ರಾಯಚೂರು ಜಿಲ್ಲೆಯ ಅಭಿವೃದ್ಧಿ ಮರೆತ ಕೆಕೆಆರ್‌ಡಿಬಿ, ಕಾಮಗಾರಿಗಳು ಕುಂಠಿತ, ಜನಾಕ್ರೋಶ
ಅಭಿವೃದ್ಧಿಗೆ ಮೀಸಲಾದ ಕೆಕೆಆರ್‌ಡಿಬಿಯ 5 ಕೋಟಿ ರೂಪಾಯಿ ಅನುದಾವನ್ನು ಬಳಸಿ ಕಲ್ಯಾಣ ಕರ್ನಾಟಕ ಉತ್ಸವ ನಡೆಸಲು ಬಿಜೆಪಿ ಮುಂದಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ರಾಯಚೂರು, ಮಾರ್ಚ್, 2: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಚಿವರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕಿತ್ತು. ಆದರೆ ಇದನ್ನು ಮರೆತ ಬಿಜೆಪಿ ಸರ್ಕಾರ, ತಮ್ಮ ಪಕ್ಷದ ಶಾಸಕರೊಬ್ಬರನ್ನು ಅಧ್ಯಕ್ಷರನ್ನಾಗಿ ಕೂರಿಸಿದೆ. ಇದರಿಂದ ಬಿಜೆಪಿ ಪಕ್ಷ ಇದೀಗ ಪ್ರತಿಪಕ್ಷ ಸೇರಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಅಭಿವೃದ್ಧಿಗೆ ಮೀಸಲಾದ ಕೆಕೆಆರ್‌ಡಿಬಿಯ 5 ಕೋಟಿ ರೂಪಾಯಿ ಅನುದಾವನ್ನು ಬಳಸಿ ಕಲ್ಯಾಣ ಕರ್ನಾಟಕ ಉತ್ಸವ ನಡೆಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ರಾಯಚೂರು ಜಿಲ್ಲೆ ಸೇರಿದಂತೆ ಇತರ ಕಡೆಯಿಂದಲೂ ಅಪಸ್ವರ ಕೇಳಿಬಂದಿದೆ. ಉತ್ಸವದ ಹೆಸರಿನಲ್ಲಿ ಬಿಜೆಪಿ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
2018-19ರಿಂದ ಈಚೆಗೆ ವರ್ಷದಿಂದ ವರ್ಷಕ್ಕೆ ಕಾಮಗಾರಿಗಳು ತ್ವರಿತವಾಗಿ ಮುಗಿಯದೇ ಹಾಗೆಯೇ ಉಳಿದಿವೆ. ಕಾಮಗಾರಿ ಕುಂಟಿತವಾಗಿರುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಕೆಕೆಆರ್‌ಡಿಬಿಯಿಂದ ಇದುವರೆಗೂ ಕೈಗೊಂಡ 28,929 ಕಾಮಗಾರಿಗಳಲ್ಲಿ 23,428 ಕಾಮಗಾರಿಗಳು ಮಾತ್ರ ಮುಗಿದಿವೆ. 3,580 ಕಾಮಕಾರಿಗಳು ಪ್ರಗತಿ ಹಂತದಲ್ಲಿದ್ದರೆ, 1,921 ಕಾಮಗಾರಿಗಳು ನೆಲ ಬಿಟ್ಟು ಮೇಲೆ ಎದ್ದಿಲ್ಲ ಎಂಬುದು ಎದ್ದು ಕಾಣುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 582 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ 7 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಿದೆ. 267 ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, 308 ಕಾಮಗಾರಿಗಳು ಆರಂಭವೇ ಆಗಿಲ್ಲ. ಆದರೆ ಬಿಜೆಪಿ ಸರ್ಕಾರ ಮಾತ್ರ ಚುನಾವಣೆ ತಯಾರಿಯಲ್ಲೇ ಇದೆ. ಆದ್ದರಿಂದ ಕಾಮಗಾರಿಗಳು ಸ್ಥಗಿತದ ಹಂತಕ್ಕೆ ತಲುಪಿವೆ. ಅಭಿವೃದ್ಧಿ ಕಾರ್ಯಗಳು ನಿಂತೇ ಹೋಗಲಿವೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

