Yogi Adityanath: ರಾಯಚೂರಿನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಗಮನ ಸೆಳೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್
ರಾಯಚೂರು, ಮೇ, 01: ವಿಧಾನಸಭಾ ಚುನಾವಣೆ ಹಿನ್ನೆಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ (ಮೇ 01) ರಾಯಚೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದರು. ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರವಾಗಿ ಪ್ರಚಾರ ನಡೆಸಿದರು.
ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಚಾರ ನಡೆಸಿದ ಯೋಗಿ ಆದಿತ್ಯನಾಥ್, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತುಂಗಭದ್ರಾ, ಕೃಷ್ಣ ನದಿ ಹರಿಯುವ ಹರಿದಾಸರ ನಾಡಿನ ಜನರಿಗೆ ನಮಸ್ಕಾರ ಎಂದು ಕನ್ನಡ ಭಾಷೆಯಲ್ಲಿ ಭಾಷಣ ಶುರು ಮಾಡಿದರು.

ಹರಿದಾಸರ ಭೂಮಿ ಇದು. ಭಾರತದ ಸನಾತನ ಧರ್ಮದ ಸಂದೇಶ ನಾಡಿನ ತುಂಬಾ ಹರಡಿದ್ದಾರೆ. ನಿಜಾಮರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ. ಹಾಗೆಯೆ ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಇಲ್ಲಿಗೆ ಬಂದಿದ್ದೇನೆ. ಉತ್ತರ ಭಾರತ ಮತ್ತು ಕರ್ನಾಟಕ ರಾಮ- ಹನುಮಂತನ ಸಂಬಂಧ ಇದ್ದಂತೆ. ನಾನು ಇವತ್ತು ಹನುಮಂತನ ಭೂಮಿಗೆ ಬಂದಿದ್ದಕ್ಕೆ ಸಂತೋಷ ಆಗುತ್ತಿದೆ ಎಂದರು.
ಭಾರತ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಆಗುತ್ತಿದೆ. ಭಾರತದ ಅಭಿವೃದ್ಧಿಯನ್ನು ಇಡೀ ವಿಶ್ವವೇ ಎದುರು ನೋಡುವಂತೆ ಆಗುತ್ತಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗಿನ ಕಾಲದಲ್ಲಿ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ. ರೈಲು, ವಿಮಾನ, ಏಮ್ಸ್, ಐಐಟಿ ಹೀಗೆ ಹತ್ತಾರು ಅಭಿವೃದ್ಧಿ ಕೆಲಸಗಳು ಬಿಜೆಪಿ ಸರ್ಕಾರದಿಂದ ಆಗಿವೆ ಎಂದರು.
ಇನ್ನು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರೈತರು ತಲೆಬಾಗಿಕೊಂಡು ಓಡಾಟ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರು ತಲೆ ಎತ್ತಿಕೊಂಡು ಓಡಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳಿದರು.
ಹಾಗೆಯೆ ಐಟಿ ಹಬ್ ಹಿಂದಿನ ಕಾಲದ ನಳಂದ ವಿವಿ ನೆನಪಿಸುತ್ತಿದೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ರಾಮರಾಜ್ಯ ಕಲ್ಪನೆ ಉತ್ತರ ಪ್ರದೇಶದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ. ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿಯೂ ನಮ್ಮ ಕೊಡುಗೆ ಆಗಿದೆ ಎಂದರು.
ಪಿಎಫ್‌ಐ ಸೊಂಟವನ್ನು ನಾವು ಮುರಿದಿದ್ದೇವೆ. ಇನ್ನೂ ಪಿಎಫ್‌ಐ ತಲೆ ಎತ್ತುವುದೇ ಇಲ್ಲ ಎಂದರು. ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಡೆಸುವ ಸರ್ಕಾರ ನಮ್ಮದಾಗಿದೆ. ಮಹಾಮಾರಿ ಕೊರೊನಾ ಕಾಲದಲ್ಲಿ 200 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಮಾಡಿದ್ದೇವೆ ಎಂದು ತಿಳಿಸಿದರು.
ರಾಮನೇ ಇಲ್ಲವೆಂದು ಹೇಳುವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾಕ್ಟರ್ ಇದ್ದಾರೆ, ಅವರಿಗರ ಎಲ್ಲಾ ರೋಗಕ್ಕೂ ಔಷಧಿ ಗೊತ್ತು. ಹಾಗೆಯೇ ಕ್ಷೇತ್ರದಲ್ಲಿ ಕಾಂಗ್ರೆಸ್ ಓಡಿಸುವುದು ಗೊತ್ತು ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಹಾಗೆಯೇ ಬಿಜೆಪಿ ಪಕ್ಷ ಸುಳ್ಳಿನ ಫ್ಯಾಕ್ಟರಿ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಆ ಪಕ್ಷದ ಮುಖಂಡರು ನಿರಂತರವಾಗಿ ಸುಳ್ಳುಗಳನ್ನು ಹೇಳುವ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು.
ಮಾನ್ವಿ ಪಟ್ಟಣದಲ್ಲಿ ಟಿಎಪಿಸಿಎಂಎಸ್ ಮೈದಾನದಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಪರವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಟ್ಲರ್, ಮುಸೋಲನಿಯಿಂದ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಅಚ್ಚೇ ದಿನ್ ಬಗ್ಗೆ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಸೇರಿದಂತೆ ಇತರ ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ದೇಶದ ಜನತೆಗೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications