ರಾಯಚೂರು ಬಿಜೆಪಿಯಲ್ಲಿ ನಿರುತ್ಸಾಹ, ಕಾಂಗ್ರೆಸ್‌ನತ್ತ ಕಾರ್ಯಕರ್ತರ ಚಿತ್ತ
ರಾಯಚೂರು, ಜುಲೈ 16: ಜಿಲ್ಲಾ ಬಿಜೆಪಿ ಘಟಕದಲ್ಲಿ ಆಂತರಿಕ ಕಚ್ಚಾಟ, ಒಳಬೇಗುದಿ, ಒಳ ಒಪ್ಪಂದಗಳು, ಆರೋಪ, ಪ್ರತ್ಯಾರೋಪಗಳು, ನಾಯಕರ ಕೆಸರೆರಚಾಟದಿಂದಾಗಿ ಕಾರ್ಯಕರ್ತರು ಕಾಂಗ್ರೆಸ್‌ಗೆ ವಲಸೆ ಹೋಗುವತ್ತ ಚಿತ್ತಹರಿಸಿದ್ದಾರೆ. ಪಕ್ಷದ ಎಲ್ಲ ಘಟಕಗಳಲ್ಲೂ ಅಸಮಾಧಾನದ ಹೊಗೆ ಹೆಚ್ಚಿದ್ದು ತಣಿಸುವುದು ಪಕ್ಷದ ವರಿಷ್ಠರಿಗೆ ತಲೆ ನೋವಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಎಲ್ಲ ಪಕ್ಷಗಳಲ್ಲಿ ಬಲವರ್ಧನೆಗೆ ಆದ್ಯತೆ ನೀಡಿ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ನಡೆದಿದೆ. ಆದರೆ ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಅಸಮಾಧಾನದ ಹೊಗೆ ಹೆಚ್ಚುತ್ತಲೇ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರಿಂದ ಕಾರ್ಯಕರ್ತರು ಪಕ್ಷ ತೊರೆಯುವ ಮುನ್ನೂಚನೆ ಇದೆ.

ಇದೀಗ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಸ್ಥಿತಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಯಾವ ನಾಯಕರು ಕಾರ್ಯಕರ್ತರ ಕೈಗೆ ಸಿಗದೆ ಇದ್ದರಿಂದಲೂ ಅನಾಥರಾಗಿದ್ದಾರೆ. ಸಮಾಧಾನ ಹೇಳಬೇಕಾದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕಾದ ನಾಯಕರೇ ಕಾರ್ಯಕರ್ತರ ಬಳಿ ಸುಳಿಯುತ್ತಿಲ್ಲ ಎಂಬ ಆರೋಪಗಳಿವೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಹೊರತು ಪಡಿಸಿದರೆ ಬೇರೆ ಯಾವ ಅಭ್ಯರ್ಥಿಗಳು ಕಾರ್ಯಕರ್ತರ ಕೈಗೆ ಸಿಗದೆ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುವವರಿಲ್ಲದೇ ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಕೇಳದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ಈ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪಕ್ಷ ಬೆಲೆತೆರುವುದರಲ್ಲಿ ಅನುಮಾನವೇ ಇಲ್ಲ ಎಂಬ ಅಭಿಪ್ರಾಯಗಳಿವೆ.
ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಅವರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಬೇಕು. ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಸೋತಿದ್ದಾರೋ ಅಂತಹ ಕಡೆ ಹೋಗಿ ಹುರಿದುಂಬಿಸುವ ಬದಲು ನಿರಾಸಕ್ತಿ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು? ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಬೂತ್‌ನಲ್ಲಿ ಕಡಿಮೆ ಮತಗಳು ಬಿದ್ದಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸಗಳು ಆಗಬೇಕು. ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಆಲೋಚಿಸುತ್ತಿಲ್ಲ ಎಂಬ ಆರೋಪಗಳು ಕಾರ್ಯಕರ್ತರ ವಲಯದಲ್ಲಿವೆ.

ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಕಚೇರಿಗೆ ಸೀಮಿತವಾಗಿದ್ದಾರೆಯೇ ಹೊರತು ಬೇರೆ ಯಾವ ಕೆಲಸ ಕಾರ್ಯ ಮಾಡುತ್ತಿಲ್ಲ. ಇತರೆ ತಾಲೂಕು ಅಧ್ಯಕ್ಷರುಗಳ ಜೊತೆಯೂ ಚರ್ಚೆ ಮಾಡಿ ಪಕ್ಷ ಮುನ್ನೆಡೆಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ.
ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಜಿಲ್ಲಾಧ್ಯಕ್ಷರು, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಿಸದಿದ್ದರೆ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಲಿದ್ದು, ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಕಾರ್ಯಕರ್ತರ ಒತ್ತಾಸೆಯಾಗಿದೆ. ವಿಧಾನಸಭೆ ಚುನಾವಣೆ ಸೋಲಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಕಾರಣರಾಗಿದ್ದು ಕೂಡಲೇ ಪಕ್ಷ ಸಂಘಟನೆ ಮಾಡುವವರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ನಿಷ್ಠಾವಂತ ಕಾರ್ಯಕರ್ತರ ಆಗ್ರಹವಾಗಿದೆ.
ಜಿಲ್ಲಾ ಬಿಜೆಪಿ ಘಟಕದಲ್ಲಿ ಅಶಿಸ್ತು ಹೆಚ್ಚಾಗಿದೆ. ನಾಯಕರ ಕಚ್ಚಾಟ ಬಿಜೆಪಿ ಕಾರ್ಯಕರ್ತರನ್ನು ಕಂಗೆಡಿಸಿದೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಕಂಡಿರುವ ಹೀನಾಯ ಸೋಲು ಕಾರ್ಯಕರ್ತರಲ್ಲಿ ಧೈರ್ಯಗುಂದಿಸಿದೆ. ವರ್ಷದಲ್ಲಿಯೇ ಎದುರಾಗುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪಕ್ಷದ ವರಿಷ್ಠರು ಮುಂದಾಗಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡದ ಸಂಸದ ಸ್ಥಾನದ ಅಭ್ಯರ್ಥಿ ಬದಲಿಸಲು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ. ಅದೇ ರೀತಿ ಜಿಲ್ಲಾಧ್ಯಕ್ಷರು ಯಾವುದೇ ಪಕ್ಷ ಸಂಘಟನೆ ಮಾಡದಿರುವುದರಿಂದ ಇತ್ತೀಚೆಗೆ ರಾಜ್ಯಾಧ್ಯಕ್ಷರು ಜಿಲ್ಲಾ ಪ್ರವಾಸ ಮಾಡಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದ್ದಾರೆ ಎಂದು ಕೆಲ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರು ರಾಯಚೂರು ಜಿಲ್ಲಾ ಪ್ರವಾಸ ಮಾಡಿ ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರ ಆರಂಭಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ. ಏಳು ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಾಗಿದ್ದು ಬಿಜೆಪಿ ಕಾರ್ಯಕರ್ತರು ತಿದ್ದಿಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ನಂತರ ಜಿಲ್ಲೆಯಲ್ಲಿ ಸೋಲಿನ ಅವಲೋಕನ ಸಭೆಗಳನ್ನು ಮಾಡಿ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿರುವೆ. ಲೋಕಸಭೆ ಚುನಾವಣೆಯ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮಾನಂದ ಯಾದವ್ ಹೇಳಿದ್ದಾರೆ.












Click it and Unblock the Notifications