ಸಿಬ್ಬಂದಿ ಕೊರತೆಯಿಂದ ಅನುಷ್ಠಾನ ತಡ
ಜಿಲ್ಲೆಯ ಮಟ್ಟಿಗೆ ಅಷ್ಟು ಪ್ರಭಾವಿಯಲ್ಲದ ಶಾಸಕರಿಂದಾಗಿ ಕಾಮಗಾರಿಗಳ ಮಂಜೂರಾತಿಯಲ್ಲಿ ವಿಳಂಬ ಸಿಬ್ಬಂದಿ ಕೊರತೆಯಿಂದ ಅನುಷ್ಠಾನ ತಡವಾಗಿದೆ. 2013-14ರಲ್ಲಿ ಸ್ಥಾಪನೆಯಾದ ಮಂಡಳಿಗೆ ಸ್ವತಂತ್ರ ಕಾರ್ಯದರ್ಶಿಯನ್ನು ನೇಮಿಸದೇ ಎಲ್ಲ ಸರ್ಕಾರಗಳು ಅನ್ಯಾಯ ಎಸಗಿವೆ. ಪ್ರಾದೇಶಿಕ ಆಯುಕ್ತರಿಗೆ ಹೆಚ್ಚುವರಿಯಾಗಿ ಕೆಕೆಆರ್‌ಡಿಬಿಯ ಹೊಣೆ ವಹಿಸಿದ್ದಾರೆ. ಅವರು ಪೂರ್ಣ ಪ್ರಮಾಣದಲ್ಲಿ ಮಂಡಳಿಯ ಕಾರ್ಯ ಚಟುವಟಿಕೆಗಳತ್ತ ಗಮನಹರಿಸದಂತೆ ಮಾಡಿರುವ ಲೋಪ ಎದ್ದು ಕಾಣುತ್ತಿದೆ. ಈ ಅಂಶಗಳು ಪ್ರದೇಶದ ನಿರೀಕ್ಷಿತ ಅಭಿವೃದ್ಧಿಯ ಕನಸನ್ನು ಕಮರುವಂತೆ ಮಾಡಿವೆ.

ಕಾಮಗಾರಿ ಪರಿಶೀಲಿಸದ ಬಸವರಾಜ ಬೊಮ್ಮಾಯಿ
ಹಾಲಿ ಸರ್ಕಾರದ ಅವಧಿಯಲ್ಲಿಯೂ ಕೆಕೆಆರ್‌ಡಿಬಿಗೆ ಸಾಕಷ್ಟು ಅನುದಾನ ಒದಗಿಸುವ ಮಾತು ಕೇಳಿಬಂದಿವೆ. ಆದರೆ ಕಾರ್ಯಕ್ರಮ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಕಾಣಲಿಲ್ಲ. ಕೆಕೆಆರ್‌ಡಿಬಿಯಿಂದ ಅನುದಾನ ನೀಡಿಕೆಯಲ್ಲಿಯೂ ಜಿಲ್ಲೆಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಎದುರಾಗಿದೆ. ಇದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಮ್ಮೆಯು ಪರಿಶೀಲನೆ ನಡೆಸಲಿಲ್ಲ. ಮಂಡಳಿಯ ಪ್ರಗತಿಯನ್ನು ಆಯಾ ಜಿಲ್ಲಾಧಿಕಾರಿಗಳೇ ಪರಿಶೀಲಿಸಿದ್ದಾರೆ.

ಕಾಟಾಚಾರಕ್ಕೆ ಸಭೆ ನಡೆಸಿದ ಅಧ್ಯಕ್ಷರು
ಇದನ್ನು ಹೊರತುಪಡಿಸಿದರೆ ಕೆಕೆಆರ್‌ಡಿಬಿಯಿಂದ ಒಂದೆರಡು ಸಲ ಕಾಟಾಚಾರಕ್ಕೆ ರಾಯಚೂರಿನಲ್ಲಿ ಸಭೆ ನಡೆಸಿದ ಅಧ್ಯಕ್ಷರು ಅನಂತರ ಮತ್ತೆ ತಿರುಗಿಯೂ ನೋಡಿಲ್ಲ. ಕಲಬುರಗಿಯ ಶಾಸಕರು ಕೆಕೆಆರ್‌ಡಿಬಿಯಿಂದ ಈಗಾಗಲೇ ಸಾಕಷ್ಟು ಅನುದಾನ ಪಡೆದು ಸ್ವಕ್ಷೇತ್ರದ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಡಾ.ರಜಾಕ್ ಉಸ್ತಾದ್ ಅವರ ಆರೋಪ ಏನು?
ಆದರೆ ರಾಯಚೂರು ಸೇರಿ ಇನ್ನುಳಿದ ಜಿಲ್ಲೆಗಳಿಗೆ ಮಂಡಳಿಯಿಂದ ನಿರೀಕ್ಷಿತ ಅನುದಾನ ನೀಡುವಲ್ಲಿ ನಿರಂತರ ಅನ್ಯಾಯ ಎಸಗಲಾಗಿದೆ. ಅರೆಬರೆ ಕಾಮಗಾರಿಗಳೇ ಹೆಚ್ಚಾಗಿದೆ. ಅದರ ಪರಿಶೀಲನೆಗೆ ಆಸಕ್ತಿ ತೋರದ ಮಂಡಳಿಯ ಅಧ್ಯಕ್ಷರು ಇದೀಗ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆರೋಪ ಮಾಡಿದರು.












Click it and Unblock the Notifications