ರಾಯಚೂರಿನಲ್ಲಿ ವಸತಿ ಯೋಜನೆಗೆ ಬಿಡದ ಗ್ರಹಣ: ನನಸಾಗದ ಬಡವರ ಮನೆ ಕನಸು
ರಾಯಚೂರು, ಅಕ್ಟೋಬರ್ 04: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆಯಾಗದ್ದರಿಂದ ಕಳೆದ ಮೂರು-ನಾಲ್ಕು ವರ್ಷಗಳಿಂದ ಬಡವರು ಮನೆ ಹೊಂದುವ ಕನಸು ಕನಸಾಗಿಯೇ ಉಳಿದಿದೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುವ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 2015ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಆರಂಭಿಸಲಾಗಿದೆ. 2019ರ ನಂತರ ಯೋಜನೆಗೆ ಕೋವಿಡ್ ನೆಪವೊಡ್ಡಿ 2 ವರ್ಷ ಆರ್ಥಿಕ ಸಂಕಷ್ಟ ಎದುರಾಯಿತು.

ಯೋಜನೆಯಡಿ ನಗರ ಮತ್ತು ಸ್ಥಳೀಯ 12 ಸಂಸ್ಥೆಗಳ ವ್ಯಾಪ್ತಿ ಯ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ 2015 ರಿಂದ 2022 ರ ಅಂತ್ಯದವರೆಗೆ 9,858 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿ ಮನೆಗಳ ನಿರ್ಮಾಣಕ್ಕೆ ಅನಮೋದನೆ ನೀಡಲಾಗಿತ್ತು .ಆ ಪೈಕಿ 9,421 ಮನೆಗಳನ್ನು ಜಿಯೋ ಟ್ಯಾಗ್‌ನಲ್ಲೂ ಗುರುತಿಸಲಾಗಿತ್ತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಗೆ 2016 ಜೂನ್‌ನಿಂದ 2021 ಅಂತ್ಯದವರೆಗೆ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.ಬುನಾದಿ ಹಂತ ಸೇರಿ ವಿವಿಧ ಹಂತದಲ್ಲಿರುವ ಮನೆಗಳ ಫಲಾನುಭವಿಗಳು ಅತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ.
ಇನ್ನೂ ನಿರ್ಮಾಣ ಭಾಗ್ಯ ಕಾಣದ 867 ಫಲಾನುಭವಿಗಳ ಮನೆಗಳ ನಿರ್ಮಾಣದ ಭವಿಷ್ಯ ಅತಂತ್ರವಾಗಿದೆ. ಅನ್ಯ ವಸತಿ ಯೋಜನೆಗಳಡಿ ಫಲಾನುಭವಿಗಳಾಗಲೂ ಕೂಡ ತೊಂದರೆಯಾಗಿದೆ. ಹಳೆಯ ವಸತಿ ಯೋಜನೆಯಡಿ ಮನೆಯೂ ನಿರ್ಮಾಣಗೊಳ್ಳದೇ ಫಲಾನುಭವಿಗಳು ಈಗಲೂ ಹರಕು ಮುರುಕು ಗುಡಿಸಲು ,ತಾತ್ಕಾಲಿಕ ಟೆಂಟ್‌ಗಳಲ್ಲಿ ಬದುಕು ನಡೆಸುವಂತಾಗಿದೆ.
ಫಲಾನುಭವಿಗಳ ಆಯ್ಕೆ , ಅಗತ್ಯ ಮಾಹಿತಿ ಕಲೆ ಹಾಕುವುದು ಜಿಯೋ ಟ್ಯಾಗ್ ಸೇರಿ ನಾನಾ ಪ್ರಕ್ರಿಯೆಗಳ ಹಂತದಲ್ಲೇ ಕಾಲಹರಣ ಮಾಡಿದ್ದು, ಮನೆಗಳ ನಿರ್ಮಾಣಕ್ಕೆ ಚಾಲನೆ ತಡವಾಗಿದೆ. ಇದುವರೆಗೆ 4,798 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು 1,415 ಮನೆಗಳ ನಿರ್ಮಾಣ ಆರಂಭಗೊಂಡಿಲ್ಲ. 867 ಮನೆಗಳು ಬುನಾದಿ ಹಂತದಲ್ಲಿಯೇ ಉಳಿದಿವೆ. 966 ಮನೆಗಳು ಚಾವಣಿಯ ಹಂತದಲ್ಲಿದ್ದು 839 ಮನೆಗಳು ಗೋಡೆಯ ಹಂತದಲ್ಲಿವೆ.
ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಹಂತ ಹಂತವಾಗಿ ಬಿಡುಗಡೆ ಮಾಡುವ ಅನುದಾನ ಸ್ಥಗಿತಗೊಂಡು ಎರಡು ವರ್ಷಗಳೇ ಕಳೆದಿವೆ. ಕೋವಿಡ್ ಕಾರಣದಿಂದ ನೆನೆಗುದಿಗೆ ಬಿದ್ದಿದ್ದ ಅವಾಸ್ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಕೂಡಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಸಭೆ ಕರೆದು ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.












Click it and Unblock the Notifications