ಬಿಸಿಲನಾಡಿಗೆ ಕರುಣೆ ತೋರಿದ ವರುಣ: ಕೃಷಿ ಚಟುವಟಿಕೆ ಚುರುಕು, ರೈತರಲ್ಲಿ ಸಂಭ್ರಮ
ರಾಯಚೂರು, ಜುಲೈ 24: ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಜಿನುಗು ಮಳೆ ನಿರಂತರ ಬಿಟ್ಟು ಬಿಡದೆ ಸುರಿಯುತ್ತಿದ್ದು, ರೈತರ ವಲಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ ವಾಡಿಕೆಯಂತೆ ಮಳೆಯಾಗದೆ ಇದ್ದ ಕಾರಣ ಬಿತ್ತನೆ ಯಾಗಿರಲಿಲ್ಲ. ಅಲ್ಪಸ್ವಲ್ಪ ಬಿತ್ತಿದ ಬೆಳೆಗಳು ಒಣಗುವ ಸ್ಥಿತಿಗೆ ಬಂದಿದ್ದವು. ಇಡೀ ಜಿಲ್ಲೆಯಲ್ಲಿ ಮಳೆ ಬೀಳದೇ ಇದ್ದರಿಂದ ಭೂಮಿ ಬಾಯ್ದೆರೆದಿತ್ತು .
ಕುಡಿವ ನೀರಿಗೂ ಹಾಹಾಕಾರ ಉಂಟಾಗಿತ್ತು. ಇಂತಹ ಹೊತ್ತಿನಲ್ಲಿ ಕಳೆದ ಮೂನ್ಕಾಲ್ಕು ಜಿಲ್ಲೆಯಲ್ಲಿ ದಿನಗಳಿಂದ ನಿರಂತರ ಮಳೆ ಸುರಿದಿದೆ. ಭೂಮಿ ಹಸಿಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯಲ್ಲಿ ಜೋರು ಮಳೆ ಬಾರದೆ ಇದ್ದರೂ ಜಿನುಗು ಮಳೆ ಸುರಿಯುತ್ತಿರುವುದು ಭೂಮಿ ತೇವಗೊಳ್ಳುತ್ತಿದೆ. ಇನ್ನೂ ಮಳೆಯ ಪ್ರಮಾಣ ಹೆಚ್ಚಾದರೆ ಬಿತ್ತನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಉತ್ತಮ ಮಳೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜೂನ್ 1 ರಿಂದ 30 ರವರೆಗೆ 86 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 47 ಮಿ.ಮೀ.ಮಳೆ ಯಾಗಿದೆ. ಜುಲೈ 1 ರಿಂದ 20 ರವರೆಗೆ 53 ಮಿ.ಮೀ.ಮಳೆಯಾಗಬೇಕಿತ್ತು. ಆದರೆ 55 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಜು.27 ರವರೆಗೆ ಉತ್ತಮ ಮಳೆಯಾಗಲಿದ್ದು, ರೈತರ ಬಿತ್ತನೆ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆ ಮೂಲಗಳು ಖಚಿತಪಡಿಸಿವೆ.
ಮಳೆ ಬಿದ್ದ ಜಿಲ್ಲೆಯ ಎಳು ತಾಲೂಕಿನ ಗ್ರಾಮಗಳಲ್ಲಿ ರೈತರು ಬಿತ್ತಲು ಭೂಮಿ ಉಳುಮೆ ಮಾಡುವಲ್ಲಿ ತೊಡಗಿದ್ದಾರೆ. ಟ್ರ್ಯಾಕ್ಟರ್ ಹಾಗೂ ಎತ್ತುಗಳ ಬೇಸಾಯ ಜೋರಾಗಿ ಸಾಗಿದೆ. ಜೋಳ , ಸಜ್ಜೆ , ಭತ್ತ , ತೊಗರಿ , ಹತ್ತಿ ಬೆಳೆ ಬಿತ್ತನೆ ಕಾರ್ಯ ಶುರುವಾಗಿದೆ. ಸಿಂಧನೂರು, ಮಾನ್ವಿ , ಸಿರವಾರ ಹಾಗೂ ರಾಯಚೂರು ಸೇರಿ ಇತರೆ ಕಡೆ ಭತ್ತದ ಸಸಿ ನಾಟಿ ಮಾಡುತ್ತಿರುವುದು ಕಂಡು ಬಂದಿದೆ.
