಕಾಮಗಾರಿಗೂ ಪೂರ್ಣಗೊಳ್ಳಲಿಲ್ಲ. ಕ್ರೀಡಾ ಚಟುವಟಿಕೆಗಳಿಗೂ ಹಿನ್ನಡೆ ಆಯಿತು. ಮುನಿರಾಬಾದ್-ಸಿಂಧನೂರು ಹೊಸ ಪ್ರಯಾಣಿಕರ ರೈಲು ಸಂಚರಿಸಲೇ ಇಲ್ಲ. ಕೇಂದ್ರ ಸರ್ಕಾರದ ನೀಡಿದ್ದ ಭರವಸೆ ಮತ್ತೆ ಹುಸಿಯಾಯಿತು. ವಿಮಾನ ನಿಲ್ದಾಣವೂ ಅಭಿವೃದ್ಧಿ ಕಾಣಲಿಲ್ಲ.

ಹಳೆಯ ಜಿಲ್ಲೆಯಾದರೂ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ಮುಂದುವರಿದವು. ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದ ಜನತೆಗೆ ಕಾಂಗ್ರೆಸ್‌ನಿಂದಲೂ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಾಗಲಿಲ್ಲ. ಪ್ರಾದೇಶಿಕ ಸಾರಿಗೆ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಕಂದಾಯ ಹಾಗೂ ಪೊಲೀಸ್‌ ಇಲಾಖೆ ಭ್ರಷ್ಟರ ಬೆಂಬಲಕ್ಕೆ ನಿಂತಿರುವುದು ಗೋಪ್ಯವಾಗಿ ಉಳಿಯಲಿಲ್ಲ. ವರ್ಷ ಕಳೆದರೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಲಾರಿ ಟಿಪ್ಪರ್‌ಗಳಿಗೆ ನಂಬರ್‌ ಕಡ್ಡಾಯಗೊಳಿಸಲು ಕಿಂಚಿತ್ತೂ ಆಸಕ್ತಿ ತೋರಿಸಲಿಲ್ಲ.

ಅಪಘಾತ:

ದೇವದುರ್ಗ ತಾಲ್ಲೂಕಿನ ನಿಲುವಂಜಿ ಗ್ರಾಮದಲ್ಲಿ ಜುಲೈ 14 ರಂದು ರಾತ್ರಿ ಕೊಳೆವೆ ಕೊರೆಯುವ ಛತ್ತೀಸಘಡದ ಮೂವರು ಕಾರ್ಮಿಕರು ಮಲಗಿದ್ದಾಗ ಮರಳು ತುಂಬಿದ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟರು.

ಡಿಸೆಂಬರ್ 7 ರಂದು ಸಿಂಧನೂರ ತಾಲ್ಲೂಕಿನ ಪಗಡದಿನ್ನಿ ಸಮೀಪ ಲಾರಿ- ಟಾಟಾಏಸ್‌ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮದುವೆ ಮಂಟಪದ ಸಿಂಗಾರಕ್ಕೆ ಹೊರಟಿದ್ದ ಮೂವರು ಡೆಕೊರೇಟ್‌ ಕಾರ್ಮಿಕರು ಪ್ರಾಣ ಕಳೆದುಕೊಂಡರು.

ಕಾಡಿದ ಕಲುಷಿತ ನೀರು:

2023 ಮೇ 26ರಂದು ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಗು ಮೃತಪಟ್ಟು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡರು. 2022ರಲ್ಲಿ ರಾಯಚೂರಲ್ಲಿ ನಾಲ್ವರು ಮೃತಪಟ್ಟಿದ್ದರು. ಶುದ್ಧ ನೀರು ಪೂರೈಕೆ ಮಾಡುವ ದಿಸೆಯಲ್ಲಿ ಜಿಲ್ಲಾಡಳಿತ ಈ ವರ್ಷವೂ ಗಂಭೀರವಾಗಲಿಲ್ಲ.

ಹಟ್ಟಿ ಚಿನ್ನದ ಗಣಿಯ ಕಾರ್ಮಿಕರಿಗೆ ಏಳು ವರ್ಷದಿಂದ ಸ್ಧಗಿತವಾಗಿದ್ದ ಅನ್ಫಿಟ್ ಯೋಜನೆ ಜಾರಿ ಮಾಡಲಾಯಿತು. ಕಾರ್ಮಿಕ ಮಕ್ಕಳಿಗೆ ಉದ್ಯೋಗ ಪಡೆಯಲು ಅವಕಾಶ ದೊರೆತಂತಾಯಿತು. ಮಸ್ಕಿಯಲ್ಲಿ ಸಿವಿಲ್ ನ್ಯಾಯಾಲಯ ಕಾರ್ಯಾರಂಭ ಮಾಡಿತು. ನೀತಿ ಆಯೋಗದಿಂದ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ ಪಡೆದ ಮಸ್ಕಿ ತಾಲ್ಲೂಕುಗೆ ಪ್ರಥಮ ಸ್ಥಾನದ ಗರಿಮೂಡಿತು.

ಹಿಂಗಾರು, ಮುಂಗಾರು ಕೈಕೊಟ್ಟು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತು. ನೀರಾವರಿ ಪ್ರದೇಶದಲ್ಲಿನ ರೈತರು ಮಾತ್ರ ಭತ್ತ ಬೆಳೆದು ಉತ್ತಮ ಬೆಲೆ ಪಡೆದರು. ಆದರೆ, ಎರಡನೇ ಅವಧಿಯಲ್ಲಿ ಬಿತ್ತನೆ ಸಾಧ್ಯವಾಗಲಿಲ್ಲ. ಹತ್ತಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದರು. ಹಲವು ಸಿಹಿ,ಕಹಿ ಘಟನೆಗಳೊಂದಿಗೆ 2023 ವಿದಾಯ ಹೇಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+