Raichur Constituency:ಕೈ, ಕಮಲ, "ದಳ"ಪತಿಗಳ ನಡುವೆ ತೀವ್ರ ಪೈಪೋಟಿ
ರಾಯಚೂರು, ಮೇ, 01: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ. ಅದೇ ರೀತಿ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ರಾಯಚೂರು ಗ್ರಾಮೀಣ ಕ್ಷೇತ್ರ
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರದಲ್ಲಿ 8 ಮಂದಿ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಬಸನಗೌಡ ದದ್ದಲ್ ಹಾಗೂ ಬಿಜೆಪಿಯ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ನಡುವೆ ನೇರ ಪೈಪೋಟಿ ಇದೆ. ಹಾಗೆಯೇ ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹನಾಯಕ ಸಹ ಮತದಾರರನ್ನು ಸೆಳೆಯಲು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಕಳೆದ ಬಾರಿ ಬಸನಗೌಡ ದದ್ದಲ್ ವಿರುದ್ಧ ಪರಾಭವಗೊಂಡಿದ್ದ ತಿಪ್ಪರಾಜು ಹವಾಲ್ದಾರ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಮತ್ತೊಂದೆಡೆ ಎಎಪಿ ಪಕ್ಷದ ಅಭ್ಯರ್ಥಿ ಸುಭಾಸ್‌ಚಂದ್ರ ಸಾಂಬಾಜಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಎಂ.ಖಾಸಿಂ ನಾಯಕ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಅಭ್ಯರ್ಥಿ ವೀರನಗೌಡ, ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿ ಕುಮಾರನಾಯಕ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಬಡೇಸಾಬ್ ಕಣದಲ್ಲಿದ್ದಾರೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ಸಾಮಾನ್ಯ ವರ್ಗಕ್ಕೆ ಮೀಸಲಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸನ ಭದ್ರಕೋಟೆ ಆಗಿತ್ತು. ಆದರೆ ಕಳೆದ ಎರಡೂ ಅವಧಿಯಲ್ಲೂ ಕಾಂಗ್ರೆಸ್ ಸತತ ಸೋಲನುಭವಿಸಿದೆ. ಈ ಬಾರಿ ಶಾಸಕ ಡಾ.ಶಿವರಾಜ ಪಾಟೀಲ್ ಅವರರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುವ ಮೂಲಕ ಕ್ಷೇತ್ರವನ್ನು ಕೈವಶ ಮಾಡಿಕೊಂಡು ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
2013ರಲ್ಲಿ ಮೊದಲ ಬಾರಿ ಜೆಡಿಎಸ್‌ನಿಂದ, 2018ರಲ್ಲಿ 2ನೇ ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಡಾ.ಶಿವರಾಜ ಪಾಟೀಲ್ ಇದೀಗ 3ನೇ ಗೆಲುವಿನ ತವಕದಲ್ಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೈಯ್ಯದ್ ಯಾಸೀನ್ ಸತತ ಸೋಲು ಕಂಡಿದ್ದರಿಂದ ಈ ಬಾರಿ ಹೊಸಮುಖಕ್ಕೆ ಪಕ್ಷ ಅವಕಾಶ ನೀಡಿದೆ. ನಗರಸಭೆಯ ಮಾಜಿ ಸದಸ್ಯ ಮಹಮ್ಮದ್ ಶಾಲಂ ಅವರಿಗೆ ಮಣೆ ಹಾಕಿದೆ. ಇನ್ನು ಜೆಡಿಎಸ್‌ನಿಂದ ನಗರಸಭೆ ಮಾಜಿ ಅಧ್ಯಕ್ಷ ಇ.ವಿನಯಕುಮಾರ್ ಅಖಾಡಕ್ಕಿಳಿದಿದ್ದಾರೆ.
ಮಾನ್ವಿ ವಿಧಾನಸಭಾ ಕ್ಷೇತ್ರ
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ 14 ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿವರೆಗೂ ಬಿಜೆಪಿ ಗೆದ್ದಿರುವ ಇತಿಹಾಸವೇ ಇಲ್ಲ. ಈ ಬಾರಿ ಕಾಂಗ್ರೆಸ್ ಮಾಜಿ ಸಂಸದ, ಡಿಸಿಸಿ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಖಾತೆ ತೆರೆಯುವ ತಂತ್ರ ರೂಪಿಸಿದೆ.
ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಹಂಪಯ್ಯ ನಾಯಕ ಸಹ ಪೈಪೋಟಿ ನೀಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ನೇ ಸ್ಥಾನ ಗಳಿಸಿದ್ದ ಡಾ.ಪ್ರೀತಿ ಮೇತ್ರೆ ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಆದರೆ ಕೊನೆಗೆ ಸಂಧಾನ ಮಾಡಿದ ಫಲವಾಗಿ ಪ್ರೀತಿ ಅವರು ಕಣದಿಂದ ಹಿಂದೆ ಸರಿದಿದ್ದು, ಇದರಿಂದ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ. ಹೀಗೆ ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರ
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿರುವ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರಿಗೆ ಮಹಿಳೆಯರೇ ಎದುರಾಳಿಗಳಾಗಿರುವುದು ಈ ಬಾರಿಯ ವಿಶೇಷವಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರ 15 ವರ್ಷಗಳಲ್ಲಿ 2 ಸಾರ್ವತ್ರಿಕ ಚುನಾವಣೆ ಹಾಗೂ 2 ಉಪ ಚುನಾವಣೆಗಳನ್ನು ಕಂಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶ್ರೀದೇವಿ ನಾಯಕ ಹಾಗೂ ಜೆಡಿಎಸ್‌ನಿಂದ ಕರೆಮ್ಮ ನಾಯಕ ಹಾಗೂ ಪಕ್ಷೇತರ ಅಭ್ಯರ್ಥಿ ರೂಪಾ ನಾಯಕ ಸ್ಪರ್ಧಯಲ್ಲಿದ್ದಾರೆ. ಕರೆಮ್ಮ ಹೊರತುಪಡಿಸಿ ಶಿವನಗೌಡನಾಯಕ, ಶ್ರೀದೇವಿ ನಾಯಕ ಮತ್ತು ರೂಪಾ ನಾಯಕ ಸಂಬಂಧಿಕರಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ. ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿ ಇದೆ. ಕಾಂಗ್ರೆಸ್‌ನ ಶ್ರೀದೇವಿ ನಾಯಕ ಸಹ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವುದರಿಂದ ಕದನ ಕುತೂಹಲ ಪಡೆದುಕೊಂಡಿದೆ.
ಲಿಂಗಸೂಗೂರು ವಿಧಾನಸಭಾ ಕ್ಷೇತ್ರ
ಇನ್ನು ಎಸ್‌ಟಿ ಮೀಸಲಿರುವ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್.ಹುಲಗೇರಿ, ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಹಾಗೂ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಕಾಂಗ್ರೆಸ್‌ಗೆ ಬಂಡಾಯದ ಆತಂಕ ಕಾಡುತ್ತಿದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿ ಕೊನೆಗೆ 3ನೇ ಪಟ್ಟಿಯಲ್ಲಿ ಹಾಲಿ ಶಾಸಕ ಡಿ.ಎಸ್.ಹುಲಗೇರಿ ಅವರಿಗೆ ಟಿಕೆಟ್ ಘೋಷಿಸಿತು.
ಕಾಂಗ್ರೆಸ್ ಟಿಕೆಟ್ ವಂಚಿತ ಆರ್.ರುದ್ರಯ್ಯ ಅವರು ಬಂಡಾಯವೆದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. 2 ನೇ ಬಾರಿ ಶಾಸಕರಾಗಲು ಡಿ.ಎಸ್.ಹುಲಗೇರಿ ರಣತಂತ್ರ ರೂಪಿಸಿದ್ದು, ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವ ಸಿದ್ದು ಬಂಡಿ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಮುಂದಾಗಿದ್ದರೆ. ಈ ಮೂಲಕ ಅದರಲ್ಲಿ ಗೆದ್ದು ಶಾಸಕರಾಗಬೇಕೆನ್ನುವ ಹಂಬಲದಲ್ಲಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್‌ನಿಂದ 2 ಬಾರಿ ಶಾಸಕರಾಗಿರುವ ಮಾನಪ್ಪ ವಜ್ಜಲ್ 3ನೇ ಬಾರಿ ಶಾಸಕರಾಗಲು ಪ್ರಯತ್ನ ನಡೆಸಿದ್ದಾರೆ. ಒಟ್ಟಾರೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು 7 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಸಿಂಧನೂರು ವಿಧಾನಸಭಾ ಕ್ಷೇತ್ರ
ಸಾಮಾನ್ಯ ವರ್ಗಕ್ಕೆ ಮೀಸಲಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಗೆಲುವು ಕಾಣದ ಇರುವ ಬಿಜೆಪಿ ಸಾಹಸಕ್ಕೆ ಕೈ ಹಾಕಿದೆ. 4 ಬಾರಿ ಶಾಸಕರಾದ ಕಾಂಗ್ರಸ್‌ನ ಹಂಪನಗೌಡ ಬಾದರ್ಲಿ, 2 ಬಾರಿ ಶಾಸಕರಾಗಿ ಸಚಿವರಾಗಿದ್ದ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಅವರ ವಿರುದ್ಧ ಬಿಜೆಪಿಯಿಂದ ಕೆ.ಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಸಿಂಧನೂರುನಲ್ಲಿ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಪಕ್ಷಗಳೇ ಗೆಲ್ಲುತ್ತಾ ಬರುತ್ತಿದ್ದು, ಕಳೆದ ಬಾರಿ ವೆಂಕಟರಾವ್ ನಾಡಗೌಡ ಅವರು ಹಂಪನಗೌಡ ಬಾದರ್ಲಿ ಅವರನ್ನು ಸೋಲಿಸಿದ್ದರು. ಜೆಡಿಎಸ್‌ನಿಂದ ಹಾಲಿ ಶಾಸಕ ವೆಂಕಟರಾವ್ ನಾಡಗೌಡ, ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ ಹಾಗೂ ಬಿಜೆಪಿಯಿಂದ ಕೆ.ಪರಿಯಪ್ಪ ಅವರ ಸ್ಪರ್ಧೆ ಕ್ಷೇತ್ರದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದ್ದು, ಇದರಿಂದಾಗಿ ಜಾತಿ ಆಧಾರಿತ ಲೆಕ್ಕಾಚಾರ ಜೋರಾಗಿದೆ.
ಇಲ್ಲಿ ಜನಾರ್ದನರೆಡ್ಡಿ ಪ್ರಭಾವ ಹೆಚ್ಚಾಗಿರುವುದರಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆಸಿರುವ ಮಲ್ಲಿಕಾರ್ಜುನ ನೆಕ್ಕಂಟಿ ಅವರು 3 ಪಕ್ಷಗಳ ಸ್ವಲ್ಪ ಮತಗಳನ್ನು ಕಬಳಿಸುವ ಸಾಧ್ಯತೆ ಇದೆ. ಕೊನೆಗೆ ತ್ರಿಕೋನ ಸ್ಪರ್ಧೆಯಲ್ಲಿ ಮತದಾರ ಪ್ರಭುಗಳು ಯಾರಿಗೆ ಮಳೆ ಹಾಕುತ್ತಾರೆಯೋ ಅನ್ನುವುದನ್ನು ಕಾದು ನೋಡಬೇಕಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರ
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಎರಡೂವರೆ ವರ್ಷಗಳ ಹಿಂದೆ ಉಪಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ನ ಆರ್.ಬಸನಗೌಡ ತುರ್ವಿಹಾಳ ಮತ್ತು ಬಿಜೆಪಿಯ ಪ್ರತಾಪಗೌಡ ಪಾಟೀಲ್ ನಡುವೆ ಕದನ ಸಿದ್ಧಗೊಂಡಿದೆ. ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದ ಪ್ರತಾಪಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಹೋಗಿ ಉಪ ಚುನಾವಣೆಯಲ್ಲಿ ಅದೇ ಆರ್.ಬಸನಗೌಡ ತುರ್ವಿಹಾಳ್ ವಿರುದ್ಧ ಪರಾಭವಗೊಂಡಿದ್ದರು.
ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಬಸನಗೌಡ ತುರ್ವಿಹಾಳ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಸೋಲಿನಿಂದ ಅನುಭವ ಪಡೆದುಕೊಂಡಿರುವ ಪ್ರತಾಪಗೌಡ ಪಾಟೀಲ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ 4 ನೇ ಬಾರಿ ಶಾಸಕ ಸ್ಥಾನಕ್ಕೇರಲು ಪ್ರಯತ್ನ ನಡೆಸಿದ್ದಾರೆ.
ಹಾಗೆಯೆ ಜೆಡಿಎಸ್‌ನಿಂದ ರಾಘವೇಂದ್ರ ನಾಯಕ ಸೇರಿ ಒಟ್ಟು 7 ಅಭ್ಯರ್ಥಿಗಳು ಸ್ಪರ್ಧೆಗಳಿದಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಕೊನೆಗೆ ಮತದಾರ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.











Click it and Unblock the Notifications