ಜಿಲ್ಲೆಯಲ್ಲಿ ಏಕದಳ ಧಾನ್ಯದ ಬೀಜಗಳನ್ನು 2,32,252 ಹೆಕ್ಟೇರ್ ಗುರಿಯ ಬಿತ್ತನೆ ಪೈಕಿ 2,4,114 ಹೆಕ್ಟೇರ್ ಗಳಲ್ಲಿ ಬಿತ್ತನೆ ಯಾಗಿದೆ. ದ್ವಿದಳ ಧಾನ್ಯಗಳಲ್ಲಿ 14,6,093 ಹೆಕ್ಟೇರ್ ಪೈಕಿ 3,5,644 ಹೆಕ್ಟೇರ್ ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗಳಲ್ಲಿ 9,278 ಹೆಕ್ಟೇರ್ ಗುರಿಯ ಪೈಕಿ 7,6,199 ಹೆಕ್ಟೇರ್ ಬಿತ್ತನೆಯಾಗಿದ್ದು ಒಟ್ಟು 71,9,260 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿದೆ. ಮುಂಗಾರು ಮುಗಿಯುವುದರೊಳಗೆ ಉಳಿದ ಕೃಷಿ ಭೂಮಿಯನ್ನು ಬಿತ್ತನೆ ಮಾಡುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಆಗಾಗ ಜಿಟಿಜಿಟಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ. ಮಳೆಯ ಅಡಚಣೆ ಹಾಗೂ ತಂಪಾದ ವಾತಾವರಣಕ್ಕೆ ಚಿಕ್ಕ ಮಕ್ಕಳು, ವಯಸ್ಸಾದವರು ಶೀತ, ಕೆಮ್ಮು , ಜ್ವರದಿಂದ ನೆರಳುವಂತಾಗಿದೆ.
ಇನ್ನು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನತೆ ತೊಂದರೆ ಪಡುವಂತಾಗಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಿರುವ ಸಿದ್ಧಾರೂಡ ನಗರ, ಭಜಂತ್ರಿ ಓಣಿ, ಅಬ್ದುಲ್ ಕಾಲೋನಿ , ರಾಮರಹೀಮ್ ಕಾಲೋನಿ ಸೇರಿದಂತೆ ಇತರ ಕಡೆ ಮಳೆ ನೀರು ನಿಂತು ರಸ್ತೆಗಳು ಕೆಸರುಯುಕ್ತವಾಗಿದ್ದು, ಜನತೆ ಪ್ರಯಾಸ ಪಟ್ಟು ಸಂಚರಿಸುವಂತಾಗಿದೆ.
ಜಿಟಿ ಜಿಟಿ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಬಿತ್ತನೆ ಮಾಡಿದ ಹಾಗೂ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಉತ್ತಮ ಮಳೆಗಾಗಿ ಎದುರು ನೋಡುತ್ತಿದ್ದರು. 'ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿದೆ. ರೈತರಲ್ಲಿಯೂ ಆಶಾವಾದ ಹೆಚ್ಚಿದೆ. ಈ ಬಾರಿ ಉತ್ತಮವಾಗಿ ಬಿತ್ತನೆಯಾಗುವ ಸಾಧ್ಯತೆ ಇದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಯಾವುದೇ ಸಮಸ್ಯೆ ಇಲ್ಲದೆ ನೀಡಲು ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಹೇಳಿದರು.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿನುಗು ಮಳೆಯಿಂದ ರೈತರಲ್ಲಿ ಉತ್ಸಾಹ ಹೆಚ್ಚಿದೆ. ಬಿತ್ತನೆ ಬೀಜ , ರಸಗೊಬ್ಬರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಗಾರು ಪೂರ್ಣಗೊಳ್ಳುವ ಮುನ್ನವೇ ಬಿತ್ತನೆ ಕಾರ್ಯ ಮುಗಿಯುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್. ದೇವಿಕಾ ಹೇಳಿದ್ದಾರೆ.












Click it and Unblock the Notifications