ಲಿಂಗಸೂರು ತಾಲೂಕಿನಲ್ಲಿ ದುರಸ್ತಿ ಕಾಣದ ಗ್ರಂಥಾಲಯಗಳು, ವಿದ್ಯಾರ್ಥಿಗಳ ಆಕ್ರೋಶ
ರಾಯಚೂರು, ಡಿಸೆಂಬರ್, 29: ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳು ಹಲವು ಸಮಸ್ಯೆಗಳಿಂದಾಗಿ ಓದುಗರಿಗೆ ಅನುಕೂಲವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ತಾಲೂಕಿನಲ್ಲಿ 2 ಸಾರ್ಜನಿಕ, 3 ಅಲೆಮಾರಿ, 26 ಗ್ರಾಮ ಪಂಚಯತಿ ಗ್ರಂಥಾಲಯಗಳಿವೆ. 2015ರಲ್ಲಿ ಹೊಸದಾಗಿ ರಚನೆಗೊಂಡ ಖೈರವಾಡಗಿ, ಹಲ್ಕಾವಟಗಿ, ಚಿತ್ತಾಪುರ, ನೀರಲಕೇರಿ ಪಂಚಾಯತಿಗಳಿಗೆ ಈವರೆಗೆ ಗ್ರಂಥಾಲಯದ ಸೌಲಭ್ಯ ಕಲ್ಪಿಸಿಲ್ಲ. ಆದರೆ, ಗ್ರಾಮ ಪಂಚಾಯಿತಿ ವತಿಯಿಂದ ಗ್ರಂಥಾಲಯದ ಕರ ವಸೂಲಿ ಮಾಡಲಾಗುತ್ತಿದೆ. ಇವುಗಳಲ್ಲಿ ಯಾವೊಂದು ಗ್ರಂಥಾಲಯಗಳೂ ಕೂಡ ಇದುವರೆಗೂ ಡಿಜಿಟಲೀಕರಣಗೊಂಡಿಲ್ಲ. ಕೆಲ ಗ್ರಾಮ ಪಂಚಾಯಿತಿಗಳಲ್ಲಿನ ಗ್ರಂಥಾಲಯದ ಕೊಠಡಿಗಳು ಉತ್ತಮವಾಗಿದ್ದರೆ, ಇನ್ನೂ ಕೆಲವು ಗ್ರಾಮದ ಗ್ರಂಥಾಯಲಗಳ ಕಟ್ಟಡಗಳು ಶಿಥಿಲಗೊಂಡಿವೆ. ಉಪ್ಪಾರ ನಂದಿಹಾಳ, ಆನೆಹೊಸೂರು ಸೇರಿದಂತೆ ಇನ್ನಿತರ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳು ಚಿಕ್ಕದಾದ ಜಾಗದಲ್ಲಿದ್ದು, ಕುಳಿತುಕೊಳ್ಳಲು ಸಮರ್ಪಕ ಜಾಗವಿಲ್ಲದ ಸ್ಥಿತಿಯಲ್ಲಿವೆ.
ಕೆಲ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳೂ ಇಲ್ಲ. ಸಾಕಷ್ಟು ಪುಸ್ತಕಗಳು, ಟೇಬಲ್‌ಗಳು, ಕಂಪ್ಯೂಟರ್‌ನಂತಹ ಮೂಲ ಸೌಕರ್ಯಗಳು ದೊರೆತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ
ಬಹುತೇಕ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ವಾಹನಗಳ ಪಾರ್ಕಿಂಗ್ ಸಮಸ್ಯೆಯಿದೆ. ಮುದಗಲ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 6 ತಿಂಗಳಾದರೂ ಇನ್ನೂ ದುರಸ್ತಿಯಾಗಿಲ್ಲ. ಓದುಗರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಗ್ರಂಥಪಾಲಕರ ವಿರುದ್ಧ ಆಕ್ರೋಶ
ಇನ್ನೂ ಕೆಲ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಪುಸ್ತಕಗಳು ಲಭ್ಯವಿಲ್ಲ. ಪಟ್ಟಣದ ಮೇಗಳ ಪೇಟೆಯಲ್ಲಿರುವ ಅಲೆಮಾರಿ ಗ್ರಂಥಾಲಯಕ್ಕೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿಯೇ ಗ್ರಂಥಾಲಯ ನಡೆಯುತ್ತಿದೆ. ಗ್ರಂಥಾಲಯಕ್ಕೆ ಸರಬರಾಜು ಆಗುತ್ತಿದ್ದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದರು.

ಗ್ರಂಥಾಲಯ ಮೇಲ್ವಿಚಾರಕರ ಅಳಲು
ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು 15ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರೂ, ಸರ್ಕಾರ ಕಾಯಂ ಮಾಡಿಲ್ಲ. ಉತ್ತಮ ಸಂಭಾವನೆಯನ್ನು ನೀಡುತ್ತಿಲ್ಲ. ತಿಂಗಳಿಗೆ 12 ಸಾವಿರ ರೂಪಾಯಿ ಮಾತ್ರ ಗೌರವ ಧನ ನೀಡಲಾಗುತ್ತಿದೆ. ಇದರಿಂದ ಸಂಸಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಂಥಾಲಯ ಮೇಲ್ವಿಚಾರಕರು ಅಳಲು ತೋಡಿಕೊಂಡರು.

ಸೂಕ್ತ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ
ಮೇಲ್ವಿಚಾರಕರಿಗೆ ಅತಂತ್ರ ಸ್ಥಿತಿ ಎದುರಾಗಿದೆ. ಕೆಲವು ಗ್ರಾಮೀಣ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರು ಬೆಳಗ್ಗೆ ಬಾಗಿಲು ತೆರೆದು ಹೋದರೆ ಬರುವುದು ಬಾಗಿಲ ಹಾಕುವುದಕ್ಕೆ ಮಾತ್ರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಡಿಜಿಟಲ್ ಗ್ರಂಥಾಲಯ ಹಾಗೂ ಪ್ರತ್ಯೇಕ ಓದುವ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿ ಶೃತಿ ಒತ್ತಾಯಿಸಿದರು. ಇನ್ನು ಮುದಗಲ್ ಸಾರ್ವಜನಿಕ ಗ್ರಂಥಾಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರ ಎರಡು ದಿನಗಳಲ್ಲಿ ದುರಸ್ತಿ ಮಾಡಿಸುತ್ತೇವೆ. ಉಳಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಗ್ರಂಥಾಲಯ ಅಧಿಕಾರಿ ಡಾ.ರಾಮ್ ಕಲಾಲ ಭರವಸೆ ನೀಡಿದ್ದಾರೆ.












Click it and Unblock the Notifications