ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ: ಇಲ್ಲಿದೆ ಕಾರ್ಯಕ್ರಮಗಳ ವಿವರ
ರಾಯಚೂರು, ಆಗಸ್ಟ್ 30: ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಆಯೋಜಿಸಿರುವ ಸಪ್ತ ರಾತ್ರೋತ್ಸವಕ್ಕೆ ಮಂಗಳವಾರ ರಾತ್ರಿ ವಿಧ್ಯುಕ್ತ ಚಾಲನೆ ನೀಡಲಾಯಿತು.
ಅಪಾರ ಭಕ್ತರ ಸಮ್ಮುಖದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆರಾಧಾನ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಗೋ ಪೂಜೆ, ಅಶ್ವಪೂಜೆ, ಧಾನ್ಯ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿವಿಧ ಸೇವಾ ಕೇಂದ್ರಗಳ ಕಚೇರಿಗಳ ಪೂಜೆ ನೆರವೇರಿಸಲಾಯಿತು. ಮಠದ ಸಿಬ್ಬಂದಿ ಹಾಗೂ ಶ್ರೀ ಮಠದ ವಿದ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾಚಾರ್, ಆಡಳಿತಾಧಿಕಾರಿ ಮಾಧವಶೆಟ್ಟಿ ಇದ್ದರು.
ರಾಯರ ಸನ್ನಿಧಿಯಲ್ಲಿ ಮಂಗಳವಾರದಿಂದ ಸಪ್ತಾಹ ಪೂರ್ತಿ ನಡೆಯಲಿರುವ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವದ ಸಂಭ್ರಮ ಮಂತ್ರಾಲಯದಲ್ಲಿ ಮನೆ ಮಾಡಿದೆ. ಶ್ರೀಮಠ ಹಾಗೂ ಆವರಣವನ್ನು ಶುಚಿಗೊಳಿಸಿ ಸುಣ್ಣ-ಬಣ್ಣದಿಂದ ಅಲಂಕರಿಸಲಾಗಿದೆ. ಮಠದ ಆವರಣದಲ್ಲಿ ಬೃಹದಾಕಾರದ ರಂಗೋಲಿ ಬಿಡಿಸಲಾಗಿದೆ. ಆರಾಧನಾ ಮಹೋತ್ಸವ ಕಣ್ತುಂಬಿಕೊಳ್ಳಲು ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ಯಾತ್ರಿನಿವಾಸಗಳು, ಮಂಗಲ ಕಾರ್ಯಾಲಯಗಳು ಹಾಗೂ ಹೋಟೆಲ್‌ಗಳು ಭರ್ತಿಯಾಗಿವೆ.
ಪರಿಮಳ ಪ್ರಸಾದ ವಿತರಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಮಹಿಳೆಯರು ರಂಗೋಲಿ, ಮಾಲೆಗಳ ತಯಾರಿ ಇನ್ನಿತರ ತಯಾರಿಯಲ್ಲಿ ತೊಡಗಿದರೆ, ಪುರುಷರು ಇಲ್ಲಿಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದಾರೆ. ಹೊರ ರಾಜ್ಯಗಳಿಂದ ಸ್ವಯಂ ಸೇವಕರು ಇಲ್ಲಿಗೆ ಆಗಮಿಸಿದ್ದಾರೆ.

ಮಂತ್ರಾಲಯದ ವಸತಿ ಗೃಹಗಳು ಭಕ್ತರಿಂದ ತುಂಬಿತುಳುಕುತ್ತಿವೆ. ಶ್ರೀಮಠದ ಪರಿಸರದಲ್ಲಿ ಕೊಠಡಿಗಳು ದೊರೆಯದ ಕಾರಣ ಅನೇಕ ಜನ ರಾಯಚೂರಿನ ಹೋಟೆಲ್‌ಗಳನ್ನು ಬುಕ್ ಮಾಡಿದ್ದಾರೆ. ಗುರುವಾರ ಇನ್ನಷ್ಟು ಭಕ್ತರು ಇಲ್ಲಿಗೆ ಆಗಮಿಸುವ ಕಾರಣ ಜನ ದಟ್ಟಣೆ ಆಗುವ ಸಾಧ್ಯತೆ ಇದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ
ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಆಗಸ್ಟ್ 30 ರಂದು ಶಾಖೋತ್ಸವ ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ, ಆಗಸ್ಟ್ 31 ರಂದು ಪೂರ್ವಾ ಆರಾಧನಾ ರಜತ ಸಿಂಹ ವನೋತ್ಸವ, ಸೆಪ್ಟೆಂಬರ್ 1 ರಂದು ಮಧ್ಯಾರಾಧನಾ ಮಹಾ ಪಂಚಾಮೃತ ಅಭಿಷೇಕ ಗಜರಾಜತ ಸ್ವರ್ಣ ರಥೋತ್ಸವ, ಸೆಪ್ಟೆಂಬರ್ 2 ರಂದು ಉತ್ತರ ಆರಾಧನಾ ಪ್ರಾತಃ, ರಾಜಬೀದಿಯಲ್ಲಿ ಮಹಾರಥೋತ್ಸವ ಕಾರ್ಯಕ್ರಮ, ಸೆಪ್ಟೆಂಬರ್ 3 ರಂದು ಸುಜ್ಞಾನೇಂದ್ರ ತೀರ್ಥರ ಆರಾಧಾನ ಮಹೋತ್ಸವ, ಅಶ್ವ ವನೋತ್ಸವ ಹಾಗೂ 4 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಮಂಗಳವಾರ ಧ್ವಜಾರೋಹಣ ವಿದ್ವಾನ್ ಒಲಗುಂಡಿ ಗುಂಡಾಚಾರ್ ಅವರಿಂದ ದಾಸವಾಣಿ ಸಾಹಿಲ್ ನೃತ್ಯ ಶಿಕ್ಷಣಾಲಯ ಆನಂತಪುರದ ವಿದ್ಯಾರ್ಥಿಗಳಿಂದ ಕುಚಿಪುಡಿ ನೃತ್ಯ ಕಾರ್ಯಕ್ರಮ ನಡೆದಿದೆ. ಆಗಸ್ಟ್ 30 ರಂದು ಶಾಖೋತ್ಸವ ಎಚ್.ಎಸ್ ಅನುಸೂಯ ಕುಲಕರ್ಣಿ ಇವರಿಂದ ಅಂಗಾಕುಲಂಗ್ ಕಾರ್ಯಕ್ರಮ ವಿದ್ವಾನ ಆರ್.ಕೆ ಪ್ರಸನ್ನಕುಮಾರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಕಲಾ ಬಿಂದು ಅವರಿಂದ ಭರತನಾಟ್ಯ. ಆಗಸ್ಟ್ 31 ರಂದು ಪೂರ್ವ ಆರಾಧನಾ ವಿದ್ವಾನ್ ಬಾಲಚಂದ್ರ ನಾಕೋಡ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಅಲ್ಕಾದೇಶಪಾಂಡೆ ಉಪಸನಾ ಅವರಿಂದ ಭರತನಾಟ್ಯ ನಡೆಯಲಿದೆ.

ಸೆಪ್ಟೆಂಬರ್ 1 ರಂದು ಮಧ್ಯ ಆರಾಧನಾ ಶೋಭನಾ ಸ್ವಾಮಿನಾಥನ್ ಅವರಿಂದ ಪಂಚವೀಣಾ ಸಂಗೀತಾ ಕಾರ್ಯಕ್ರಮ ವಿದ್ವಾನ್ ರಾಯಚೂರು ಶೇಷಗಿರಿ ದಾಸ್ ಅವರಿಂದ ದಾಸವಾಣಿ ಓಂಕಾರ್ ನೃತ್ಯ ಸಾಧನಾ ಅವರು ನೃತ್ಯ ರೂಪಕ ಪ್ರದರ್ಶಿಸುವರು. ಸೆಪ್ಟೆಂಬರ್ 2 ರಂದು ಉತ್ತರ ಆರಾಧನಾ ಮಹೋತ್ಸವ ಡಾ.ರಕ್ಷಾ ಕಾರ್ತಿಕ್ ಅವರಿಂದ ಭರತನಾಟ್ಯ ಡಾ.ನೀಲಂ ಸುದರ್ಶನ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಪ್ರಭಾತ್ ಕಲಾ ಆರ್ಟ್ಸ್‌ನಿಂದ ನೃತ್ಯ ರೂಪಕ ಸೆಪ್ಟೆಂಬರ್ 3 ರಂದು ಅಶ್ವ ವಾಹನ ಉತ್ಸವ ನಾಟ್ಯ ಸರಸ್ವತಿ ಅವರಿಂದ ಕುಚುಪುಡಿ ನೃತ್ಯ ವಿದ್ವಾನ ಜಗದೀಶ್ ಆಚಾರ್ಯರಿಂದ ದಾಸವಾಣಿ ಶ್ರೀ ಶಾರದಾ ಅವರಿಂದ ಭರತನಾಟ್ಯ ಸೆಪ್ಟೆಂಬರ್ 4 ರಂದು ಸಮಾರೋಪ ನಡೆಯಲಿದೆ. ಶಿವ ಆಕಾಡೆಮಿಯಿಂದ ಭರತನಾಟ್ಯ ವಿದುಷಿ ಎಚ್.ಜೆ ಅಂಗ್ಹಾ ಅವರಿಂದ ದಾಸವಾಣಿ ಅಮೃತವರ್ಷಿಣಿ ಭಜನಾ ಮಂಡಳಿಯಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.












Click it and Unblock the Notifications