ರೈಲು ನಿಲ್ದಾಣದಲ್ಲಿ ಸ್ಥಗಿತಗೊಂಡ ಲಿಫ್ಟ್, ಎಸ್ಕಲೇಟರ್: ಪ್ರತಿನಿತ್ಯವೂ ಪ್ರಯಾಣಿಕರ ಪರದಾಟ
ರಾಯಚೂರು ಜಿಲ್ಲೆಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಒಂದು ಪ್ಲಾಟ್ ಪಾರ್ಮ್‌ನಿಂದ ಮೊತ್ತೊಂದು ಪ್ಲಾಟ್ ಪಾರ್ಮ್‌ಗೆ ತೆರಳಲು ಲಿಫ್ಟ್ ವ್ಯವಸ್ಥೆ ಇಲ್ಲದಂತಾಗಿದೆ.
ರಾಯಚೂರು, ಮಾರ್ಚ್, 15: ಜಿಲ್ಲೆಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಒಂದು ಪ್ಲಾಟ್‌ಪಾರ್ಮ್‌ನಿಂದ ಮೊತ್ತೊಂದು ಪ್ಲಾಟ್‌ಪಾರ್ಮ್‌ಗೆ ತೆರಳಲು ಲಿಫ್ಟ್ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ಪ್ರತಿನಿತ್ಯ ಜಿಲ್ಲೆಯಿಂದ ಬೇರೊಂದು ಊರಿಗೆ ಪ್ರಯಾಣ ಬೆಳೆಸುವ ಸಾವಿರಾರು ಜನ ವೃದ್ಧರು, ಮಕ್ಕಳು ಹಾಗೂ ವಿಕಲಚೇತನರು ಪರದಾಡುವಂತಾಗಿದೆ.
ಲಿಫ್ಟ್ ಇದ್ದರೂ ಇಲ್ಲದಂತಾಗಿದ್ದು, ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ. ಕಳೆದ ಎರಡು ವಾರದಿಂದ ಲಿಫ್ಟ್ ಸೇವೆ ಸ್ಥಗಿತವಾಗಿದ್ದು, ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಬೇರೆ ಪ್ಲಾಟ್‌ಫಾರ್ಮ್‌ಗೆ ತೆರಳಲು ತೊಂದರೆ ಎದುರಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ರೈಲು ಹತ್ತಲು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸ್ಥಗಿತಗೊಂಡ ಲಿಫ್ಟ್, ಎಸ್ಕಲೇಟರ್
ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡ ರಾಯಚೂರು ರೈಲು ನಿಲ್ದಾಣ, ದೇಶದ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದಾಗಿದೆ. ದೇಶದ ಸ್ವಾತಂತ್ರ್ಯ ಇತಿಹಾಸವನ್ನು ತನ್ನ ಒಡಲಿನಲ್ಲಿ ಹೊತ್ತುಕೊಂಡಿರುವ ಈ ನಿಲ್ದಾಣದಲ್ಲಿ ಮೂರು ಪ್ಲಾಟ್‌ಫಾರ್ಮ್‌ಗಳಿವೆ. ಪ್ರತಿದಿನ ದೇಶದ ನಾನಾ ಪ್ರದೇಶಗಳಿಗೆ ರಾಯಚೂರು ಮಾರ್ಗವಾಗಿ ಸಂಚರಿಸುತ್ತೇವೆ. ಆದರೆ ಇಲ್ಲಿನ ಪ್ಲಾಟ್‌ಪಾರ್ಮ್‌ಗಳಿಗೆ ತೆರಳು ಸೂಕ್ತವಾದ ಲಿಫ್ಟ್‌ನ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿನಿತ್ಯವೂ ಪ್ರಯಾಣಿಕರ ಪರದಾಟ
ಸಾವಿರಾರು ಪ್ರಯಾಣಿಕರು ಬೆಂಗಳೂರು, ಹುಬ್ಬಳ್ಳಿ , ಹೈದರಾಬಾದ್, ಮುಂಬೈ , ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜಿಲ್ಲೆಯ ಮಾರ್ಗವಾಗಿ ಸಂಚರಿಸುತ್ತಾರೆ. ಅಲ್ಲದೇ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸೇರಿ ನೂರಾರು ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಲಿಫ್ಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಆದರೆ ಕಳೆದ ಎರಡು ವಾರದಿಂದ ಆ ಲಿಫ್ಟ್‌ಗಳು ಕೂಡ ಸ್ಥಗಿತವಾಗಿದ್ದರಿಂದ ಹಿರಿಯರು, ವಿಕಲಚೇತನರು, ಮಕ್ಕಳು ಹಾಗೂ ಮಹಿಳೆಯರು ಒಂದು ಪ್ಲಾಟ್ ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ತಲುಪಲು ಹರಸಾಹಸ ಪಡುವಂತಾಗಿದೆ.
8 ತಿಂಗಳ ಹಿಂದೆ 2 ಲಿಫ್ಟ್‌ಗಳ ಉದ್ಘಾಟನೆ
ದೇಶದ ಹಳೆಯ ಹಾಗೂ ಇತಿಹಾಸ ಹೊಂದಿದ ರಾಯಚೂರು ರೈಲ್ವೆ ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ಜನರ ಅನುಕೂಲಕ್ಕಾಗಿ ಲಿಫ್ಟ್ ಸೌಲಭ್ಯ ಕಲ್ಪಿಸುವಂತೆ ಸರ್ಕಾರ ಸ್ಥಳೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತು. ಕಳೆದ 8 ತಿಂಗಳ ಹಿಂದೆ 2 ಲಿಫ್ಟ್‌ಗಳನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ ಇದೀಗ ಇವು ಸ್ಥಗಿತಗೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕ ಅನುದಾನ ಬಿಡುಗಡೆ
ರೈಲು ನಿಲ್ದಾಣದಲ್ಲಿ ಲಿಫ್ಟ್ ಹಾಗೂ ಎಸ್ಕಲೇಟರ್ ಮಂಜೂರು ಮಾಡಿದ್ದು, ಒಟ್ಟು ಎರಡು ಲಿಫ್ಟ್ ಹಾಗೂ ನಾಲ್ಕು ಎಕ್ಸ್‌ಲೇಟರ್ ನಿರ್ಮಾಣ ಮಾಡಲು ಸರ್ಕಾರ ಸೂಚಿಸಿದೆ. ಈಗಗಾಲೇ 1.3 ಕೋಟಿ ರೂಪಾಯಿ ಅನುದಾನವನ್ನು ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್‌ಲೇಟರ್ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಅಧಿಕ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದೆ
ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಎಕ್ಸಲೇಟರ್ ಅಳವಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ಸರ್ಕಾರ ಅನುದಾನ ಮಂಜೂರು ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಕೆಲ ದಿನಗಳ ಮಟ್ಟಿಗೆ ಪಾದಚಾರಿಗಳಿಗೆ ಹಾಗೂ ವೃದ್ಧರಿಗೆ ಲಿಫ್ಟ್ ವ್ಯವಸ್ಥೆ ಇರುವುದಿಲ್ಲ. ಜನರು ಸಹಕಾರ ನೀಡಬೇಕು ಎಂದು ರಾಯಚೂರು ಲೋಕಸಭಾ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಇಲ್ಲಿನ ಪ್ರಯಾಣಿಕರ ಬೇಡಿಕೆಯ ಮೇರೆಗೆ ಎಕ್ಸಲೇಟರ್ ಅಳವಡಿಕೆ ಮಾಡಲು ಸಾಕಷ್ಟು ಬಾರಿ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ರೈಲು ನಿಲ್ದಾಣಕ್ಕೆ 4 ಎಕ್ಸ್‌ಲೇಟರ್ ಮಂಜೂರು ಮಾಡಿದೆ. ಇದರಿಂದ ವೃದ್ಧರು, ವಿಕಲಚೇತನರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ಬೋರ್ಡ್‌ನ ಸದಸ್ಯ ಬಾಬುರಾವ್ ತಿಳಿಸಿದ್ದಾರೆ.












Click it and Unblock the Notifications