ರಾಯಚೂರು: ಕೃಷಿ ಮೇಳದಲ್ಲಿ ನೋಡುಗರನ್ನು ಸೆಳೆದ ಫಲಪುಷ್ಪ ಪ್ರದರ್ಶನ
ರಾಯಚೂರು ಜನವರಿ 11: ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ನಿಂತುಹೋಗಿದ್ದ ಕೃಷಿ ಮೇಳವು ಈ ವರ್ಷ ಆಯೋಜಿಸಲಾಗಿದ್ದು, ಮಂಗಳವಾರದಿಂದ ಆರಂಭವಾಗಿದೆ. ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಈ ಬಾರಿಯೂ ಫಲಪುಷ್ಪ ಪ್ರದರ್ಶನ ಮಾಡಿರುವುದು ಜನರನ್ನು ಸೆಳೆಯುತ್ತಿದೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುವುದಕ್ಕೆ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದರು.
ರೈತ ಕುಟುಂಬಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುತೂಹಲದಿಂದ ಪ್ರದರ್ಶನ ವೀಕ್ಷಿಸಿ, ಸೆಲ್ಫಿ ಮಾಡಿಕೊಳ್ಳುವುದು ಸಾಮಾನ್ಯ ನೋಟವಾಗಿದೆ. ಹೂವು-ಹಣ್ಣುಗಳ ಪ್ರದರ್ಶನದೊಂದಿಗೆ ಅವುಗಳ ಮಾಹಿತಿ ಫಲಕವನ್ನೂ ಅಳವಡಿಸಲಾಗಿದೆ.

ಆಕರ್ಷಿಣೀಯವಾದ ಗುಲಾಬಿ ಹೂಗಳ ಸ್ತಬ್ಧಚಿತ್ರ
ರಾಯಚೂರು ನಗರ ಮಧ್ಯದಲ್ಲಿರುವ ಐತಿಹಾಸಿಕ ಕಾಟೆ ದರ್ವಾಜ ಕೋಟೆ ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯಕ್ಕೊಳಗಾಗಿ ಹಾಳು ಬಿದ್ದಿದೆ. ಈ ಐತಿಹಾಸಿಕ ಕೋಟೆ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಅದರ ಮಾದರಿ ಸ್ತಬ್ಧಚಿತ್ರವನ್ನು ಗುಲಾಬಿ ಹೂವುಗಳಿಂದ ಮಾಡಲಾಗಿದ್ದು, ಚಿತ್ತಾಕರ್ಷಕವಾಗಿದೆ. ಪ್ರದರ್ಶನದ ಪ್ರವೇಶದ್ವಾರದಲ್ಲೇ ಕಲ್ಲಾನೆಗಳನ್ನು ಹೂವುಗಳಿಂದ ಸಿದ್ಧಪಡಿಸಿರುವುದು ಕೂಡಾ ವಿಶಿಷ್ಟವಾಗಿದೆ. ತರಹೇವಾರಿ ವರ್ಣಮಯ ಹೂವುಗಳನ್ನು ನೋಡುವುದು ಕಣ್ಣಿಗೆ ಹಬ್ಬದಂತಿದೆ.

ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ
ವಿವಿಧ ಬಣ್ಣಗಳ ಗುಲಾಬಿ ಹೂವಿನ ಸಸಿಗಳು, ಅಲಂಕಾರಿ ಹೂವುಗಳು, ಹಣ್ಣುಗಳು ಮತ್ತು ಅವುಗಳನ್ನು ಬೆಳೆದಿರುವ ರೈತರ ಹೆಸರು ಅಂಟಿಸಲಾಗಿದೆ. ರಾಯಚೂರು ಜಿಲ್ಲೆ ಯಲ್ಲಿ ಪ್ರಗತಿಪರ ರೈತರು ಬೆಳೆದಿರುವ ಹಸಿರು ಮೆಣಸಿನಕಾಯಿ, ಜಾಫಲ ಹಣ್ಣು, ಲಿಂಬೆ, ದ್ರಾಕ್ಷಿ, ತಾಳೆ, ಬಾಳೆ ಹಣ್ಣು, ಬಾರಿಹಣ್ಣು. ಹೀಗೆ ಅನೇಕ ಹಣ್ಣುಗಳು ಪ್ರದರ್ಶನದಲ್ಲಿವೆ. ಒಂದು ಮೂಲಂಗಿ ಒಂದು ಕೆಜಿ ತೂಕವಿದೆ. ಲಿಂಗಸುಗೂರಿನಲ್ಲಿ ರೈತರು ಬೆಳೆಯುವ ದಾಳಿಂಬೆ ಹಣ್ಣುಗಳು ಕಣ್ಣು ಕೊರೈಸುವಂತಿದ್ದು, ರಫ್ತು ಗುಣಮಟ್ಟದ್ದಾಗಿವೆ. ಇದರ ಜೊತೆಗೆ ಬೆಳೆ
ಬೆಳೆದ ರೈತರ ಮಾಹಿತಿ, ಸಂಪರ್ಕ ಸಂಖ್ಯೆಯೂ ಸಹ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಈ ಪ್ರದರ್ಶನದಿಂದ ಅನುಕೂಲವಾಗಿದೆ
ಪ್ರದರ್ಶನ ವೀಕ್ಷಿಸಿದ ಕಾಲೇಜು ವಿದ್ಯಾರ್ಥಿನಿ ಅಂಜು ಮಾತನಾಡಿ" ರಾಯಚೂರು ಜಿಲ್ಲೆಯಲ್ಲಿಯೂ ಇಷ್ಟೊಂದು ಬಗೆಯ ಹೂವು-ಹಣ್ಣು ಬೆಳೆಯುತ್ತಾರೆ ಎನ್ನುವುದು ಈ ಪ್ರದರ್ಶನ ನೋಡಿದ ಮೇಲೆ ಗೊತ್ತಾಗಿದೆ. ಕಾಟೆ ದರ್ವಾಜದಂತಹ ಐತಿಹಾಸಿಕ ಕೋಟೆ ಜನರು ಮರೆತಿದ್ದು, ಈ ಮೇಳದಲ್ಲಿ ಅದನ್ನು ನೆನಪಿಸುವ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ' ಎಂದರು.
ರಾಯಚೂರಿನ ರೈತ ಅಯ್ಯಪ್ಪ ಮಾತನಾಡಿ, "ಫಲ-ಪುಷ್ಪ ಪ್ರದರ್ಶನ ಮಾಡಿರುವುದನ್ನು ನೋಡಿ ಬಹಳ ಖುಷಿಯಾಗಿದೆ. ಎಷ್ಟೊಂದು ಮಾಹಿತಿ ಇದರಲ್ಲಿದೆ. ನೋಡುವುದಕ್ಕೆ, ತಿಳಿದುಕೊಳ್ಳುವುದಕ್ಕೆ ಬಹಳಷ್ಟಿದೆ. ರೈತರಿಗೆ ಈ ಪ್ರದರ್ಶನದಿಂದ ಅನುಕೂಲವಾಗಿದೆ" ಎಂದು ತಿಳಿಸಿದರು.

ತೋಟಗಾರಿಕೆ ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯಬೇಕು
"ಬರೀ ಹೂವು-ಹಣ್ಣುಗಳನ್ನು ರಾಶಿ ಹಾಕುವುದರಿಂದ ಜನರು ನೋಡುವುದಿಲ್ಲ. ಕಲೆ ಮಾಧ್ಯಮದ ಮೂಲಕ ಹೂವು-ಹಣ್ಣುಗಳನ್ನು ಅಲಂಕಾರ ಮಾಡಿಸಲಾಗಿದೆ. ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ ಅವರಂಥ ಮಹನೀಯರ ಚಿತ್ರಗಳನ್ನು ಕಲ್ಲಂಗಡಿ ಮೇಲೆ ಬಿಡಿಸಲಾಗಿದೆ. ಒಟ್ಟಾರೆ ಹೂವು-ಹಣ್ಣು ಬೆಳೆಯುವುದರಿಂದ ಲಾಭವಿದೆ ಎನ್ನುವುದು ರೈತರಿಗೆ ಮನವರಿಕೆ ಆಗಬೇಕು. ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆಯಬೇಕು ಎನ್ನುವುದು ನಮ್ಮ ಆಶಯ" ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮೊಹಮ್ಮದ್ ಅಲಿ ತಿಳಿಸಿದರು.
ಕೃಷಿ ಮೇಳ ನೋಡು ವುದಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಜನವರಿ 12 ರವರೆಗೂ ಮೇಳ ನಡೆಯಲಿದ್ದು, ಅದರಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಸಹ ಕಣ್ತುಂಬಿಕೊಳ್ಳಬಹುದು.












Click it and Unblock the Notifications