ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ರಾಯಚೂರು ಜಿಲ್ಲೆಯ ಹಮಾಲರು: ಬದುಕು ದುಸ್ತರ
ರಾಯಚೂರು, ನವೆಂಬರ್ 21: ಎಪಿಎಂಸಿಗಳಲ್ಲಿ ನೋಂದಾಯಿಸಿ ಕೆಲಸ ಮಾಡುವವರಿಗಿಂತ ಮೂಟೆಗಳ ಭಾರ ಎತ್ತುವ ಹಮಾಲರು ಹೆಚ್ಚಾಗಿದ್ದಾರೆ. ದಿನಗೂಲಿಯಾಗಿ ದುಡಿಯುವ ಇವರಿಗೆ ಪ್ರತಿದಿನವೂ ಕೈತುಂಬ ಕೆಲಸ ಇರುತ್ತದೆ ಎನ್ನುವ ಖಾತರಿ ಇಲ್ಲ. ಅರ್ಧದಷ್ಟು ಹಮಾಲರು ಕೆಲಸವಿಲ್ಲದೆ ಕುಳಿತುಕೊಳ್ಳುತ್ತಾರೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೂ ಹಮಾಲರಿಗೆ ದುಡಿಮೆ ಇರುವುದಿಲ್ಲ. ಆದ್ದರಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ದಿನಗೂಲಿ ಕೊಡಬೇಕು ಎನ್ನುವುದು ಜಿಲ್ಲೆಯ ಹಮಾಲರ ಬೇಡಿಕೆ ಆಗಿದೆ.
ಅನೇಕ ಬಾರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಹಮಾಲರ ಕ್ಷೇಮಾಭಿವೃದ್ಧಿಗೆ ರೂಪಿಸಿದ ಯೋಜನೆಗಳು ಎಪಿಎಂಸಿ ಆವರಣಕ್ಕೆ ಮಾತ್ರ ಸಿಮೀತವಾಗಿವೆ. ನೂತನ ಎಪಿಎಂಸಿ ಕಾಯ್ದೆ ಜಾರಿಯಾದ ಬಳಿಕ ಅಲ್ಲಿಯೂ ಹಮಾಲರಿಗೆ ಕೆಲಸ ಕಡಿಮೆಯಾಗಿದೆ. ಅಲ್ಲದೆ ಎಲ್ಲ ಹಮಾಲರಿಗೂ ನಿವೇಶನ ಮತ್ತು ವಸತಿಗಳನ್ನು ನಿರ್ಮಾಣ ಮಾಡಿಕೊಟ್ಟಿಲ್ಲ. ಹಮಾಲರ ಕ್ಷೇಮಾಭಿವೃದ್ಧಿಗೆ ಯಾವುದೇ ಪ್ರತ್ಯೇಕ ಕಚೇರಿ ಇಲ್ಲ. ಕಾರ್ಮಿಕ ಇಲಾಖೆಯಲ್ಲಿ ಇದೀಗ ಅಸಂಘಟಿತ ಕಾರ್ಮಿಕರಿಗೂ ಗುರುತಿನ ಚೀಟಿ ಹಾಗೂ ವಿಮಾ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಹಮಾಲರಲ್ಲಿ ಜಾಗೃತಿ ಕೊರತೆ ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ಇನ್ನೂ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಪಡೆದಿಲ್ಲ.
ರಾಯಚೂರಿನ ಎಪಿಎಂಸಿ, ಕಿರಾಣಾ ಬಜಾರ್, ಹತ್ತಿ ಮಾರುಕಟ್ಟೆ, ಜಿನ್ನಿಂಗ್ ಮಿಲ್‌ಗಳು, ಅಕ್ಕಿ ಗಿರಣಿಗಳು, ತರಕಾರಿ ಮಾರುಕಟ್ಟೆಗಳಲ್ಲಿ ಹಮಾಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ, ಹಮಾಲಿಗರ ಗೋಳಾಟ
ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಬಿಹಾರ, ಉತ್ತರ ಪ್ರದೇಶಗಳಿಂದಲೂ ಹಮಾಲಿ ಕೆಲಸಕ್ಕಾಗಿ ರಾಯಚೂರಿಗೆ ಬಂದು ನೆಲೆಸಿದ್ದಾರೆ. ಇಂತಹ ಕಡೆಗಳಲ್ಲಿ ಹಮಾಲರಿಗೆ ಹಕ್ಕು ಹಾಗೂ ಉದ್ಯೋಗ ಭದ್ರತೆ ಎಂಬುದಿಲ್ಲ. ಕನಿಷ್ಠ ಅವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಕೂಡ ಇಲ್ಲದಂತಾಗಿದೆ. ರಾಯಚೂರಿನ ಎಪಿಎಂಸಿಯಲ್ಲಿ ನೂರಾರು ಮಹಿಳಾ ಹಮಾಲರಿದ್ದು, ಅವರಿಗೂ ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಅವರನ್ನು ಸಂಘಟಿಸಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ಇಲಾಖೆಯೂ ಕೂಡ ಮುಂದಾಗಿಲ್ಲ. ಅವರು ಚೀಲಗಳನ್ನು ಎತ್ತುವುದು, ಕೃಷಿ ಉತ್ಪನ್ನಗಳನ್ನು ಸ್ವಚ್ಛಗೊಳಿಸಿ ಚೀಲಗಳನ್ನು ತುಂಬಿಸುವ ಕೆಲಸ ಮಾಡಿಕೊಂಡಿದ್ದಾರೆ.

ಹಮಾಲಿಗರ ಕಷ್ಟಗಳನ್ನು ಆಲಿಸದ ಸರ್ಕಾರ
ದೈಹಿಕ ಬಲ ಕುಗ್ಗಿದ ಬಳಿಕ ಹಮಾಲರು ಜೀವನ ಸಾಗಿಸುವುದು ದುಸ್ತರವಾಗಿದೆ. ಭಾರ ಎತ್ತುವಾಗ, ಇಳಿಸುವಾಗ ಏನಾದರೂ ಅನಾರೋಗ್ಯ ಸಮಸ್ಯೆಗೆ ಒಳಗಾದರೆ ನೆರವು ನೀಡುವುದಕ್ಕೆ ಯಾವುದೇ ವ್ಯವಸ್ಥೆಗಳು ಇಲ್ಲದಂತಾಗಿದೆ. ಅನೇಕ ಹಮಾಲರು ಕೈ, ಕಾಲು ಶಕ್ತಿ ಕಳೆದುಕೊಂಡು ಮೂಲೆಗುಂಪಾಗಿದ್ದಾರೆ. ಹಮಾಲರ ಮಕ್ಕಳಿಗಾಗಿ ಉಚಿತ ಶಿಕ್ಷಣ ಹಾಗೂ ಹಮಾಲರಿಗೆ ಪಿಂಚಣಿ ನೀಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರ ಇದುವರೆಗೂ ಈಡೇರಿಸಿಲ್ಲ. "ಹಮಾಲಿ ಕೆಲಸ ಮಾಡುವುದು ಅಂದರೆ ಮಡಿವಾಳರ ಕತ್ತೆಗಿಂತಲೂ ಹೆಚ್ಚು ಭಾರ ಹೊರಬೇಕು. ಶಕ್ತಿ ಇರುವವರೆಗೂ ದುಡಿಯುತ್ತೇವೆ. 50 ವರ್ಷದ ನಂತರ ಕಾಲು, ಟೊಂಕ ನೋವು ಶುರುವಾಗಿ ನಡೆಯಲು ಬಾರದಂತಾಗುತ್ತದೆ. ನಂತರ ನಮ್ಮ ಬದುಕು ತುಂಬಾ ಕಷ್ಟಕರವಾಗುತ್ತದೆ" ಎಂದು ಹಮಾಲರ ಸಂಘದ ಕಾರ್ಯದರ್ಶಿ ಗಂಗಪ್ಪ ಹೊಸಳ್ಳಿ ಅವರು ಅಳಲು ತೋಡಿಕೊಂಡಿದ್ದಾರೆ.
ಗಂಜ್‌ನಲ್ಲಿ ವರ್ತಕರ ವಿವಿಧ ದಾಸ್ತಾನು ತುಂಬಿದ ಚೀಲಗಳನ್ನು ಲಾರಿಗೆ ಲೋಡ್ ಮಾಡುವುದು, ಅನ್ ಲೋಡ್ ಮಾಡುವುದು ಸೇರಿದಂತೆ ಹಲವು ವಿಧದ ಕೆಲಸಗಳು ಇರುತ್ತವೆ. ಸರ್ಕಾರ ಹಮಾಲರಿಗೆ ಆರ್ಥಿಕ ಭದ್ರತೆ ಒದಗಿಸಬೇಕು. 60 ವರ್ಷದ ನಂತರ ಇತರೆ ಕಾರ್ಮಿಕರಿಗೆ ಕೊಡುವಂತೆ ನಿವೃತ್ತಿ ಪಿಂಚಣಿ ಸೌಲಭ್ಯವನ್ನು ನಮಗೆ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ, ವಸತಿ ಸೌಲಭ್ಯದಂತಹ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಿದರೆ ಮಾತ್ರ ಹಮಾಲದ ಬದುಕು ಸ್ವಲ್ಪ ಮಟ್ಟಿಗೆ ಸುಧಾರಿಸಲು ಸಾಧ್ಯವಿದೆ ಎಂದು ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ ಮತ್ತು ಅಧ್ಯಕ್ಷ ಬಾಷುಮಿಯಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಮಾಲಿಗರ ಬದುಕು ದುಸ್ತರವಾಯ್ತ?
ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಹಮಾಲರಿಗೆ ಸರ್ಕಾರದಿಂದ ಸಿಗಬೇಕಾದ ಯಾವ ಸೌಲಭ್ಯಗಳು ಇಂದಿಗೂ ದೊರಕಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಸಿದ ಇವರಿಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೆ ಅವಕಾಶ ನೀಡದೆ ವಂಚಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ವ್ಯಾಪಾರದ ಸ್ಥಳಗಳಲ್ಲಿ ನೂರಾರು ಹಮಾಲರು ಚೀಲಕ್ಕೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ನಿತ್ಯ ಕೆಲಸವನ್ನು ಮಾಡುತ್ತಿದ್ದಾರೆ. ಅಹೋರಾತ್ರಿ ದೂಳಿನಲ್ಲಿ ಕೆಲಸ ಮಾಡುವ ಈ ವರ್ಗದ ಜನರಿಗೆ ಕನಿಷ್ಠ ಸೌಲಭ್ಯಗಳು ನೀಡದೇ ಇರುವುದು ದುಃಖದ ಸಂಗತಿ ಆಗಿದೆ. ಸಿಮೆಂಟ್, ಕೃಷಿ ಉತ್ಪನ್ನ ವಸ್ತುಗಳು ಸೇರಿದಂತೆ ಇತರೆಡೆ ಭಾರವಾದ ಮತ್ತು ಧೂಳಿನಲ್ಲಿ ಕೆಲಸ ಮಾಡುವ ಹಮಾಲರ ಸುರಕ್ಷತೆ ದೃಷ್ಠಿಯಿಂದ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಗೃಹಗಳ ಸೌಲಭ್ಯಗಳಿಲ್ಲ. ಕೆಲಸ ಸಿಗದೆ ಅಹೋರಾತ್ರಿ ತಿರುಗಾಟ ನಡೆಸಿ ಖಾಲಿ ಕೈಯಿಂದ ತೆರಳಿ ಉಪವಾಸ ಮಲಗುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ.
"ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾತ್ರ ಕೆಲವರು ನೋಂದಣಿ ಮಾಡಿಸಿದ್ದೇವೆ. ಮೃತರಾದರೆ ಮಣ್ಣಿನ ಖರ್ಚಿಗೆ 10 ಸಾವಿರ ರೂಪಾಯಿ, ವಿಮೆ ಆಧಾರದಲ್ಲಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡುವುದಾಗಿ ಹೇಳುತ್ತಾರೆ. ಇದನ್ನು ಹೊರತುಪಡಿಸಿ ವಸತಿ, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ನೀಡಿದ ಉದಾಹರಣೆಗಳಿಲ್ಲ. ಕಾರ್ಮಿಕ ಇಲಾಖೆ ನಮ್ಮನ್ನು ತತ್ಸಾರದಿಂದ ಕಾಣುತ್ತಿದೆ," ಎಂದು ಹಿರಿಯ ಹಮಾಲ ಮಹಿಬೂಬಸಾಬ ಅಳಲು ತೋಡಿಕೊಂಡಿದ್ದಾರೆ.

ಕಾಯಿಲೆಗಳಿಗೆ ತುತ್ತಾಗುತ್ತಿರುವ ಹಮಾಲಿಗಳು
ಇನ್ನು ದೇವದುರ್ಗ ತಾಲೂಕಿನಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿದ್ದಾರೆ. ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ 350, ಸಿಮೆಂಟ್ ಗೊಬ್ಬರ ಅಂಗಡಿಗಳಲ್ಲಿ 80 ಜನ, ಎಪಿಎಂಸಿಯಲ್ಲಿ 80 ಜನ, ಗಬ್ಬೂರು ಹೋಬಳಿಯಲ್ಲಿ 80, ಜಾಲಹಳ್ಳಿ ಹೋಬಳಿಯಲ್ಲಿ 120ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಹಮಾಲಿ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಕೆಲಸದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ಮತ್ತೊಂದೆಡೆ ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ವಲಸೆ ಬಂದ ಕಾರ್ಮಿಕರು ಕಡಿಮೆ ಕೂಲಿಗೆ ಕೆಲಸಕ್ಕೆ ಹೋಗುವುದರಿಂದ ಸ್ಥಳೀಯ ಹಮಾಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕ್ರೇನ್ ಮತ್ತು ಆಧುನಿಕ ಯಂತ್ರೋಪಕರಣಗಳು ಬಹುತೇಕ ಹಮಾಲಿ ಕಾರ್ಮಿಕರು ಕೆಲಸವನ್ನು ಕಸಿದುಕೊಳ್ಳುತ್ತಿವೆ. ಬಹುತೇಕ ಹಮಾಲರು ಬಡವರಾಗಿದ್ದು, ಆರೋಗ್ಯದಲ್ಲಿ ಸಾಕಷ್ಟು ಗಂಭೀರ ಕಾಯಿಲೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹಮಾಲಿ ಕಾರ್ಮಿಕ ರಮೇಶ ಬೇಸರ ವ್ಯಕ್ತಪಡಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಇರುವ ಹಮಾಲರು ಜೀವನದ ಭದ್ರತೆ ಇಲ್ಲದೆ ಸರ್ಕಾರದ ಸವಲತ್ತುಗಳಿಂದ ವಂಚಿತಗೊಂಡಿದ್ದಾರೆ. ಪಟ್ಟಣದಲ್ಲಿ 150ಕ್ಕೂ ಅಧಿಕ ಎಪಿಎಂಸಿ ಹಮಾಲರು, ವೇಬ್ರಿಡ್ಜ್ ಹಮಾಲರು ಹಾಗೂ ಎತ್ತು ಬಂಡಿ ಹಮಾಲರು ಇದ್ದಾರೆ. ಟಂ ಟಂ ವಾಹನ, ಮಿನಿ ಗೂಡ್ಸ್ ವಾಹನಗಳ ಭರಾಟೆ ಹೆಚ್ಚಿದಂತೆ ಎತ್ತು ಬಂಡಿ ಹಮಾಲರಿಗೆ ಬೇಡಿಕೆ ಕಡಿಮೆಯಾಗಿದೆ. ಕಾರಣ ದಿನನಿತ್ಯದ ದುಡಿಮೆ, ಆದಾಯ ಕಡಿಮೆಯಾಗಿ ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ಅಸಂಘಟಿತ ಕಾರ್ಮಿಕರಾಗಿರುವ ಹಮಾಲರನ್ನು ಗುರುತಿಸುವಲ್ಲಿ ತಾಲೂಕು ಆಡಳಿತ ಹಾಗೂ ಕಾರ್ಮಿಕ ಇಲಾಖೆಗಳು ವಿಫಲವಾಗಿವೆ.












Click it and Unblock the Notifications