Karnataka Budget 2023: ರಾಯಚೂರು ಜನತೆಯ ಪಾಲಿಗೆ ನಿರಾಶಾದಾಯಕ ಬಜೆಟ್
ಶುಕ್ರವಾರ (ಫೆಬ್ರವರಿ 17) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದಾರೆ. ರಾಯಚೂರು ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಯಚೂರು ಫೆಬ್ರವರಿ 18: ಈ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ, 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಗೆ ಹೊಸ ಯೋಜನೆಗಳನ್ನು ಘೋಷಿಸಬಹುದು ಅಥವಾ ಈಗಾಗಲೇ ಘೋಷಿಸಿದ ಯೋಜನೆಗಳಿಗೆ ಅನುದಾನವಾದರೂ ಮೀಸಲಿಡಬಹುದು ಎಂದು ನಿರೀಕ್ಷಿಸಿದ್ದ ಜನರು ಸಂಪೂರ್ಣ ನಿರಾಸೆಗೀಡಾಗಿದ್ದಾರೆ.
281 ದಿನಗಳಿಂದ ನಡೆದ ಏಮ್ಸ್ ಬೇಡಿಕೆ ಹೋರಾಟಕ್ಕೆ ಬಜೆಟ್‌ನಲ್ಲಿ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಬೇಡಿಕೆಗೂ ಸ್ಪಂದಿಸಿಲ್ಲ. ಬದಲಾಗಿ ಏಮ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದ ಬಗ್ಗೆ ಸರ್ಕಾರ ಘೋಷಿಸಿದೆ. ಐಐಐಟಿ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೂ ದೊರೆತಿಲ್ಲ. ಈ ಹಿಂದೆಯೆ ಘೋಷಿಸಿದ್ದ ಯೋಜನೆಗಳನ್ನು ಮತ್ತೆ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು ಸ್ಥಾಪಿಸಲಾಗುವುದು ಎಂದು ಮತ್ತೆ ಘೋಷಿಸಲಾಗಿದೆ. ಜಿಲ್ಲೆಯ ಪಾಲಿಗೆ ಇದು ನಿರಾಶಾದಾಯಕ ಬಜೆಟ್ ಎಂದು ವ್ಯಾಪಕವಾಗಿ ಜನರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಸಿಗಡಿಮೀನುಗಾರಿಕೆ ಕ್ಲಸ್ಟರ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದು, ಅನುದಾನದ ಪ್ರಸ್ತಾಪವಿಲ್ಲ. ರಾಯಚೂರು ನಗರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರಗಳಲ್ಲಿ ಈಗಾಗಲೇ ಕೆರೆ ತುಂಬಿಸುವ ಯೋಜನೆಗಳಿಗೆ ಅನುದಾನ ಒದಗಿಸಿದ್ದು ಕೊಳವೆ ಅಳವಡಿಸುವುದು ಪ್ರಗತಿಯಲ್ಲಿದ್ದು, ಈ ವರ್ಷ ನೀರು ತುಂಬಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಪೂರ್ಣಪ್ರಮಾಣದಲ್ಲಿ ಏಮ್ಸ್ ಸ್ಥಾಪಿಸಬೇಕು ಎನ್ನುವುದು ಹೋರಾಟಗಾರರ ಬೇಡಿಕೆ. ಈ ಘೋಷಣೆಯಿಂದಾಗಿ ಹೋರಾಟವು ಮತ್ತಷ್ಟು ಚುರುಕುಗೊಂಡಿದೆ.

ರಾಯಚೂರು-ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಯಿಂದ ಹೊರಗುಳಿದ 14 ರಿಂದ 18 ವರ್ಷದ ಬಾಲಕಿಯರಿಗೆ ಪೂರಕ ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ವಾಸ್ತವದಲ್ಲಿ ಯೋಜನೆ ಈಗಾಗಲೇ ಅನುಷ್ಠಾನ ಹಂತದಲ್ಲಿದೆ. ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಪರಿವರ್ತಿಸಲು ಮಾನದಂಡಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ. ಬಜೆಟ್‌ನಲ್ಲಿ ನೂತನ ಮಹಾನಗರ ಪಾಲಿಕೆ ಎಂದು ಘೋಷಿಸಿದ್ದರೆ ಜನರು ಸಂಭ್ರಮ ಪಡುತ್ತಿದ್ದರು. ಪರಿಶೀಲನೆಯು ಕಳೆದ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ.
ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿರುವುದು ಅಚ್ಚರಿ ಮೂಡಿಸಿದೆ. ಇರುವುದನ್ನು ಮತ್ತೆ ಹೇಳುವುದಕ್ಕಿಂತ ಇಲ್ಲದಿರುವ ಯೋಜನೆಗಳನ್ನು ಜಿಲ್ಲೆಗೆ ನೀಡಬೇಕಿತ್ತು ಎಂಬುದು ಜನರ ಅನಿಸಿಕೆ.
ರಾಯಚೂರು ತಾಲೂಕಿನ ಸಿಂಗನೋಡಿ ಮಾರ್ಗದಲ್ಲಿ ಕೆಎಸ್ಎಸ್ಐಡಿಸಿಯಿಂದ ಕೈಗಾರಿಕಾ ವಲಯ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸಂಬಂಧಿಸಿದ ರೈತರಿಗೆ ನೋಟಿಸ್ ಕೂಡಾ ಜಾರಿಯಾಗಿದೆ. ಆದರೂ ಬಜೆಟ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಯಚೂರಿನಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ರಾಜ್ಯದಿಂದ ಜವಳಿ ಪಾರ್ಕ್ ಸ್ಥಾಪನೆಗೆ ಈಗಾಗಲೇ ಕ್ರಮ ವಹಿಸಲಾಗಿದೆ.
ರಾಯಚೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಕೇಂದ್ರ (ಟೆಸ್ಟಿಂಗ್ ಟ್ರ್ಯಾಕ್) ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ರಾಯಚೂರಿನ ಸಿದ್ರಾಂಪುರ ಮಾರ್ಗದಲ್ಲಿ ಈಗಾಗಲೇ ಟೆಸ್ಟಿಂಗ್ ಟ್ರ್ಯಾಕ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ. ಒಟ್ಟಾರೆ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಿಸದಿರುವುದು, ಪ್ರತ್ಯೇಕ ಅನುದಾನ ನೀಡದಿರುವುದು ಸ್ಪಷ್ಟವಾಗಿದೆ.
ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಕೇಂದ್ರದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದನ್ನೇ ರಾಜ್ಯ ಬಜೆಟ್‌ನಲ್ಲಿ ಮರು ಉಲ್ಲೇಖಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ತನ್ನ ಪಾಲಿನ ಬಜೆಟ್ ಘೋಷಿಸಿಲ್ಲ ಎನ್ನುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications