ಭಾರತಮಾಲಾ ಯೋಜನೆ ಅಡಿಯಲ್ಲಿ ಚತುಷ್ಪಥ, ಷಟ್ಪಥ ಹೆದ್ದಾರಿ ಅಭಿವೃದ್ಧಿ
ರಾಯಚೂರು ಡಿಸೆಂಬರ್ 9: ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆ ಅಡಿಯಲ್ಲಿ ರಾಯಚೂರು ನಗರದ ಹೊರ ವಲಯದಲ್ಲಿ ಚತುಷ್ಪಥ ಹಾಗೂ ಷಟ್ಪಥ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದು, ಈ ಮೂಲಕ ಜಿಲ್ಲೆಯ ಅಭಿವೃದ್ಧಿಯು ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ.
ರಾಯಚೂರಿನಿಂದ ಈ ಹೆದ್ದಾರಿಗಳ ಮೂಲಕ ಹೈದರಾಬಾದ್, ಚೆನ್ನೈ, ಮುಂಬೈ, ಸೋಲ್ಲಾಪುರ, ಪುಣೆ ಸೇರಿದಂತೆ ಪ್ರಮುಖ ನಗರಗಳನ್ನು ಕಡಿಮೆ ಅವಧಿಯಲ್ಲಿ ತಲುಪಲು ಸಾಧ್ಯವಾಗಲಿದೆ. ಮುಖ್ಯವಾಗಿ ಸರಕು ಸಾಗಣೆ ಮತ್ತು ಸರಕು ತರಿಸಿಕೊಳ್ಳುವುದು ಸರಳ ವಾಗಲಿದೆ. ಯಾವುದೇ ಅಡೆತಡೆಗಳಲ್ಲದೆ ವಾಹನಗಳು ವೇಗವಾಗಿ ಸಂಚರಿಸಲಿವೆ.

ಭಾರತ ಮಾಲಾ ಯೋಜನೆ ಅಡಿಯಲ್ಲಿ ಷಟ್ಪಥ ಹೆದ್ದಾರಿಗಳು
ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆ ಅಡಿಯಲ್ಲಿ ಚತುಷ್ಪಥ ಹಾಗೂ ಷಟ್ಪಥ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗುತ್ತಿದೆ. ಹೆದ್ದಾರಿ ಹಾದುಹೋಗುವ ಮಾರ್ಗದಲ್ಲಿರುವ ನಗರಗಳು ಮತ್ತು ಗ್ರಾಮಗಳಿಗೆ ಉಪಮಾರ್ಗಗಳು ಮತ್ತು ಮೇಲ್ಸೆತುವೆ ನಿರ್ಮಾಣ ಮಾಡಲಾಗುತ್ತಿದೆ. ಜನರ ಸಂಚಾರಕ್ಕೆ ಮತ್ತು ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ವಾಹನ ಸವಾರರು, ಹೆದ್ದಾರಿಯಿಂದ ಉಪಮಾರ್ಗಗಳಲ್ಲಿ ಸಂಚರಿಸಿ ಆಯಾ ಗ್ರಾಮಗಳು, ನಗರಗಳಿಗೆ ತಲುಪಬಹುದಾಗಿದೆ.

ತೆಲಂಗಾಣದ ನಂದಿನಿ ಗ್ರಾಮದತ್ತ ನೂತನ ಮಾರ್ಗ ನಿರ್ಮಾಣ
ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ಕಲಕೋಟ-ಕರ್ನೂಲ್ ಕಡೆಗೆ ಆರು ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಿ, ಈಗಾಗಲೇ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರ ಕಂಪನಿಯು ವಡ್ಲೂರು, ಕುಡ್ಲೂರು ಗ್ರಾಮಗಳ ಬಳಿ ಕೆಲಸ ಆರಂಭಿಸಿದೆ. ದೇವದುರ್ಗ ತಾಲೂಕಿನ ಬಸವಂತಪುರ ಮತ್ತು ರಾಯಚೂರು ತಾಲೂಕಿನ ಅರಿಷಿಣಗಿ ಬಳಿ ಕೃಷ್ಣಾ ನದಿ ನೂತನ ಸೇತುವೆ ಮೂಲಕ ಆರು ಪಥದ ಹೆದ್ದಾರಿ ಮಾರ್ಗ ಬರಲಿದೆ. ಅಲ್ಲಿಂದ ಹೆಗಸನಹಳ್ಳಿ, ಸಿಂಗನೋಡಿ ಮೂಲಕ ತೆಲಂಗಾಣದ ನಂದಿನಿ ಗ್ರಾಮದತ್ತ ನೂತನ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ಫೆಬ್ರವರಿ ನಂತರ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ಚುರುಕು
ಬೆಳಗಾವಿ-ಮಂತ್ರಾಲಯ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಈಗಾಗಲೇ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ. ಸದ್ಯ ದೇವಸುಗೂರಿನಿಂದ ಮಂತ್ರಾಲಯ 54 ಕಿಲೋ ಮೀಟರ್ ನಾಲ್ಕು ಪಥದ ಹೆದ್ದಾರಿ ಅಗತ್ಯ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಹಸಿರು ವಲಯದಲ್ಲೇ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ-167) ಸದ್ಯ 120 ಅಡಿ ಅಗಲವಿದ್ದು, ಇದನ್ನು 200 ಅಡಿಗಳಿಗೆ ವಿಸ್ತರಿಸಲಾಗುತ್ತಿದೆ. ಜಮೀನುಗಳಲ್ಲಿ ಹಿಂಗಾರು ಫಸಲು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಅಡ್ಡಿಯಾಗಿದ್ದು, ಫೆಬ್ರವರಿ ನಂತರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ವರ್ಷಗಳಲ್ಲಿ ಬೆಳಗಾವಿ–ಮಂತ್ರಾಲಯ ಹೆದ್ದಾರಿ ಸಂಪೂರ್ಣ
ಏಳುಮೈಲಿಯಿಂದ ದೇವಸುಗೂರಿನತ್ತ ಬೆಳಗಾವಿ-ಮಂತ್ರಾಲಯ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಸಾಗಲಿದೆ. ಈ ಮಾರ್ಗದಲ್ಲಿ ಸಮೀಕ್ಷೆ ಕೈಗೊಳ್ಳುವುದು ಇನ್ನೂ ಆರಂಭಿಕ ಹಂತದಲ್ಲೇ ಇದೆ. ಇವೆಲ್ಲ ಕಾಮಗಾರಿಗಳು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣವಾಗಲಿವೆ.
ರಾಯಚೂರು ಜಿಲ್ಲೆಯ ಜನರಿಗೆ ಸಾರಿಗೆ ವ್ಯವಸ್ಥೆ ಸುಗಮವಾಗಲಿದೆ. ಈ ಮೂಲಕ ಬೇರೆಬೇರೆ ನಗರಗಳಿಗೆ ಈ ಹೆದ್ದಾರಿಗಳಿಂದ ಜನವಸತಿಗಳಿಗೆ ವಾಹನಗಳಿಂದಾಗುತ್ತಿದ್ದ ತೊಂದರೆ ತಪ್ಪುತ್ತದೆ ಎಂದು ಕಾಡ್ಲೂರು ನಿವಾಸಿ ಜಯಕುಮಾರ್ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications