ಮಳೆ ಕೊರತೆಯಿಂದ ರಾಯಚರು ಜಿಲ್ಲೆಯಲ್ಲಿ ಕುರಿ, ಮೇಕೆಗಳಿಗೆ ಸಿಗುತ್ತಿಲ್ಲ ಮೇವು, ಆತಂಕದಲ್ಲಿ ಕುರಿಗಾಯಿಗಳು
ರಾಯಚೂರು ಆಗಟಸ್, 20: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡ್ಡಗಾಡು, ಪಾಳು ಜಮೀನು, ಗೋಮಾಳ ಸೇರಿದಂತೆ ಬಯಲು ಪ್ರದೇಶದಲ್ಲಿ ಸಮರ್ಪಕ ಕುಡಿಯಲು ನೀರು, ಮೇಯಲು ಮೇವು ಸಿಗದೆ ಹೋಗಿದ್ದರಿಂದ ಕುರಿ, ಮೇಕೆಗಳು ಪಟ್ಟಣದತ್ತ ಮುಖ ಮಾಡಿದ್ದು, ಬಡಾವಣೆಗಳಲ್ಲಿ ಹಸಿವು ನೀಗಿಸಿಕೊಳ್ಳಲು ಪರದಾಡುತ್ತಿವೆ.
ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೆ ಸುರಿಯದ ಹಿನ್ನೆಲೆ ಅಡವಿಗಳಲ್ಲಿ ನೀರಿನ ಸಂಗ್ರಹಣೆ ಕೊರತೆಯಾಗಿದೆ. ಅಲ್ಲದೆ ತಾಲೂಕಿನಾದ್ಯಂತ ರೈತರು ಜಮೀನುಗಳನ್ನು ಉಳುಮೆ ಮಾಡಿದ್ದರಿಂದ ಕುರಿ-ಮೇಕೆಗಳಿಗೆ ಮೇವು ಸಿಗುತ್ತಿಲ್ಲ. ಇನ್ನು ಕುರಿ ಸಾಕಣೆ ಮಾಡಿದ ಕುರಿಗಾಹಿಗಳು ಪಟ್ಟಣದ ವಿವಿಧ ಬಡಾವಣೆಗಳು, ಅಲ್ಲಲ್ಲಿ ಅಭಿವೃದ್ಧಿ ಹೊಂದಿರದ ನಿವೇಶನಗಳು ಹಾಗೂ ಗಿಡ ಮರಗಳ ಟೊಂಗೆ ಮುರಿದು ಮೇಯಿಸುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.

ಸುಡು ಬಿಸಿಲಿಗೆ ಒಣಗಿರುವ ಗುಡ್ಡಗಾಡು, ಗೋಮಾಳ, ಅರಣ್ಯ ಪ್ರದೇಶ ಸೇರಿದಂತೆ ಬಯಲು ಪ್ರದೇಶದಲ್ಲಿ ಹುಲ್ಲು ಮೇಯಲು ಸಿಗುತ್ತಿಲ್ಲ. ಕುರಿ, ಮೇಕೆ ಸೇರಿದಂತೆ ಜಾನುವಾರುಗಳಿಗೆ ಬಾಯಾರಿಕೆ ನೀಗಿಸಲು ಕುಡಿಯುವ ನೀರಿನ ಸಂಗ್ರಹಣೆ ಇಲ್ಲದೆ ಜಾನುವಾರು ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಪಟ್ಟಣದ ಬಡಾವಣೆ, ರಸ್ತೆ, ನಿವೇಶನಗಳಲ್ಲಿ ಅಷ್ಟಿಷ್ಟು ಬೆಳೆದ, ಬಿದ್ದ ಕಸಕಡ್ಡಿ ಮೇಯಿಸುತ್ತಿದ್ದೇವೆ ಎಂದು ಕುರಿಗಾಹಿಗಳು ಅಳಲು ತೋಡಿಕೊಂಡಿದ್ದಾರೆ.
"ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬಾರದೆ ಹೋಗಿದ್ದರಿಂದ ಕುರಿ ಸಂರಕ್ಷಣೆ ಸಾಧ್ಯವಾಗದೆ ಅವುಗಳನ್ನು ಮಾರಾಟ ಮಾಡುತ್ತಿದ್ದೇವೆ. ಅದನ್ನೇ ನಂಬಿ ಬದುಕುವ ನಮ್ಮಂಹತ ಕುಟುಂಬಸ್ಥರು ದಿನಕ್ಕೊಂದು ಬಡಾವಣೆ ಹುಡುಕುತ್ತಾ ಕೆರೆ ಕುಂಟಿಗಳತ್ತ ಸಾಗುತ್ತಿದ್ದೇವೆ. ದೇವರು ತರುವ ಕಷ್ಟಕ್ಕೆ ಏನು ಮಾಡದಂತಹ ದುಸ್ಥಿತಿಗೆ ಸಿಲುಕಿದ್ದೇವೆ" ಎಂದು ನಾಗರಾಜ ಯಲಗಲದಿನ್ನಿ, ಗ್ಯಾನಪ್ಪ ಹುಲಿಗುಡ್ಡ ತಮ್ಮ ಕಷ್ಟಗಳನ್ನು ಹಂಚಿಕೊಂಡರು.
"ಬಹುತೇಕ ಕುರಿಗಾಹಿಗಳು ನೀರಾವರಿ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಬಯಲು ಸೀಮೆ ಕುರಿಗಾಹಿಗಳು ಪಟ್ಟಣದತ್ತ ಮುಖ ಮಾಡಿದ್ದೇವೆ. ಅಲ್ಲಲ್ಲಿ ಗಿಡಮರಗಳ ತೊಪ್ಪಲು ಮುರಿದು ಮೇಯಿಸುತ್ತೇವೆ. ಕೆಲವೆಡೆ ನಿವೇಶನಗಳಲ್ಲಿನ ಕಸಕಡ್ಡಿ ಮೇವು ಮೇಯಿಸಿ ಸಮೀಪದ ಕೆರೆ ಕುಂಟಿಗಳಲ್ಲಿ ನೀರು ಕುಡಿಸುತ್ತಾ ದಿನ ಕಳೆಯುತ್ತಿದ್ದೇವೆ. ಸರ್ಕಾರ ಕುರಿಗಾಹಿಗಳ ಸಂಕಷ್ಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು" ಎಂದು ಕುರಿಗಾಹಿ ಬಸಪ್ಪ ಕಸಬಾಲಿಂಗಸುಗೂರು ಮನವಿ ಮಾಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆಗಸ್ಟ್ 1ರಿಂದ 14ರ ವರೆಗೆ 44 ಮಿ.ಮೀ. ಮಳೆ ಬರಬೇಕಿತ್ತು. ಆದರೆ ಬರೀ 7 ಮಿ.ಮೀ. ಮಾತ್ರ ಮಳೆಯಾಗಿದೆ. ಇನ್ನು ಈ ವಾರದಲ್ಲಿ 25 ಮಳೆ ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 4.3 ಮಿಲಿ ಮೀಟರ್ ಮಳೆ ಬಂದಿದೆ. ಹೀಗಾಗಿ ಈ ತಿಂಗಳು ಶೇಕಡಾ 85ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಅಮರೇಗೌಡ ತಿಳಿಸಿದರು.












Click it and Unblock the Notifications