ರಾಯಚೂರು: ಹತ್ತಿ ಬೆಳೆಯ ಕಳೆ ತೆಗೆಯುವ ಕೂಲಿ ಕಾರ್ಮಿಕರಿಗೆ ಫುಲ್ ಡಿಮ್ಯಾಂಡ್
ರಾಯಚೂರು, ಆಗಸ್ಟ್ 04: ಕಳೆದ ಎರಡು ವಾರದಿಂದ ನಿರಂತರ ಸುರಿದ ಮಳೆಯಿಂದಾಗಿ ಹತ್ತಿ ಬೆಳೆಯಲ್ಲಿ ಕಳೆ ವಿಪರೀತ ಬೆಳೆದಿದ್ದು, ಕಳೆ ತೆಗೆಯಲು ಕೂಲಿ ಕಾರ್ಮಿಕರು ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಹತ್ತಿ ಬೆಳೆಗಾರರಿಗೆ ನಿತ್ಯವೂ ಕೂಲಿಕಾರರನ್ನು ಹುಡುಕಾಡುವುದೇ ಕಾಯಕವಾಗಿದೆ. ಜಿಲ್ಲೆ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಎರಡು ಮೂರು ದಿನಗಳಿಂದ ಮಳೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಹತ್ತಿ ಬೆಳೆ ಯಲ್ಲಿ ಕಳೆ ತೆಗೆಯಲು ಬರುವಂತೆ ಕೂಲಿ ಕಾರ್ಮಿಕರ ಮನೆಗೆ ಅಲೆಯುವಂತಾಗಿದೆ.

ಹತ್ತಿ ಬೆಳೆಯುವ ಹಂತದಲ್ಲಿದ್ದು ಬೆಳೆಗಿಂತಲೂ ಕಳೆಯೇ ಹೆಚ್ಚಾಗಿದ್ದು ತೆಗೆಸಲು ರೈತರು ಪರದಾಡುವ ಸ್ಥಿತಿ ಇದೆ. ರಾಯಚೂರು ಗ್ರಾಮೀಣ ಸ್ಭೆರಿದಂತೆ ನಾನಾ ತಾಲೂಕಿನ ಗ್ರಾಮಗಳಲ್ಲಿ ಇತ್ತೀಚೆಗೆ ಹದ ಮಳೆಯಾಗಿದ್ದು ಭತ್ತದ ಗದ್ದೆಯಲ್ಲಿಯೂ ಕಳೆ ಹೆಚ್ಚಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.
ಕಳೆದ ತಿಂಗಳು ಮಳೆ ಇಲ್ಲದ ಪರಿಣಾಮ ಸಮೀಪದ ಬೋರ್ ವೆಲ್ ಹೊಂದಿದ ರೈತರು ಕೇವಲ ಭತ್ತ ನಾಟಿ ಮಾಡಲು ತೆರಳಿದ್ದರು. ಪ್ರಸ್ತುತ ಜಿಲ್ಲೆಯಲ್ಲಿ ನಿರಂತರ ಮಳೆಯಿಚಿದಾಗಿ ಹತ್ತಿ ಬೆಳೆ ಯಲ್ಲಿ ಕಳೆ ತೆಗೆಯುವಲ್ಲಿ ನಿರತರಾಗಿದ್ದಾರೆ. ಈ ಬಾರಿ ಜಿಲ್ಲೆಯಾದ್ಯಂತ ಸುಮಾರು ೧.೩೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತಲಾಗಿದೆ.
ಇದರಲ್ಲಿ ರಾಯಚೂರು 51.470 ಹೆಕ್ಟೇರ್, ಮಾನ್ವಿಯಲ್ಲಿ 6,674 ಹೆಕ್ಟೇರ್, ಸಿರವಾರ 6,160 ಹೆಕ್ಟೇರ್ , ದೇವದುರ್ಗ 65,400 ಹೆಕ್ಟೇರ್, ಲಿಂಗಸೂಗೂರು 3,195 ಹೆಕ್ಟೇರ್, ಮಸ್ಕಿ 3,400ಹೆಕ್ಟೇರ್, ಸಿಂಧನೂರು 385 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತಲಾಗಿದೆ.

ಬೆಳೆಯೂ ಕೆಲವು ಕಡೆ ಚೆನ್ನಾಗಿ ಬಂದಿದೆ. ಅದರಷ್ಟೇ ಕಳೆಯೂ ಹೆಚ್ಚಿದೆ. ಕಳೆ ತೆಗೆಸುವುದೇ ರೈತರಿಗೆ ಬಹುದೊಡ್ಡ ಸವಾಲಾಗಿದೆ. ಟಂಟಂ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಕೂಲಿ ಕಾರ್ಮಿಕರನ್ನು ಹೆಚ್ಚಿನ ಹಣ ನೀಡಿ ಕರೆದುಕೊಂಡು ಜಮೀನಿಗೆ ಹೋಗುವಂತಾಗಿದೆ. ಈ ಮೊದಲು ಪುರುಷರಿಗೆ 200 ರಿಂದ 250 ರೂಪಾಯಿ ಕೂಲಿ ಇತ್ತು. ಮಹಿಳೆಯರಿಗೆ 120 ರಿಂದ 150 ರೂಪಾಯಿ ಕೂಲಿ ಇತ್ತು. ಅದರೀಗ ಬೇಡಿಕೆ ಹೆಚ್ಚಾಗಿ ಪುರುಷರಿಗೆ 250 ರಿಂದ 300 ರೂಪಾಯಿ, ಮಹಿಳೆಯರಿಗೆ 150 ರಿಂದ 200 ರೂಪಾಯಿ ಹೆಚ್ಚಿದೆ. ಸಾವಿರಾರೂ ರೂಪಾಯಿ ವೆಚ್ಚ ಮಾಡಿ ಬೀಜ , ಗೊಬ್ಬರ ಹಾಕಿದ ರೈತರಿಗೆ ಕೂಲಿ ದರ ಏರಿಕೆ ಮತ್ತಷ್ಟು ಸಮಸ್ಯೆ ತಂದಿದೆ. ಕೂಲಿ ದರ , ಕಾರ್ಮಿಕರ ಕೊರತೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಇತ್ತೀಚೆಗೆ ಸುರಿದ ಜಿಟಿ ಜಿಟಿ ಮಳೆಯಿಂದ ಹತ್ತಿ ಬೆಳೆ ಯಲ್ಲಿ ಕಸ ಹೆಚ್ಚಾಗಿ ಬೆಳೆದಿದೆ. ಇದರಿಂದ ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಕಳೆ ನಾಶಕಗಳನ್ನು ಸಿಂಪಡಣೆ ಮಾಡಿದರೆ ಒಂದು ವಾರದಲ್ಲಿ ಕಸ ಒಣಗಲಿದ್ದು, ಬೆಳೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕೃಷಿ ಸಂಶೋಧನಾ ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥ ಎಂ.ಎ.ಡಾ.ಬಸವಣ್ಣೆಪ್ಪ ಹೇಳಿದರು.
ಜಿಲ್ಲೆಗೆ ಬರಗಾಲು ಆವರಿಸಿತು ಎನ್ನುವಷ್ಟರಲ್ಲಿಯೇ ಉತ್ತಮ ಮಳೆ ಯಾಯಿತು. ನಂತರ ಹತ್ತಿ ಬಿತ್ತಲಾಯಿತು. ಆದರೆ ಕಳೆದ ಎರಡು ವಾರಗಳ ಕಾಲ ನಿರಂತರ ಮಳೆಯಾಗಿದ್ದರಿಂದ ಹತ್ತಿ ಬೆಳೆಯಲ್ಲಿ ಹೆಚ್ಚಿನ ಕಸ ಬೆಳೆದಿದೆ. ದುಪ್ಪಟ್ಟು ಕೂಲಿ ಕೊಟ್ಟು ಕಳೆ ತೆಗೆಸಬೇಕು. ಜಿಲ್ಲೆಯಲ್ಲಿ ಕೂಲಿಕಾರರು ಸಿಗುತ್ತಿಲ್ಲ. ಹುಡುಕುವ ಸ್ಥಿತಿ ಇದೆ ಎಂದು ಮಾಚನೂರು ರೈತ ರಾಮಣ್ಣ ಹೇಳಿದ್ದಾರೆ.












Click it and Unblock the Notifications