Raichur: ಸೂರ್ಯನ ತವರಾದ ರಾಯಚೂರು: ಬೇಸಿಗೆ ಆರಂಭದಲ್ಲೇ ಬಿಸಿಲು ಹೆಚ್ಚಳ
ರಾಯಚೂರು ಮಾರ್ಚ್ 13: ರಾಜನೂರಿನ ಜನ ಬಿಸಿಲಿನ ಬೇಗೆಗೆ ಹೈರಾಣಾಗಿದ್ದಾರೆ. ಬೇಸಿಗೆ ಆರಂಭದಲ್ಲೇ ರಾಯಚೂರು ಜನರ ನೆತ್ತಿ ಸುಡುತ್ತಿದ್ದಾನೆ ಸೂರ್ಯ. ಹತ್ತು ಹೆಜ್ಜೆ ನಡೆದು ವಿಶ್ರಾಂತಿಗಾಗಿ ಜನ ಮರಗಿಡಗಳನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆರೆ ಕಟ್ಟೆಗಳು ಬರಿದಾಗಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಗತಿ ಏನು ಎಂದು ರಾಯಚೂರಿನಲ್ಲಿ ಜನ ಆತಂಕಗೊಂಡಿದ್ದಾರೆ.
ಹೌದು.. ಚಿನ್ನದ ನಾಡು ರಾಯಚೂರಿನಲ್ಲಿ ರಾಜ್ಯದಲ್ಲೇ ಹೆಚ್ಚಿನ ಬಿಸಿಲು ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಬಿಸಿಲು ಹೆಚ್ಚಾಗಿದ್ದು ಸೂರ್ಯ ಹುಟ್ಟಿದರೂ ಝಳ, ಬಿಸಿಲು ಕಳೆದರೂ ಉಷ್ಣ ಹೆಚ್ಚಾಗಿರುತ್ತದೆ. ಈ ಧಗಧಗ ಬಿಸಿಲಿಗೆ ಇನ್ನೂ ಎರಡು ತಿಂಗಳು ಬೇಸಿಗೆ ಕಳೆಯೋದು ಹೇಗೆಂದು ಜನ ಚಿಂತಿತರಾಗಿದ್ದಾರೆ.

ಸೋಮವಾರ ಪ್ರಕಟವಾದ ಹವಮಾನ ವರದಿಯಲ್ಲಿ ರಾಯಚೂರಿನಲ್ಲಿ 24 ಗಂಟೆಗಳಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 40.04 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 40.7 ಡಿಗ್ರಿ ಸೆಲ್ಸಿಯಸ್, ಉತ್ತರಕನ್ನಡ ಮತ್ತು ಧಾರವಾಡದಲ್ಲಿ 40.5 ಡಿಗ್ರಿ ಸೆಲ್ಸಿಯಸ್ ಹಾಗೂ ಬಾಗಲಕೋಟೆಯಲ್ಲಿ 40.1 ಡಿ.ಸೆ ದಾಖಲಾಗಿದೆ. ರಾಜ್ಯದ ಒಟ್ಟು ಆರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಇದರಿಂದಾಗಿ ಜನ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಮಲಗಿದರೆ ಸೆಕೆಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ಬಿಸಿಲ ಝಳಕ್ಕೆ ರಾತ್ರಿಯೂ ಕೂಡ ಜನ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಸೂರ್ಯನ ಬಿಸಿಲು ಹೆಚ್ಚಾಗಿ ಪರಿಸರದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ
ಈಗಾಗಲೇ ಪ್ರತಿಷ್ಠಿತ ನಗರಗಳು ಸೇರಿದಂತೆ ರಾಯಚೂರಿನಾದ್ಯಂತ ಕುಡಿಯುವ ನೀರನ್ನು 4-5 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಕೆರೆ ಕಟ್ಟೆಗಳು ಬತ್ತಿ ಹೋಗಿದ್ದು, ಪೈಪ್‌ಲೈನ್ ಮೂಲಕ ಐದಾರು ದಿನಗಳಿಗೊಮ್ಮೆ ಇಂತಿಷ್ಟು ನೀರನ್ನು ಮಾತ್ರ ಬಿಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ ಎಂದು ಸ್ಥಳಿಯ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಬಿಸಿಲು ಹೆಚ್ಚಾದಂತೆ ಕಲ್ಲಂಗಡಿ, ಮಜ್ಜಿಗೆ, ರಾಗಿ ಅಂಬಲಿ, ತಂಪು ಪಾನೀಯ, ನಿಂಬೆ ಪಾನೀಯ, ಎಳನೀರಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಜನ ಬಿಸಿಲ ಬೇಗೆಯನ್ನು ತಣಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಐಸ್‌ಕ್ರೀಮ್ ಕೂಲ್ ಡ್ರಿಂಕ್ಸ್ ಗಳಿಗೂ ಕೂಡ ಅಂಗಡಿ, ಬೇಕರಿಗಳಲ್ಲಿ ಬೇಡಿಕೆ ಹೆಚ್ಚಾಗಿದೆ.
ಬಿಸಿಲು ಹೆಚ್ಚಾಗುತ್ತಿದ್ದಂತೆ ಜನ ಮನೆಯಿಂದ ಹೊರಡುವಾಗ ಛತ್ರಿ, ದುಪ್ಪಟ್ಟ, ಟೋಪಿ ಹಾಗೂ ಟವೆಲ್‌ನ ಸಹಾಯ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ರಾಜ್ಯದಲ್ಲಿ ರಾಯಚೂರಿನಲ್ಲಿ ಬಿಸಿಲು ಹೆಚ್ಚಾಗಿದ್ದು, ಎರಡು ತಿಂಗಳ ಬೇಸಿಗೆ ಬಿಸಿಲು ಹೇಗಿರುತ್ತದೆ ಎಂದು ಜನ ಆತಂಕಗೊಂಡಿದ್ದು ಮಾತ್ರ ಸುಳ್ಳಲ್ಲ. ಅಲ್ಲದೆ ನೀರಿನ ಸಮಸ್ಯೆ ಯಾವ ಹಂತಕ್ಕೆ ಹೋಗುತ್ತದೆ ಅನ್ನೋ ಚಿಂತೆ ಕೂಡ ಹೆಚ್ಚಾಗಿದೆ.












Click it and Unblock the Notifications