ಬರಪೀಡಿತ ಪ್ರದೇಶ ಪಟ್ಟಿಯಿಂದ ಸಿಂಧನೂರು ಕೈಬಿಟ್ಟ ಸರ್ಕಾರ: ರೈತರ ಆಕ್ರೋಶ
ರಾಯಚೂರು, ಸೆಪ್ಟೆಂಬರ್ 19: ಮಳೆ ಕೊರತೆಯಿಂದಾಗಿ ಬೆಳೆ ನಷ್ಟದ ಭೀತಿ ಎದುರಾದ ಬೆನ್ನಲ್ಲೇ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ 7 ತಾಲೂಕುಗಳ ಪೈಕಿ ನಾಲ್ಕು ತೀವ್ರ ಬರ ಪೀಡಿತ ಹಾಗೂ 2 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಣೆ ಮಾಡಿದ್ದು, ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು, ರಾಯಚೂರು, ಸಿರವಾರ ಹಾಗೂ ಮಾನ್ವಿ ತಾಲೂಕನ್ನು ತೀವ್ರ ಬರ ಪೀಡಿತ ಹಾಗೂ ದೇವದುರ್ಗ ಹಾಗೂ ಮಸ್ಕಿ ತಾಲೂಕನ್ನು ಸಾಧಾರಣ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿಂಧನೂರು ತಾಲೂಕನ್ನು ಎರಡೂ ಪಟ್ಟಿಯಿಂದ ಕೈ ಬಿಡಲಾಗಿದೆ. ಸರ್ಕಾರದ ಈ ನಿಲುವಿಗೆ ಸಿಂಧನೂರಿನ ಅನೇಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹತ್ತಿ,ತೊಗರಿ ಹಾಗೂ ಭತ್ತ ಹೆಚ್ಚಾಗಿ ಬೆಳೆಯಲಾಗಿದ್ದು ಸರಿಯಾದ ಪ್ರಮಾಣದಲ್ಲಿ ಮಳೆ ಬಾರದ ಕಾರಣ ರೈತರು ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿಯಾಗಿ ಸಮೀಕ್ಷೆ, ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿ ನೀಡಿರುವ ವರದಿಯ ಆಧಾರದ ಮೇಲೆ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಶೇ 29 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ ಎಂದು ಮಾಹಿತಿ ಸಂಗ್ರಹಿಸಲಾಗಿದೆ. ರೈತರು ಸ್ವಯಂ ಪ್ರೇರಿತರಾಗಿ ಆ್ಯಪ್ ಮೂಲಕ ಬೆಳೆಯ ಮಾಹಿತಿ ನೀಡಿದ್ದಾರೆ. ಇನ್ನುಳಿದಂತೆ ಪ್ರತಿ ತಾಲ್ಲೂಕಿನ ಆಯ್ದ 135 ಜನರ ಆಯ್ದ ಬೆಳೆಗಳ ಮಾಹಿತಿ ಸಂಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿತ ಬರಪೀಡಿತ ಪ್ರದೇಶಗಳಲ್ಲಿ ತಾಲ್ಲೂಕು ಬೆಳೆ ನಷ್ಟದ ಅನುಗುಣವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣೆ (ಎಸ್‌ಡಿಆರ್ ಎಫ್) ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸಿಂಧನೂರು ತಾಲ್ಲೂಕು ನೀರಾವರಿ ಪ್ರದೇಶ ಹೊಂದಿದರೂ ಕೆಳಭಾಗದ ರೈತರ ಬೆಳೆಗಳಿಗೆ ಸರಿಯಾಗಿ ನೀರು ತಲುಪಿಲ್ಲ. ಮಳೆಯ ಕೊರತೆಯಿಂದಾಗಿ ಭತ್ತ ಬೆಳೆದೆ ರೈತರು ನಷ್ಟಕ್ಕೆ ಈಡಾಗಿದ್ದಾರೆ. ಬರ ಪೀಡಿತ ಘೋಷಣೆಗೆ ಎನ್‌ಡಿಆರ್‌ಎಫ್ ಮಾನದಂಡಗಳು ಅವೈಜ್ಞಾನಿಕವಾಗಿದೆ. ಒಣ ಭೂಮಿಯ ಸ್ಥಿತಿ ಗಮನಿಸದೇ ಬರಪೀಡಿತ ತೀರ್ಮಾನ ಮಾಡಲಾಗಿದೆ. ಈ ಮಾನದಂಡಗಳು ಬದಲಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದ್ದಾರೆ.
ಸಿಂಧನೂರಿನಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆದಿದ್ದು ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಮೇಲ್ಭಾಗದಲ್ಲಿ ಅಕ್ರಮ ನಡೆಯುತ್ತಿರುವ (ನೀರು ದುರ್ಬಳಕೆ) ಕಾರಣ ಕೆಳ ಭಾಗದ ರೈತರಿಗೆ ಸರಿಯಾಗಿ ನೀರು ತಲುಪಿಲ್ಲ. ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾದ ಕಾರಣ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೇ ಸಮಸ್ಯೆಯಾಗಿದೆ.
ಸರ್ಕಾರ ಬರಪೀಡಿತ ಪ್ರದೇಶ ಪಟ್ಟಿಯಿಂದ ಸಿಂಧನೂರು ತಾಲ್ಲೂಕಿನ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ಬೆಳೆ ಸಮೀಕ್ಷೆ ಮಾಡುವಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಸರ್ಕಾರ ನಿರ್ಲಕ್ಷ್ಯ ಮಾಡಿದೆ' ಎಂದು ಕೆಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications