Leopard Attack: ಮೂವರ ಮೇಲೆ ಚಿರತೆ ದಾಳಿ- ಚಿರತೆ ಕೊಂದು ಮೆರವಣಿಗೆ ಮಾಡಿದ ಗ್ರಾಮಸ್ಥರು
ರಾಯಚೂರು ಜುಲೈ 08: ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡ ಗ್ರಾಮದ ಹೊರವಲಯದಲ್ಲಿ ಮೂವರ ಮೇಲೆ ಚಿರತೆ ದಾಳಿ ಮಾಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ದೊಣ್ಣೆಗಳಿಂದ ಹೊಡೆದು ಚಿರತೆಯನ್ನೇ ಕೊಂದು ಹಾಕಿದ್ದಾರೆ.
ಗ್ರಾಮದ ಬಾಲಕನೊಬ್ಬ ಬೆಳಿಗ್ಗೆ 8 ಗಂಟೆಗೆ ಬಯಲು ಶೌಚಕ್ಕೆ ಹೊರಟಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಬಾಲಕ ತಕ್ಷಣ ಮರಳಿ ಮನೆಗೆ ಬಂದು ಗ್ರಾಮಸ್ಥರಿಗೆ ಚಿರತೆ ಕಾಣಿಸಿದ್ದನ್ನು ತಿಳಿಸಿದ್ದಾನೆ.

ಮಕ್ಕಳ ಮೇಲೆ ದಾಳಿ ಮಾಡಿದರೆ ಕಷ್ಟ ಎಂದು ಆತಂಕಗೊಂಡ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಶಿಳ್ಳೆ ಕೇಕೆ ಹಾಕುತ್ತ ಪೊದೆಗಳತ್ತ ಹೋಗಿದ್ದಾರೆ. ಇದೇ ಅವಧಿಯಲ್ಲಿ ಹಠಾತ್ ಎರಗಿದ ಚಿರತೆ ಗ್ರಾಮದ ರಮೇಶ (35) ಮೇಲೆ ದಾಳಿ ಮಾಡಿ ಬಲಗೈ ಕಚ್ಚಿ ಗಾಯಗೊಳಿಸಿದೆ. ಬಿಡಿಸಲು ಹೋದ ಮಲ್ಲಣ್ಣ (42), ರಂಗನಾಥ (29) ಅವರ ಮೇಲೆಯೂ ದಾಳಿ ಮಾಡಿದೆ. ಮೂವರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದರು. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆಗೆ ಅರವಳಿಕೆ ನೀಡಿ ಅಥವಾ ಬಲೆ ಹಾಕಿ ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಸಮಪರ್ಕವಾದ ಉತ್ತರ ದೊರೆಯಲಿಲ್ಲ. ಮಧ್ಯಾನ 2 ಗಂಟೆ ಸುಮಾರಿಗೆ ಮತ್ತೊಬ್ಬ ಗ್ರಾಮಸ್ಥನ ಮೇಲೆ ದಾಳಿ ನಡೆಸಿದೆ. ಹೀಗಾಗಿ ಗ್ರಾಮಸ್ಥರು ರೊಚ್ಚಿಗೆದ್ದು ದೊಣ್ಣೆಗಳನ್ನು ಹಿಡಿದುಕೊಂಡು ಗುಡ್ಡದ ಮೇಲೆ ಹೋಗಿ ಹೊಡೆದು ಅದನ್ನು ಕೊಂದು ಹಾಕಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚಿರತೆಯನ್ನು ಕೊಂದ ನಂತರ ಕೆಲವರು ಚಿರತೆ ಶವದೊಂದಿಗೆ ಪೊಟೊ ತೆಗೆಸಿಕೊಂಡರು. ನಂತರ ಅದರ ಕಾಲುಗಳನ್ನು ಹಿಡಿದು ಎತ್ತುಕೊಂಡು ಮೆರವಣಿಗೆ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.
'ಗ್ರಾಮದಲ್ಲಿ ಮೂವರ ಮೇಲೆ ಚಿರತೆ ದಾಳಿ ನಡೆಸಿರುವ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಪ್ರಕರಣವನ್ನು ಅವಲೋಕಿಸಿ ಚಿರತೆ ಕೊಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಅರಣ್ಯ ಇಲಾಖೆಯ ಡಿಸಿಎಫ್ ಪ್ರವೀಣ ಹೇಳಿದ್ದಾರೆ.
ಮೇ 18 ರಂದು ವಾಚನಾಯಕ ತಾಂಡದಲ್ಲಿ ಆಕಳು ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾಲಹಳ್ಳಿ, ಬಿ. ಗಣೇಕಲ್, ಎನ್ ಗಣೇಕಲ್, ಆಲ್ಕೋಡ ಮತ್ತು ಅರಕೇರಾದಲ್ಲಿ ಹೋಬಳಿ ವ್ಯಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಚಿರತೆ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳ ಸ್ಪಂದನೆ ದೊರೆಯದ ಕಾರಣ ಗ್ರಾಮಸ್ಥರೇ ಚಿರತೆಯನ್ನು ಕೊಂದು ಹಾಕಿದ್ದಾರೆ.












Click it and Unblock the Notifications