ಮುಂಗಾರು ಮಳೆ ಕೊರತೆ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಹೊಡೆತ
ರಾಯಚೂರು, ಜೂನ್, 17: ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷ್ಣಾ ನದಿಯಿಂದ ನೀರಿನ ಹರಿವಿನ ಪ್ರಮಾಣ ಇಳಿಮುಖ ಆಗಿದ್ದು, ಇದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್) ನೀರಿನ ಕೊರತೆ ಎದುರಾಗಿದೆ.
ಆರ್‌ಟಿಪಿಎಸ್ 8 ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಗೆ ತಿಂಗಳಿಗೆ 2.24 ಲಕ್ಷ ಕ್ಯೂಬಿಕ್ ಮೀಟರ್ (100 ಕ್ಯೂಸೆಕ್) ನೀರಿನ ಅಗತ್ಯವಿದೆ. ಕಳೆದ ವರ್ಷ ಗೂಗಲ್ ಬ್ಯಾರೇಜ್‌ನಲ್ಲಿ 344.5 ಮೀಟರ್ ನೀರಿನ ಸಂಗ್ರಹವಾಗಿತ್ತು. ಈ ವರ್ಷ 3 ಅಡಿಗಳಷ್ಟು ಕಡಿಮೆ ನೀರು ಇದೆ. ಸದ್ಯ 341.5 ಮೀಟರ್ ನೀರಿನ ಲಭ್ಯವಿದೆ. ಹೀಗಾಗಿ ಎಚ್ಚರಿಕೆಯಿಂದ ಮಿತವಾಗಿ ನೀರು ಬಳಸಲಾಗುತ್ತಿದೆ.

ಈಗಾಗಲೇ ಆರ್‌ಟಿಪಿಎಸ್‌ನ 8 ವಿದ್ಯುತ್ ಘಟಕಗಳ ಪೈಕಿ 7 ವಿದ್ಯುತ್ ಘಟಕಗಳಿಂದ ಉತ್ಪಾದನೆ ಆಗುತ್ತಿದೆ. 1,720 ಮೆಗಾವಾಟ್ ಸಾಮರ್ಥ್ಯದ 8 ಘಟಕಗಳಲ್ಲಿ ಈಗ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಕೃಷ್ಣಾ ನದಿಯಿಂದ ಸರಬರಾಜು ಆಗುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ವಿದ್ಯುತ್ ಘಟಕಗಳ ಉತ್ಪಾದನೆಗೆ ನೀರಿನ ಕೊರತೆ ಆಗಬಾರದೆಂದು ಈಗಾಗಲೇ ಆರ್‌ಟಿಪಿಎಸ್ ಅಧಿಕಾರಿಗಳು ಮತ್ತು ನಾರಾಯಣಪುರ ಡ್ಯಾಂ ಅಧಿಕಾರಿಗಳ ಜೊತೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಚರ್ಚೆ ನಡೆಸಿದ್ದಾರೆ.
ಆರ್‌ಟಿಪಿಎಸ್ ವಿದ್ಯುತ್ ಘಟಕಗಳ ಉತ್ಪಾದನೆಗೆ ತಕ್ಷಣಕ್ಕೆ ನೀರಿನ ಕೊರತೆ ಇಲ್ಲ. ನಾರಾಯಣಪುರ ಜಲಾಶಯದಲ್ಲಿ ವರ್ಷಕ್ಕೆ ಬೇಕಾದಷ್ಟು ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ನೀರಿನ ಕೊರತೆ ಆಗದಂತೆ 2.8 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. 8 ವಿದ್ಯುತ್ ಘಟಕಗಳ ಉತ್ಪಾದನೆಗಾಗಿ ಪ್ರತಿ ದಿನಕ್ಕೆ 1.2 ಲಕ್ಷ ಕ್ಯೂಬಿಕ್ ಮೀಟರ್ ನೀರು ಬೇಕು ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎಂ.ದಿವಾಕರ್ ಹೇಳಿದರು
ಅಲ್ಲದೆ ಸದ್ಯಕ್ಕೆ ಗುರ್ಜಾಪುರ ಬ್ಯಾರೇಜ್‌ನಲ್ಲಿ ಕೂಡ ನೀರು ಸಂಗ್ರಹ ಮಾಡಲಾಗಿದೆ. ಈ ಮೂಲಕ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸಿ.ಎಂ.ದಿವಾಕರ್ ಹೇಳಿದರು.
ಬೇಸಿಗೆ ಬೆಳೆ ಉಳಿಸಿಕೊಳ್ಳಲು ಹರಸಾಹಸ
ಹಾಗೆಯೇ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದು, ಬೇಸಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂಗಾರು ಮಳೆ ವಿಳಂಬ ಆದರೆ ಕೃಷಿ ಬೆಳೆಗಳು ಒಣಗಿ ಹೋಗಲಿದ್ದು, ಇದರಿಂದ ಜಿಲ್ಲೆಯ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ.
ಜಿಲ್ಲೆಯಲ್ಲಿ 4,98,244 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 2,60,901 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಏಪ್ರಿಲ್ ತಿಂಗಳು 46.6 ಮಿ.ಮೀ. ವಾಡಿಕೆ ಮಳೆಯಾಗಿದ್ದು, 26.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಹೀಗೆ ಜಿಲ್ಲೆಯಲ್ಲಿ 43.8ರಷ್ಟು ಮಳೆ ಕೊರತೆ ಎದುರಾಗಿದೆ. ಮೇ ತಿಂಗಳಿನಲ್ಲಿ 99.9 ಮಿ.ಮೀ. ವಾಡಿಕೆ ಮಳೆಯಾಗಿದ್ದು, 137.3 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆದರೆ ಈ ಮಳೆ ಒಂದೆರೆಡು ದಿನಗಳಲ್ಲಿ ಆಗಿರುವುದರಿಂದ ರೈತರ ಬೆಳೆಗೆ ಅಷ್ಟೇನೋ ಪ್ರಯೋಜನ ಆಗಿಲ್ಲ.
ಪ್ರಸ್ತುತ ಬೇಸಿಗೆ ಬೆಳೆಗಳಾದ ಭತ್ತ 17,848 ಹೆಕ್ಟೇರ್, 2,885 ಹೆಕ್ಟೇರ್ ರಾಗಿ, 872 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳು ಸೇರಿ ಒಟ್ಟು 25,897 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದೆ. ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಇನ್ನು ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ 43,495 ಹೆಕ್ಟೇರ್ ಕಬ್ಬಿನ ಬೆಳೆ ಕಟಾವಿಗೆ ಬಂದಿದ್ದು, ಇದಕ್ಕೆ 2 ರಿಂದ 3 ಬಾರಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕಿದೆ.












Click it and Unblock the Notifications